ನವದೆಹಲಿ: ಆರಂಭದಿಂದ ಕಳೆದ ವಿಚಾರಣೆಯವರೆಗೂ ಪ್ರತಿ ಬಾರಿ ಹಿನ್ನಡೆ ಅನುಭವಿಸುತ್ತಿದ್ದ ಕರ್ನಾಟಕಕ್ಕೆ ದಸರೆಗೆ ಗಿಫ್ಟ್ ಎನ್ನುವಂತೆ ಸುಪ್ರೀಂ ಕೋರ್ಟ್ ಕೇಂದ್ರ ರಚಿಸಿದ್ದ ತಾಂತ್ರಿಕ ಉನ್ನತಾಧಿಕಾರ ತಂಡಕ್ಕೆ ಅಸ್ತು ಎಂದಿದೆ.
ಕೇಂದ್ರ ಜಲ ಆಯೋಗದ ಮುಖ್ಯಸ್ಥ ಜಿ.ಎಸ್ ಝಾ ಈ ತಂಡದ ಮುಖ್ಯಸ್ಥರಾಗಿದ್ದು, ಜಲ ಆಯೋಗದ ಮುಖ್ಯ ಎಂಜಿನಿಯರ್ ಮಸೂದ್ ಹುಸೇನ್, ಆರ್.ಕೆ. ಗುಪ್ತಾ ಅವರು ಅಕ್ಟೋಬರ್ 7ರಿಂದ ಎರಡೂ ರಾಜ್ಯದ ಕಾವೇರಿ ಕೊಳ್ಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ.
ಅಟಾರ್ನಿ ಜನರಲ್ ಸೋಮವಾರ ಸಲ್ಲಿಸಿದ್ದ ಅಫಿಡವಿಟ್‍ನಲ್ಲಿ ತಾಂತ್ರಿಕ ಉನ್ನತಾಧಿಕಾರ ತಂಡದ ಬಗ್ಗೆ ಪ್ರಸ್ತಾಪಿಸಿ 10 ದಿನಗಳ ಕಾಲ ಅಧ್ಯಯನ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಈ ಪ್ರಸ್ತಾಪನ್ನು ವಿರೋಧಿಸಿದ ತಮಿಳುನಾಡು ವಕೀಲ ಶೇಖರ ನಾಫಡೆ, ರಾಜಕೀಯ ಕಾರಣಗಳಿಗಾಗಿ ಅರ್ಜಿ ಮಾರ್ಪಾಡು ಮಾಡಿ ಎಂದು ಕೇಂದ್ರ ವಾದಿಸುತ್ತಿದೆ. ತರಾತುರಿಯಲ್ಲಿ ಈ ಅರ್ಜಿ ವಿಚಾರಣೆ ನಡೆಸುವುದು ಬೇಡ ಎಂದು ವಾದಿಸಿದ್ದರು. ಆದರೆ ಇಂದು ಈ ಸುಪ್ರೀಂ ಕೋರ್ಟ್ ಕೇಂದ್ರ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ತಮಿಳುನಾಡಿಗೆ ಹಿನ್ನಡೆಯಾಗಿದೆ.
ತಾಂತ್ರಿಕ ಉನ್ನತಾಧಿಕಾರ ತಂಡದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ಮುಖ್ಯ ಎಂಜಿನಿಯರ್ ಇರುತ್ತಾರೆ. ಈ ತಂಡ ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಕೋರ್ಟ್‍ಗೆ ವರದಿ ನೀಡಲಿದೆ.