ನವದೆಹಲಿ: ಆರಂಭದಲ್ಲೇ ವಕೀಲ ಫಾಲಿ ನಾರಿಮನ್ ಕರ್ನಾಟಕದ ಪರ ವಾದ ಮಂಡನೆ ಮಾಡುವುದಿಲ್ಲ ಎಂದು ಹೇಳಿದರೂ ಕೊನೆಗೆ ರಾಜ್ಯ ಸರ್ಕಾರದ ಮನವೊಲಿಕೆಯಿಂದಾಗಿ ವಾದಿಸಲು ಒಪ್ಪಿಕೊಂಡರು. ಈ ಕಾರಣಕ್ಕೋ ಏನು ಗೊತ್ತಿಲ್ಲ ಇಂದು ಸುಪ್ರೀಂ ಕೋರ್ಟ್‍ನಲ್ಲಿ ನಾರಿಮನ್ ಬಹಳ ಗರಂ ಆಗಿಯೇ ವಾದ ಮಂಡಿಸಿದ್ದಾರೆ.
ಈ ಹಿಂದೆ ನೀವು 3, 6, 12, 15 ಸಾವಿರ ಕ್ಯೂಸೆಕ್ ನೀರು ಬಿಡಿ ಹೇಳಿದ್ದೀರಿ. ಯಾವ ಆಧಾರದ ಮೇಲೆ ಈ ಆದೇಶ ನೀಡಿದ್ದೀರಿ? ಈ ರೀತಿ ಆದೇಶವನ್ನು ಪೀಠ ಯಾಕೆ ನೀಡಿತು ಎನ್ನುವುದು ನನಗೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯೆ ಕೊಟ್ಟ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಂಕಗಣಿತದ ಆಧಾರದ ಮೇಲೆ ಆದೇಶಿಸಿಲಾಗಿದೆ ಎಂದರು. ಕೂಡಲೇ ವಕೀಲ ನಾರಿಮನ್, ಅಂಕಗಣಿತದ ಲೆಕ್ಕ ಮಾತ್ರ ಸಾಲದು, ವಾಸ್ತವದ ಲೆಕ್ಕಚಾರವೂ ಗೊತ್ತಿರಬೇಕು ಎಂದು ಪ್ರತ್ಯುತ್ತರ ನೀಡಿದರು.
ಇದಕ್ಕೂ ಮೊದಲು ನೀವು ಎಲ್ಲಾ ಆದೇಶದಲ್ಲೂ ನೀರು ಬಿಡಿ ಎಂದು ಆದೇಶ ನೀಡುತ್ತಿದ್ದರೆ ಪಾಲಿಸಲು ಸಾಧ್ಯವಿಲ್ಲ. ಈ ಬಾರಿ ನೀರು ಬಿಡಲು ಹೇಳಿ ಮತ್ತೊಮ್ಮೆ ನನ್ನನ್ನು ಮುಜುಗರಕ್ಕೀಡು ಮಾಡಬೇಡಿ. ನಮಗೆ ಸರಿಯಾಗಿ ವಾದ ಮಂಡಿಸಲು ಅವಕಾಶ ನೀಡಿ. ನಮ್ಮ ವಾದವನ್ನು ಆಲಿಸಿದ್ದರೆ ಇಷ್ಟೆಲ್ಲ ಸಮಸ್ಯೆಗಳೇ ಉದ್ಭವಿಸುತ್ತಿರಲಿಲ್ಲ ಎಂದು ಖಡಕ್ ಆಗಿಯೇ ಹೇಳಿದರು.
ನ್ಯಾಯಾಧಿಕರಣದ ಅಂತಿಮ ಆದೇಶ ಪ್ರಶ್ನಾರ್ಹವೇ ಎಂದು ನ್ಯಾ.ದೀಪಕ್ ಮಿಶ್ರಾ ಪ್ರಶ್ನಿಸಿದ್ದಕ್ಕೆ ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ. ನ್ಯಾಯಾಧಿಕರಣದ ಆದೇಶ ಸುಪ್ರೀಂಕೋರ್ಟ್‍ನಷ್ಟೇ ಮಹತ್ವದ್ದು. ಈ ಪ್ರಕರಣ ಇನ್ನೂ ತ್ರಿಸದಸ್ಯ ಪೀಠದ ಮುಂದೆ ಬಾಕಿ ಇದೆ ನಾರಿಮನ್ ಉತ್ತರಿಸಿದರು.
ಸೆಪ್ಟೆಂಬರ್ 20ರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನಾಲ್ಕು ವಾರದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಈ ವಿಚಾರಣೆ ವೇಳೆ ನಾರಿಮನ್, “ನಾನು ಈ ಕೋರ್ಟ್‍ನಲ್ಲಿ ಹಿರಿಯ ವಕೀಲ, ಯಾವುದೇ ಕಾರಣಕ್ಕೂ ತಾತ್ಕಾಲಿಕ ನೆಲೆಯಲ್ಲಿ ಮಧ್ಯಂತರ ಆದೇಶವನ್ನು ಪ್ರಕಟಿಸಬೇಡಿ ಎಂದು ನಾನು ಸಲಹೆ ನೀಡುತ್ತಿದ್ದೇನೆ. ತಾತ್ಕಾಲಿಕ ನೆಲೆಯಲ್ಲಿ ಮಧ್ಯಂತರ ಆದೇಶ ನೀಡುವುದೇ ಆದರೆ ಅದು ತಪ್ಪು ಎಂದು ನಾನು ಹೇಳುತ್ತಿದ್ದೇನೆ” ಎಂದು ಏರು ಧ್ವನಿಯಲ್ಲಿ ಹೇಳಿದ್ದರು. ಅಷ್ಟೇ ಅಲ್ಲದೇ “ನಾನು ಹೇಳಿದ್ದನ್ನು ಬೇಕಾದರೆ ನೀವು ಆದೇಶದಲ್ಲಿ ಬರೆಯಿರಿ” ಎಂದು ಜಡ್ಜ್ ಮುಂದೆ ಬೇಸರದಿಂದ ನುಡಿದಿದ್ದರು.