– ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್ ಇಲ್ಲಿದೆ
ಬೆಂಗಳೂರು: 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ ಸರ್ಕಾರದ 3 ವರ್ಷಗಳ ಸಾಧನೆಯ ಬಗ್ಗೆ ವಿವರಿಸಿದ್ರು. ಸಿಎಂ ಭಾಷಣದ ಹೈಲೈಟ್ಸ್ ಇಲ್ಲಿದೆ
ಭಾರತದ 70 ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸುಸಂದರ್ಭದಲ್ಲಿ ನಾಡಿನ ಎಲ್ಲಾ ಸೋದರ-ಸೋದರಿಯರಿಗೆ ತುಂಬು ಹೃದಯದ ಶುಭ ಕಾಮನೆಗಳು.
ನಾವಿಂದು ಅನುಭವಿಸುತ್ತಾ ಆನಂದಿಸುತ್ತಿರುವ ಸ್ವಾತಂತ್ರ್ಯ ನಿರಾಯಾಸವಾಗಿ ಪ್ರಾಪ್ತಿಯಾದುದಲ್ಲ, ಇದು ಬ್ರಿಟಿಷರ ದಯಾಭಿಕ್ಷೆಯೂ ಆಗಿರಲಿಲ್ಲ, 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹಿನ್ನಡೆ ಅನುಭವಿಸಿದ ನಂತರ ನಮ್ಮ ದೇಶಭಕ್ತ ನಾಯಕರು ಎಚ್ಚರಿಕೆಯಿಂದ ರೂಪಿಸಿ ಮುನ್ನಡೆಸಿದ ಹೋರಾಟದ ಪ್ರಯತ್ನದ ಫಲವೇ ನಮ್ಮ ಸ್ವಾತಂತ್ರ್ಯ. ಸಮಾನತೆಯ ತಳಹದಿಯ ಮೇಲೆ ಸಮಾಜ ನಿರ್ಮಾಣದ ಮೂಲಕ ಸಂವಿಧಾನದ ಆಶಯಗಳನ್ನು ಪ್ರಾಮಾಣಿಕವಾಗಿ ಈಡೇರಿಸುವುದೇ ದೇಶಪ್ರೇಮ. ಈ ಪುಣ್ಯದ ಕಾಯಕವನ್ನೇ ನಮ್ಮ ಸರ್ಕಾರ ಕಳೆದ ಮೂರು ವರ್ಷಗಳಿಂದ ಮಾಡುತ್ತಾ ಬಂದಿದೆ.
ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿದ್ದೇವೆ: ಮೂರು ವರ್ಷಗಳ ಅವಧಿಯಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡಿದ ಪ್ರಯತ್ನದ ಫಲ ಜನತಾ ಜನಾರ್ಧನರಾದ ನಿಮ್ಮ ಮುಂದಿದೆ. ಚುನಾವಣಾ ಕಾಲದಲ್ಲಿ ಪಕ್ಷದ ಪ್ರಣಾಳಿಕೆ ಮೂಲಕ ನೀಡಿದ್ದ ಭರವಸೆಗಳ ಪೈಕಿ ಮುಕ್ಕಾಲು ಪಾಲನ್ನು ಕಳೆದ ನಾಲ್ಕು ಮುಂಗಡ ಪತ್ರಗಳ ಮೂಲಕ ನಾವು ಈಡೇರಿಸಿದ್ದೇವೆ ಎಂದು ಹೇಳಿಕೊಳ್ಳುವ ಹೆಮ್ಮೆ ನಮ್ಮದು.
ಮಳೆಯ ಅಭಾವ: ನಮ್ಮದು ರೈತಪರ ಸರ್ಕಾರ ಎನ್ನುವುದು ಕೇವಲ ಘೋಷಣೆಯಲ್ಲ. ನುಡಿದಂತೆ ನಡೆದು ತೋರಿಸಿದ್ದೇವೆ. ಆದರೆ ಪ್ರಕೃತಿ ಎದುರು ಮಾನವ ಅಸಹಾಯಕ. ಕಳೆದ ಐದು ವರ್ಷಗಳಿಂದ ರಾಜ್ಯ ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವುದರಿಂದ ರಾಜ್ಯದ ರೈತರು ಕಷ್ಟದಲ್ಲಿದ್ದಾರೆ. ಕಳೆದ ವರ್ಷದ ಮಳೆ ಅಭಾವದಿಂದಾಗಿ ರಾಜ್ಯದ 176 ತಾಲ್ಲೂಕುಗಳ ಪೈಕಿ 136 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಯಿತು. ಇಂತಹ ಕಷ್ಟದ ಕಾಲದಲ್ಲಿ ಎಂದಿನಂತೆ ನೊಂದ ಜನತೆಯ ಜೊತೆ ಸರ್ಕಾರ ದೃಢವಾಗಿ ನಿಂತುಕೊಂಡಿತ್ತು. ನಾನೇ ಖುದ್ದಾಗಿ ಬರಪೀಡಿತ 18 ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದ್ದೇನೆ, ಜನರಿಗೆ ಕುಡಿಯುವ ನೀರು ಮತ್ತು ಉದ್ಯೋಗ, ಜಾನುವಾರುಗಳಿಗೆ ಗೋಶಾಲೆ, ಮೇವು ಮತ್ತು ಔಷಧಿ ಒದಗಿಸುವ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದೇನೆ.
ರೈತರಿಗೆ ನೆರವು: ಬರಗಾಲದ ಕಾರಣಕ್ಕಾಗಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಪಾವತಿಯನ್ನು ಒಂದು ವರ್ಷ ಮುಂದೂಡಲಾಗಿದೆ. ಅಲ್ಲದೆ, 2015 ರ ಸೆಪ್ಟೆಂಬರ್ 30 ರ ವರೆಗೆ ಬಾಕಿ ಇರುವ ಸಹಕಾರಿ ಸಂಘಗಳ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದರಿಂದ 2.07 ಲಕ್ಷ ರೈತರಿಗೆ 316.54 ಕೋಟಿ ರೂ. ನೆರವು ನೀಡಿದಂತಾಗಿದೆ. ಕಳೆದೆರಡು ವರ್ಷಗಳಲ್ಲಿ ರೈತರಿಗೆ ಕೊಡುವಂತಹ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಪ್ರಮಾಣ ಶೇಕಡಾ 50 ಕ್ಕಿಂತಲೂ ಹೆಚ್ಚಾಗಿದೆ. ಸುಮಾರು 1800 ಕೋಟಿ ರೂಪಾಯಿಗಳಷ್ಟು ಬಡ್ಡಿಯನ್ನು ಸರ್ಕಾರವೇ ಭರಿಸಿದೆ. ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಪಡೆದ ಸಾಲದ ಮೊತ್ತ 29 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಈ ಮೊತ್ತದಲ್ಲಿ ಅರ್ಧದಷ್ಟನ್ನಾದರೂ ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ಸಹಕಾರಿ ಸಂಘಗಳ ಮೂಲಕ ರೈತರು ಪಡೆದ ಸಾಲದ ಅರ್ಧದಷ್ಟನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ.
ಬಡವರಿಗೆ ವೈದ್ಯಕೀಯ ನೆರವು: ರಾಜ್ಯದ ಯಾವ ವ್ಯಕ್ತಿಯೂ ಚಿಕಿತ್ಸೆಯ ಕೊರತೆಯಿಂದ ನರಳುವಂತಾಗಬಾರದು ಎಂಬುದು ನಮ್ಮ ಸರ್ಕಾರದ ಸದಾಶಯವಾಗಿದೆ. ಕಳೆದ ಮೂರು ವರ್ಷಗಳಿಂದ ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಬಡತನದ ಕಾರಣಕ್ಕಾಗಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲಾಗದ 65 ಸಾವಿರ ರೋಗಿಗಳಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 200 ಕೋಟಿ ರೂ. ನೆರವು ನೀಡಲಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶಿಶು ಮರಣ ಪ್ರಮಾಣವನ್ನು ಸಾವಿರಕ್ಕೆ 38 ರಿಂದ 28 ಕ್ಕೆ ಇಳಿಸಿದ್ದೇವೆ. ಇದೇ ಅವಧಿಯಲ್ಲಿ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು ಸಾವಿರಕ್ಕೆ 37 ಇಳಿಸುವ ಮೂಲಕ ಮಿಲೇನಿಯಂನ ಗುರಿಯನ್ನು ಸಾಧಿಸಿದ್ದೇವೆ.
ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ಪ್ರತಿಯೊಂದು ಜಿಲ್ಲೆಯ ಒಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 57 ಡಯಾಲಿಸಿಸ್ ಘಟಕ ಸ್ಥಾಪಿಸಲಾಗಿದೆ. ಮೂತ್ರಪಿಂಡ ರೋಗದಿಂದ ನರಳುತ್ತಿರುವ ರೋಗಿಗಳಿಗೆ ನಿಯತವಾಗಿ ವಾರಕ್ಕೆ 2-3 ಬಾರಿ ಡಯಾಲಿಸಿಸ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಆಯುಷ್ ಇಲಾಖೆಯನ್ನು ಮತ್ತಷ್ಟು ಜನ-ಸ್ನೇಹಿ ಮಾಡಲು ಯೋಜಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಮಂಗಳೂರು, ಗದಗ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ನಗರಗಳಲ್ಲಿ 50 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಅಂತೆಯೇ, ಮೈಸೂರು ನಗರದಲ್ಲಿ 100-ಹಾಸಿಗೆಗಳ ಹೈ-ಟೆಕ್ ಪಂಚಕರ್ಮ ಆಸ್ಪತ್ರೆ ಹಾಗೂ 100-ಹಾಸಿಗೆಗಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು.
ಅನ್ನಭಾಗ್ಯ: ಈ ಯೋಜನೆಯಡಿ ಪ್ರತಿ ಫಲಾನುಭವಿಗೆ 1 ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ಕೊಡುವ ಹಾಗೂ ಬಡತನ ರೇಖೆಗಿಂತಲೂ ಕೆಳಗಿರುವ ಪಡಿತರ ಚೀಟಿ ಹೊಂದಿರುವವರಿಗೆ ರಿಯಾಯಿತಿ ದರದಲ್ಲಿ ಒಂದು ಕೆ ಜಿ ತೊಗರಿಬೇಳೆ ನೀಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ.
ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆ ರಾಜ್ಯದ 1.08 ಕೋಟಿ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ವರದಾನವಾಗಿದೆ. ವಾರಕ್ಕೆ 3 ದಿನ 150 ಮಿಲಿ ಲೀಟರ್ ಕೆನೆ-ಭರಿತ ಹಾಲು ವಿತರಿಸುತ್ತಿರುವ ಈ ಯೋಜನೆಯನ್ನು ವಾರಕ್ಕೆ ಐದು ದಿನಗಳ ಅವಧಿಗೆ ವಿಸ್ತರಿಸಲಾಗುವುದು.
ವಿದ್ಯಾರ್ಥಿಗಳಿಗೆ ಸಮವಸ್ತ್ರದ ಜೊತೆಗೆ ಶೂ, ಸಾಕ್ಸ್: ಮಕ್ಕಳ ಮನಸ್ಸಿನಲ್ಲಿ ಅಸಮಾನತೆ ಹಾಗೂ ತಾರತಮ್ಯದ ನೋವು ನುಸುಳಬಾರದು ಎಂಬ ಸದುದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10 ನೇ ತರಗತಿಯವರೆಗಿನ ಎಲ್ಲಾ ಮಕ್ಕಳಿಗೆ ಸಮವಸ್ತ್ರ ನೀಡುವುದರ ಜೊತೆಗೆ ಬೂಟು (ಷೂ) ಮತ್ತು ಕಾಲು ಚೀಲ (ಸಾಕ್ಸ್) ವಿತರಿಸುವ 113 ಕೋಟಿ ರೂ. ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಚಾಲನೆ ನೀಡಲಾಗಿದೆ.
ರಸ್ತೆಗಳ ಅಭಿವೃದ್ಧಿ: ರಾಜ್ಯದಲ್ಲಿ 8,927 ಕಿ.ಮೀ. ರಾಜ್ಯ ಹೆದ್ದಾರಿಗಳು ಮತ್ತು 17,163 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ, ನವೀಕರಣವನ್ನು ಪೂರ್ಣಗೊಳಿಸಲಾಗಿದೆ. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳ ಅಡಿಯಲ್ಲಿ 2,778 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 1,668 ಕಿ.ಮೀ. ಹೊಸ ರಾಷ್ಟ್ರೀಯ ಹೆದ್ದಾರಿಗಳ ಘೋಷಣೆಯಾಗಿದೆ. ಅಲ್ಲದೆ, 3800 ಕಿ.ಮೀ. 43 ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ ಪ್ರಮುಖ ರಸ್ತೆಗಳನ್ನು ಜೋಡಿಸುವ ಸೇತುವೆಗಳನ್ನು ಅಭಿವೃದ್ಧಿಪಡಿಸಲು 1,000 ಕೋಟಿ ರೂ. ಮೊತ್ತದಲ್ಲಿ ಯೋಜನೆ ರೂಪಿಸಲಾಗುತ್ತಿದೆ.
ಮನೆಗಳ ನಿರ್ಮಾಣ: ಗುಡಿಸಲು ಮುಕ್ತ ಕರ್ನಾಟಕದ ಕನಸು ನನಸುಗೊಳಿಸುವಲ್ಲಿ ನಮ್ಮ ಸರ್ಕಾರ ಯಶಸ್ಸಿನ ಹಾದಿಯಲ್ಲಿದೆ. ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಬೇಕೆಂಬುದು ನಮ್ಮ ಗುರಿಯಾಗಿತ್ತು. ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರ 8.5 ಲಕ್ಷ ಮನೆಗಳನ್ನು ನಿರ್ಮಿಸಿ ದಾಖಲೆ ಮಾಡಿದೆ. ಇದೇ ಅವಧಿಯಲ್ಲಿ 32 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ. ಇದಕ್ಕಾಗಿ ವೆಚ್ಚ ಮಾಡಿರುವ ಹಣ 7540 ಕೋಟಿ ರೂಪಾಯಿ. ಆಶ್ರಯ ಯೋಜನೆಯಡಿ ಹಿಂದಿನ ವರ್ಷಗಳಲ್ಲಿ 10.84 ಲಕ್ಷ ಫಲಾನುಭವಿಗಳಿಗೆ ನೀಡಲಾಗಿದ್ದ 1458 ಕೋಟಿ ರೂ ಸಾಲ ಹಾಗೂ 1030 ಕೋಟಿ ರೂ ಬಡ್ಡಿ ಸೇರಿದಂತೆ 2488 ಕೋಟಿ ರೂ ಮನ್ನಾ ಮಾಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 6 ಲಕ್ಷ ಮನೆಗಳ ನಿರ್ಮಾಣ ಹಾಗೂ 40 ಸಾವಿರ ನಿವೇಶನಗಳನ್ನು ಹಂಚಲು ಗುರಿ ಹೊಂದಲಾಗಿದೆ. ಇದರಲ್ಲಿ ಡಾ ಬಿ. ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 1,60,000 ಮನೆಗಳು ಹಾಗೂ ನಗರ ಪ್ರದೇಶದಲ್ಲಿ 90,000 ಮನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿತರಿಸುವ ಗುರಿ ಹೊಂದಲಾಗಿದೆ
ವಿಶೇಷ ವಸತಿ ಯೋಜನೆಯನ್ನು ದೇವರಾಜ ಅರಸು ವಸತಿ ಯೋಜನೆ ಎಂದು ಮರು ನಾಮಕರಣ ಮಾಡಲಾಗಿದೆ. ಈ ಯೋಜನೆಯಡಿ 14 ವಿಶೇಷ ವರ್ಗದವರಿಗಾಗಿ 20 ಸಾವಿರ ಮನೆಗಳನ್ನು ನಿರ್ಮಿಸಿ ವಿತರಿಸುವ ಗುರಿ ನಿಗದಿಪಡಿಸಲಾಗಿದೆ.
ಪೌರ ಕಾರ್ಮಿಕರಿಗೆ ಗೃಹ ಭಾಗ್ಯ : ಈ ಯೋಜನೆಯಲ್ಲಿ ಪ್ರತಿ ಮನೆಯ ನಿರ್ಮಾಣದ ಗರಿಷ್ಠ ಘಟಕ ವೆಚ್ಚ 7.5 ಲಕ್ಷ ರೂ. ನಿಗದಿಪಡಿಸಲಾಗಿದೆ. ಇದರಲ್ಲಿ ಫಲಾನುಭವಿಗೆ ಶೇಕಡಾ 80 ರಷ್ಟು ಅಂದರೆ 6 ಲಕ್ಷ ರೂ ಅನುದಾನ ನೀಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಪೌರ ಕಾರ್ಮಿಕರಿಗೆ ಈ ಯೋಜನೆಯ ಅಡಿಯಲ್ಲಿ 4500 ವಸತಿ ಗೃಹಗಳನ್ನು ನಿರ್ಮಿಸಿಕೊಡಲಾಗುವುದು.
ವಿದ್ಯುತ್ ಉತ್ಪಾದನೆ: ಕಳೆದ ಮೂರು ವರ್ಷಗಳ ಅವಧಿಯಲ್ಲಿ 1,333.85 ಮೆಗಾ ವ್ಯಾಟ್ನಷ್ಟು ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೆಚ್ಚಾಗಿದೆ. ಇದರಲ್ಲಿ ಪರಿಸರ-ಸ್ನೇಹಿ ಪರ್ಯಾಯ ಇಂಧನ ಮೂಲಗಳಿಂದ 365.85 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸೇರ್ಪಡೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಯರಮರಸ್ ಘಟಕ-1 ಹಾಗೂ ಘಟಕ-2 ರಿಂದ ಒಟ್ಟಾರೆ 1600 ಮೆಗಾ ವ್ಯಾಟ್ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಯಲಹಂಕದಲ್ಲಿ 370 ಮೆಗಾ ವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಅಲ್ಲದೆ, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ 12,000 ಎಕರೆ ಪ್ರದೆಶದಲ್ಲಿ 2000 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ಉದ್ಯಾನ (ಸೋಲಾರ್ ಪಾರ್ಕ್) ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಫಸ್ಟ್ : ಕೇಂದ್ರ ಸರ್ಕಾರವೇ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳ ಪ್ರಕಾರ ಪ್ರಸಕ್ತ ವರ್ಷದ ಜನವರಿ ತಿಂಗಳಿನಿಂದ ಜೂನ್ ವರೆಗಿನ ಅವಧಿಯಲ್ಲಿ 67,757 ಕೋಟಿ ರೂಪಾಯಿ ಬಂಡವಾಳವು ರಾಜ್ಯದಲ್ಲಿ ಹೂಡಿಕೆಯಾಗಿ, ಇಡೀ ದೇಶದಲ್ಲಿಯೇ ನಮ್ಮ ಕರ್ನಾಟಕವು ಮೊದಲ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ಆಯೋಜಿಸಿದ್ದ ”ಇನ್ವೆಸ್ಟ್ ಕರ್ನಾಟಕ 2016” ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ 1.77 ಲಕ್ಷ ಕೋಟಿ ರೂ ಬಂಡವಾಳ ಭರವಸೆಗಳ 1080 ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಇದರಿಂದ 4.82 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ, ಈ ಕಾರ್ಯಕ್ರಮದಲ್ಲಿ 122 ಯೋಜನೆಗಳ ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ”ಇನ್ವೆಸ್ಟ್ ಕರ್ನಾಟಕ ಫೆÇೀರಂ” ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
ಉಚಿತ ವೈಫೈ: ರಾಜ್ಯದ ಪ್ರಮುಖ ನಗರಗಳಲ್ಲಿ ಉಚಿತ ವೈ-ಫೈ ಹಾಟ್‍ಸ್ಪಾಟ್‍ಗಳನ್ನು ಹಾಗೂ ಎಲ್ಲಾ ಪಂಚಾಯತ್‍ಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು.
ನೀರಾವರಿ: ಕಾವೇರಿ ಹಾಗೂ ಕೃಷ್ಣಾ ಕೊಳ್ಳದ ಎಲ್ಲಾ ನೀರಾವರಿ ಯೋಜನೆಗಳಿಗಾಗಿ ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೆ 10,000 ಕೋಟಿ ರೂ ನಂತೆ 50,000 ಕೋಟಿ ರೂ ವೆಚ್ಚ ಮಾಡಬೇಕೆಂಬ ನಿರ್ಧಾರ ಕೈಗೊಂಡಿದ್ದೆವು. ಇದೀಗ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರವು ನೀರಾವರಿ ಯೋಜನೆಗಳಿಗೆ ಮಾಡುವ ವೆಚ್ಚ 50,000 ಕೋಟಿ ರೂ ಅಲ್ಲ, 60,000 ಕೋಟಿ ರೂ ತಲುಪುವ ನಿರೀಕ್ಷೆ ಇದೆ. ಇದು ರೈತರ ಬಗೆಗಿನ ನಮ್ಮ ಸರ್ಕಾರದ ಕಾಳಜಿ ಮತ್ತು ಬದ್ಧತೆಯನ್ನು ಬಿಂಬಿಸುತ್ತದೆ.
ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ವ್ಯಕ್ತಪಡಿಸಿದ ಒಮ್ಮತದ ಸಹಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯ ಸಂಪೂರ್ಣ ರಕ್ಷಣೆ ಮಾಡಲಾಗುವುದು. ಇದರಲ್ಲಿ ನಮ್ಮ ಸರ್ಕಾರ ಯಾವುದೇ ರೀತಿಯ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಅನಗತ್ಯ ಪ್ರಚೋದನೆ ಇಲ್ಲವೆ ಭಾವೋಧ್ವೇಗಕ್ಕೆ ಒಳಗಾಗದೆ ಸರ್ಕಾರದ ಮೇಲೆ ಭರವಸೆ ಇಟ್ಟು ಸಹಕರಿಸಬೇಕೆಂಬುದೇ ರಾಜ್ಯದ ಜನತೆಯಲ್ಲಿ ನನ್ನ ಕಳಕಳಿಯ ಪ್ರಾರ್ಥನೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಿದೆ. ಈ ಯೋಜನೆಯ ಉಪ ಯೋಜನೆಗಳಾದ ಮುಳವಾಡ, ಕೊಪ್ಪಳ, ಮಲ್ಲಾಬಾದ್, ರಾಂಪುರ, ಚಿಮ್ಮಲಗಿ, ಇಂಡಿ, ಏತ ನೀರಾವರಿ ಯೋಜನೆಗಳು, ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಮತ್ತು ಹೆರ್ಕಲ್ ಏತ ನೀರಾವರಿ ಯೋಜನೆಗಳು ಅನುಷ್ಠಾನದ ಹಾದಿಯಲ್ಲಿವೆ. ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು 13 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಭರದಿಂದ ಸಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯ ಅಂದಾಜು ಮೊತ್ತವನ್ನು 5768 ಕೋಟಿ ರೂ. ಗಳಿಗೆ ಪರಿಷ್ಕರಿಸಿ ಒಟ್ಟು 2.65 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ.
ಆಲಮಟ್ಟಿ ಆಣೆಕಟ್ಟನ್ನು 524.25 ಮೀಟರ್ಗೆ ಏರಿಸುವ ಉದ್ದೇಶಕ್ಕಾಗಿ ಮುಳುಗಡೆ ಪ್ರದೇಶದ ಭೂ ಸ್ವಾಧೀನ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳನ್ನು ಚುರುಕುಗೊಳಿಸಲು ಉನ್ನತಮಟ್ಟದ ಸಮಿತಿ ಮತ್ತು ಕ್ರಿಯಾ ಯೋಜನೆ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ.
ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಸಮುದ್ರ ಸೇರುವ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಂಡು ಮೇಕೆದಾಟು ಸಮೀಪ ಕಾವೇರಿ ನದಿಗೆ ಸಮತೋಲನ ಜಲಾಶಯವನ್ನು ನಿರ್ಮಿಸಲು 5912 ಕೋಟಿಗಳಿಗೆ ರೂ. ಸಂಕ್ಷಿಪ್ತ ಯೋಜನಾ ವರದಿಯನ್ನು ತಯಾರಿಸಲಾಗಿದೆ. ಮೇಕೆದಾಟು ಯೋಜನೆಯಿಂದ 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಜೊತೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುತ್ತದೆ.
ಕಾವೇರಿ ನೀರಾವರಿ ನಿಗಮವು ಕೆರೆ ತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮುಂದಿನ ಎರಡು ವರ್ಷಗಳಲ್ಲಿ 1002 ಕೋಟಿ ರೂ. ಅಂದಾಜು ಮೊತ್ತದ 12 ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದರಲ್ಲಿ ತುಮಕೂರು ಜಿಲ್ಲೆಯಲ್ಲಿ ಐದು ಕೆರೆಗಳು, ಚಾಮರಾಜನಗರ ಜಿಲ್ಲೆಯ 24 ಕೆರೆಗಳು, ರಾಮನಗರ ಜಿಲ್ಲೆಯ 167 ಕೆರೆಗಳು, ಹಾಸನ ಜಿಲ್ಲೆಯ 53 ಕೆರೆಗಳು, ಮೈಸೂರು ಜಿಲ್ಲೆಯ 181 ಕೆರೆಗಳೂ ಸೇರಿದಂತೆ ಒಟ್ಟಾರೆ 430 ಕೆರೆಗಳಿಗೆ ನೀರನ್ನು ತುಂಬಿಸಿ 341 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಯೋಜಿಸಲಾಗಿದೆ.
ಸಣ್ಣ ನೀರಾವರಿ ಯೋಜನೆಗಳ ಮೂಲಕ ಕಳೆದ 3 ವರ್ಷಗಳಲ್ಲಿ 99,540 ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ನೀರಾವರಿ ಸೌಲಭ್ಯವನ್ನು ಸೃಜಿಸಲಾಗಿದೆ. ಕೆರೆ ಅಭಿವೃದ್ಧಿ-ನಾಡಿನ ಶ್ರೇಯೋಭಿವೃದ್ಧಿ ಕಾರ್ಯಕ್ರಮದಡಿ ಗುರುತಿಸಲಾಗಿದ್ದ 104 ಕೆರೆಗಳ ಪೈಕಿ 92 ಕೆರೆಗಳ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ.
ಕೊಳಚೆ ನೀರು ಸಂಸ್ಕರಣೆ: ಬೆಂಗಳೂರು ನಗರದ ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಿ ಚಿಕ್ಕಬಳ್ಳಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಐದು ಕೆರೆಗಳು ಹಾಗೂ ಕೋಲಾರ ಜಿಲ್ಲೆಯ 121 ಕೆರೆಗಳು ಒಳಗೊಂಡಂತೆ ಒಟ್ಟು 126 ಕೆರೆಗಳಿಗೆ ನೀರು ತುಂಬಿಸುವ 1280 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸುಮಾರು 60 ಕೆರೆಗಳಿಗೆ ದಕ್ಷಿಣ ಪಿನಾಕಿನಿ ನದಿಗೆ ಹರಿಯುತ್ತಿರುವ ಬೆಂಗಳೂರು ನಗರದ ಸಂಸ್ಕರಿಸಿದ ಕೊಳಚೆ ನೀರನ್ನು ತುಂಬಿಸಲು ಮುತ್ತಸಂದ್ರ ಗ್ರಾಮದ ಸಮೀಪ 240 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಯ್ದ ಕೆರೆಗಳಿಗೆ ಹೆಬ್ಬಾಳ ಕಣಿವೆತಿಂದ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಿ ತುಂಬಿಸುವ 883.54 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಿಂದ ಅಂತರ್ಜಲ ಮಟ್ಟವು ಅಭಿವೃದ್ಧಿ ಹೊಂದುವುದರೊಂದಿಗೆ ಜಲಮೂಲಗಳ ಲಭ್ಯತೆಗೆ ಅನುಕೂಲಕರವಾಗುತ್ತದೆ.
ರಾಜ್ಯದ ಪಶ್ಚಿಮ ವಾಹಿನಿ ಯೋಜನೆಯ ಪ್ರಸ್ತಾವನೆಯು ಪರಿಶೀಲನಾ ಹಂತದಲ್ಲಿದೆ. ಈ ಯೋಜನೆಯಡಿಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಿಂಡಿ ಆಣೆಕಟ್ಟುಗಳನ್ನು ನಿರ್ಮಾಣ ಮಾಡುವುದು ಮತ್ತು ಉಪ್ಪು ನೀರಿನ ತಡೆಗೊಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
ಕುಡಿಯುವ ನೀರು: ನಮ್ಮ ಸರ್ಕಾರ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪಿಸುವ ಕ್ರಾಂತಿಕಾರಕ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಶುದ್ಧ ಕುಡಿಯುವ ನೀರನ್ನು ಗ್ರಾಮೀಣ ಜನರಿಗೆ ತಲುಪಿಸಲು ಕಳೆದ ಮೂರು ವರ್ಷಗಳಲ್ಲಿ 6260 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 5,000 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುವುದು. ರಾಜ್ಯದ ಗ್ರಾಮೀಣ ಪ್ರದೇಶದ 60,220 ಜನವಸತಿಗಳಲ್ಲಿನ 401.10 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕಳೆದ ಮೂರು ವರ್ಷಗಳಲ್ಲಿ 9189 ಕಿರು ನೀರು ಸರಬರಾಜು ಯೋಜನೆ, 6994 ಸಂಖ್ಯೆ ಕೊಳವೆ ನೀರು ಸರಬರಾಜು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಶಾಶ್ವತ ಶುದ್ಧ ಕುಡಿಯುವ ನೀರು ಒದಗಿಸಲು 118 ಬಹು ಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಪೂರ್ಣಗೊಳಿಸಿ 21.45 ಲಕ್ಷ ಜನಸಂಖ್ಯೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 150 ಬಹು ಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಪೂರ್ಣಗೊಳಿಸಿ 40 ಲಕ್ಷ ಜನಸಂಖ್ಯೆಗೆ ಶಾಶ್ವತ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು.
ಶೌಚಾಲಯಗಳ ನಿರ್ಮಾಣ: ಮನೆಗೊಂದು ಶೌಚಾಲಯ ರಾಜ್ಯ ಸರ್ಕಾರದ ಧ್ಯೇಯವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 21 ಲಕ್ಷ ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 21 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣಗೊಳಿಸಲಾಗುವುದು. ಅಕ್ಟೋಬರ್ 2, 2018 ರ ವೇಳೆಗೆ ರಾಜ್ಯದ ಗ್ರಾಮೀಣ ಪ್ರದೇಶವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಮಾಡುವ ಗುರಿಗೆ ಸರ್ಕಾರ ಕಟಿಬದ್ಧವಾಗಿದೆ.
ಪಂಚಾಯತ್‍ಗಳಲ್ಲಿ ಸೇವಾ ಕೇಂದ್ರ ಸ್ಥಾಪನೆ: ಪ್ರಸಕ್ತ ಸಾಲಿನಲ್ಲಿ ಪಂಚಾಯತ್-100 ಯೋಜನೆಯಡಿ ರಾಜ್ಯದ ಆಯ್ದ 2000 ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಜನರಿಗೆ ದಿನನಿತ್ಯ ಅಗತ್ಯವಿರುವ 100 ಸೇವೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಉಳಿದ ಗ್ರಾಮ ಪಂಚಾಯತ್‍ಗಳಿಗೂ ಈ ಸೇವೆಗಳನ್ನು ವಿಸ್ತರಿಸಲು ಅಗತ್ಯ ಕ್ರಮವಹಿಸಲಾಗಿದೆ.
ಅಂಬೇಡ್ಕರ್ ವಿಚಾರಧಾರೆ: ಸಂವಿಧಾನ ಶಿಲ್ಪಿ ಡಾ ಬಿ. ಆರ್. ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆಯ ಸಂಸ್ಮರಣೆಯಲ್ಲಿ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸರ್ಕಾರದ ಪ್ರಮುಖ ಯೋಜನೆಗಳಿಗೆ ಭಾರತ ರತ್ನ ಡಾ ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಆಶಯಗಳೇ ಸ್ಫೂರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಡಾ ಅಂಬೇಡ್ಕರ್ ಅವರ ವಿಚಾರಧಾರೆ ಕುರಿತ ಅಂತಾರಾಷ್ಟ್ರೀಯ ಮಟ್ಟದ ವಿಚಾರಣ ಸಂಕಿರಣವನ್ನು ಅರ್ಥಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದೆ.
ಎಸ್‍ಸಿ ಎಸ್‍ಟಿ ಜನಾಂಗದ ಅಭಿವೃದ್ಧಿ: ಅವಕಾಶ ವಂಚಿತ ಸಮುದಾಯಗಳಿಗೆ ಸಂಪತ್ತು ಮತ್ತು ಅವಕಾಶಗಳಲ್ಲಿ ಸಮಪಾಲು ನೀಡುವ ಉದ್ದೇಶದಿಂದ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯಿದೆ 2013 ರ ಜಾರಿ ನಮ್ಮ ಸರ್ಕಾರದ ಸಾಧನೆಯ ಪ್ರಮುಖ ಮೈಲಿಗಲ್ಲು. ಈ ಕಾಯ್ದೆಯಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಖರ್ಚು ಮಾಡುವ ಹಣ ದುಪ್ಪಟ್ಟಾಗಿದೆ. 2013-14 ರ ಬಜೆಟ್‍ನಲ್ಲಿ 8616 ಕೋಟಿ ರೂ. ನಿಗದಿಯಾಗಿದ್ದರೆ 2014-15 ನೇ ಸಾಲಿನಲ್ಲಿ ಇದು 15,834 ಕೋಟಿ ರೂಪಾಯಿಯಾಗಿತ್ತು. 2015-16 ನೇ ಸಾಲಿಗಾಗಿ 16,356 ಕೋಟಿ ರೂ ಗಳನ್ನು ಬಜೆಟ್ನಲ್ಲಿ ನಿಗದಿ ಮಾಡಿದೆ. ಒಟ್ಟಾರೆಯಾಗಿ ಕಳೆದ ಮೂರು ವರ್ಷಗಳಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳಡಿ ಎಲ್ಲಾ ಅಭಿವೃದ್ಧಿ ಇಲಾಖೆಗಳಿಗೆ 40,800 ಕೋಟಿ ರೂ. ಗಳನ್ನು ಸರ್ಕಾರ ಒದಗಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ 145 ವಸತಿ ಶಾಲೆಗಳನ್ನು ಮತ್ತು 100 ಹಾಸ್ಟೆಲ್‍ಗಳನ್ನು ತೆರೆಯಲಾಗಿದೆ. ಇದರಿಂದಾಗಿ 35 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಭೂ ಒಡೆತನ ಯೋಜನೆಯಡಿ 2261 ಎಕರೆ ಜಮೀನನ್ನು ಖರೀದಿಸಿ ಕೊಡಲಾಗಿದೆ. ಕಳೆದ 3 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 24 ಲಕ್ಷ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ 225 ಕೋಟಿ ರೂ. ಶಿಷ್ಯವೇತನ ನೀಡಲಾಗಿದೆ.
The post 70ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸರ್ಕಾರದ ಸಾಧನೆ ಬಗ್ಗೆ ವಿವರಿಸಿದ ಸಿಎಂ appeared first on Kannada Public tv.