ಅತಿಯಾದ ಚಿಂತೆ, ಕಡಿಮೆ ನಿದ್ದೆ ಮಾಡುವುದು ಅಥವಾ ಕೆಲಸದ ಒತ್ತಡಗಳಿಂದ ಕಣ್ಣಿನ ಸುತ್ತ ಕಪ್ಪು ವರ್ತುಲ ಮೂಡುತ್ತದೆ. ಇದು ಹೆಚ್ಚುತ್ತಾ ಹೋದಂತೆ ಕಣ್ಣು ಒಳಗೆ ಹೋಗಿ ಖಾಯಿಲೆ ಬಂದವರಂತೆ ಮುಖ ಕಾಣುತ್ತದೆ. ಆದ್ರೆ ಡಾರ್ಕ್ ಸರ್ಕಲ್ಸ್ ಬಂದ ಮೇಲೆ ಹೆಗಪ್ಪಾ ಅದನ್ನ ಹೋಗಿಸೋದು ಅಂತ ಮತ್ತೆ ಚಿಂತೆ ಮಾಡಬೇಡಿ. ಅದಕ್ಕಾಗಿ ಇಲ್ಲಿದೆ 5 ಸುಲಭ ಟಿಪ್ಸ್
1. ರೋಸ್ವಾಟರ್
ಪ್ರತಿದಿನ ಮಲಗುವಾಗ ಹತ್ತಿಯ ಉಂಡೆಯಲ್ಲಿ ರೋಸ್ವಾಟರ್ ತೆಗೆದುಕೊಂಡು ಕಣ್ಣಿನ ಸುತ್ತ ಹಚ್ಚಿ. ಅಥವಾ ಮನೆಯಲ್ಲಿ ಬಿಡುವಿರುವಾಗ ರೋಸ್ವಾಟರ್ನಲ್ಲಿ ಅದ್ದಿದ ಹತ್ತಿಯ ಉಂಡೆಯನ್ನು 2 ನಿಮಿಷ ಫ್ರಿಡ್ಜ್ನಲ್ಲಿಟ್ಟು ನಂತರ ಕಣ್ಣಿನ ಮೇಲೆ ಇಟ್ಟುಕೊಂಡು ರಿಲ್ಯಾಕ್ಸ್ ಮಾಡಿ. ಡಾರ್ಕ್ ಸರ್ಕಲ್ಸ್ ಕಡಿಮೆಯಾದ ನಂತರವೂ ಪ್ರತಿದಿನ ಮಲಗುವ ಮುನ್ನ ಮುಖಕ್ಕೆ ರೋಸ್ವಾಟರ್ ಹಚ್ಚಬಹುದು.
2. ಬಾದಾಮಿ ಎಣ್ಣೆ
ಸ್ವಲ್ಪ ಬಾದಾಮಿ ಎಣ್ಣೆಯನ್ನು ಬೆರಳುಗಳಲ್ಲಿ ತೆಗೆದುಕೊಂಡು ಕಣ್ಣಿನ ಸುತ್ತ ನಿಧಾನವಾಗಿ ಮಸಾಜ್ ಮಾಡಿ. ಈ ರೀತಿ 10 ನಿಮಿಷ ಮಸಾಜ್ ಮಾಡಿ ನಂತರ ಸೋಪ್ ಹಚ್ಚದೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಅಥವಾ ರಾತ್ರಿ ಮಲಗುವಾಗ ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳಬಹುದು. ಈ ರೀತಿ 15 ದಿನಗಳವರೆಗೆ ಮಾಡಿದರೆ ಕಪ್ಪು ವರ್ತುಲ ಕಡಿಮೆಯಾಗೋದನ್ನ ಗಮನಿಸ್ತೀರ.
3. ಟೀ ಡಿಕಾಕ್ಷನ್
ಗ್ರೀನ್ ಟೀ ಅಥವಾ ಮಾಮೂಲಿ ಟೀ ಡಿಕಾಕ್ಷನ್ ತಯಾರಿಸಿ ಅದರಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಕಣ್ಣಿನ ಮೇಲೆ ಇಟ್ಟುಕೊಂಡು ರಿಲ್ಯಾಕ್ಸ್ ಮಾಡಿ. ಸಮಯ ಸಿಕ್ಕಾಗಲೆಲ್ಲಾ ಈ ರೀತಿ ಮಾಡುವುದರಿಂದ ಕಣ್ಣಿನ ಆಯಾಸ ಕಡಿಮೆಯಾಗಿ ಡಾರ್ಕ್ ಸರ್ಕಲ್ಸ್ ಕಡಿಮೆಯಾಗುತ್ತದೆ.
4. ಟೊಮೆಟೋ ಜ್ಯೂಸ್
1 ಚಮಚ ಟೊಮೆಟೋ ಹಣ್ಣಿನ ರಸಕ್ಕೆ 1 ಚಮಚ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಕಣ್ಣಿನ ಸುತ್ತ ಹಚ್ಚಿ. 10 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ ದಿನಕ್ಕೆ 2 ಬಾರಿಯಂತೆ ಮಾಡುತ್ತಾ ಹೋದ್ರೆ ಕ್ರಮೇಣವಾಗಿ ಕಪ್ಪು ವರ್ತುಲ ನಿವಾರಣೆಯಾಗುತ್ತದೆ.
5. ಆಲೂಗಡ್ಡೆ ರಸ
ಆಲೂಗಡ್ಡೆಯನ್ನು ರುಬ್ಬಿ ಅದರ ರಸ ಹಿಂಡಿಕೊಳ್ಳಿ. ಇದರಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಕಣ್ಣಿನ ಮೇಲೆ ಇಟ್ಟು 10 ನಿಮಿಷ ರಿಲ್ಯಾಕ್ಸ್ ಮಾಡಿ. ಇದೇ ರೀತಿ ಸೌತೇಕಾಯಿ ರಸವನ್ನು ಬಳಸಬಹುದು. ಈ ರೀತಿ 15 ದಿನಗಳವರೆಗೆ ಪ್ರತಿದಿನ ಮಾಡಬೇಕು.
The post ಡಾರ್ಕ್ ಸರ್ಕಲ್ಸ್ ನಿವಾರಣೆಗೆ ಇಲ್ಲಿದೆ 5 ಸಿಂಪಲ್ ಟಿಪ್ಸ್ appeared first on Kannada Public tv.