ಚೆನ್ನೈ: ಪತ್ನಿ ಜೊತೆ ಜಗಳವಾಡುತ್ತಾ ಸಿಟ್ಟಿಗೆದ್ದ ಓಲಾ ಕಾರು ಚಾಲಕನೊಬ್ಬ ಚೆನ್ನೈನ ನಂದನಂ ಎಂಬಲ್ಲಿ ಪತ್ನಿ ಹಾಗೂ ಮಕ್ಕಳಿಗೆ ಕಾರಿನಲ್ಲೇ ಬೆಂಕಿ ಹಚ್ಚಿದ್ದಾನೆ. ಮಕ್ಕಳನ್ನು ಬಚಾವ್ ಮಾಡಿದ ತಾಯಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಿದ್ದೇನು..?: ಭಾನುವಾರ ಮಧ್ಯಾಹ್ನ 28 ವರ್ಷದ ಪ್ರೇಮಾ ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ಪತಿ ನಾಗರಾಜ್ ಚಲಾಯಿಸುವ ಓಲಾ ಕ್ಯಾಬ್‍ನಲ್ಲಿ ಇಬ್ಬರು ಮುದ್ದಾದ ಮಕ್ಕಳ ಜೊತೆ ಹೊರಟಿದ್ದರು. ದಾರಿ ಮಧ್ಯೆ ಪತ್ನಿ ಹಾಗೂ ಪತಿ ಮಧ್ಯೆ ವಾಗ್ವಾದ ಆರಂಭವಾಗಿದೆ. ಈ ವೇಳೆ ಪ್ರೇಮಾ ಕಾರಿನಲ್ಲಿ ಪತಿ ಎಮರ್ಜೆನ್ಸಿಗೆಂದು ಇಟ್ಟಿದ್ದ ಪೆಟ್ರೋಲನ್ನು ತನ್ನ ಮೈಮೇಲೆ ಸುರಿದುಕೊಂಡು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಾರೆ.
ತಕ್ಷಣ ಆಕೆಯ ಪತಿ 30 ವರ್ಷದ ನಾಗರಾಜ್ ಕಾರು ನಿಲ್ಲಿಸಿ ಕಾರಿನಿಂದ ಇಳಿದಿದ್ದಾನೆ. ಬಳಿಕ ಆಕೆಯ ಮೈಗೆ ಬೆಂಕಿ ಹಚ್ಚಿದ್ದಾನೆ. ಪ್ರೇಮಾ ತಕ್ಷಣ ತನ್ನ ಇಬ್ಬರು ಮಕ್ಕಳನ್ನು ಕಾರಿನ ವಿಂಡೋ ಮೂಲಕ ಹೊರಗೆ ಹಾಕಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸಮಯ ಮೀರಿ ಹೋಗಿತ್ತು. 4 ವರ್ಷದ ಮಗನ ಮೈಗೂ ಬೆಂಕಿ ತಗುಲಿತ್ತು. ಬೆಂಕಿಯ ಕೆನ್ನಾಲಿಗೆ ಆಕೆಯ ಇಡೀ ದೇಹಕ್ಕೆ ವ್ಯಾಪಿಸಿತ್ತು. ಇದೇ ವೇಳೆ ಅಲ್ಲಿಗಾಗಮಿಸಿದ ಸ್ಥಳೀಯರು ಪ್ರೇಮಾರನ್ನು ಕಿಲ್‍ಪಾಕ್ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದಾರೆ. ಇಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಪ್ರೇಮಾ ಸಾವನ್ನಪ್ಪಿದ್ದಾಳೆ. ಇದಕ್ಕೂ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ ಪ್ರೇಮಾ ತನ್ನ ಪತಿ ನಾಗರಾಜ್ ನನ್ನ ಮೇಲೆ ಬೆಂಕಿ ಹಚ್ಚಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.
ಪೊಲೀಸರು ಹೇಳಿದ್ದೇನು?: ಪ್ರೇಮಾ ಹಾಗೂ ನಾಗರಾಜ್ ಮಧ್ಯೆ 5 ವರ್ಷದ ಹಿಂದೆ ಮದುವೆಯಾಗಿತ್ತು. ಅಷ್ಟರಲ್ಲೇ ಪ್ರೇಮಾಗೆ ಒಂದು ಮದುವೆಯಾಗಿತ್ತು, ಆಕೆಯ ಗಂಡ ಆಕೆಯನ್ನು ಬಿಟ್ಟು ಹೋಗಿದ್ದ. ನಿನ್ನೆ ಕಾರಿನಲ್ಲಿ ಪ್ರೇಮಾ ಮಕ್ಕಳ ಜೊತೆ ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದರು. ಇದೇ ವೇಳೆ ಪ್ರೇಮಾಗೆ ಪತಿ ನಾಗರಾಜ್ ಬೆಂಕಿ ಹಚ್ಚಿದ್ದಾನೆ.
ವೈದ್ಯರು ಹೇಳೋದೇನು?: ಗಂಭೀರ ಸ್ಥಿತಿಯಲ್ಲಿದ್ದ ಪ್ರೇಮಾರನ್ನು ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆಯ 4 ವರ್ಷದ ಮಗನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಆತನ ಸ್ಥಿತಿಯೂ ಗಂಭೀರವಾಗಿದೆ.
ಸೈದಾಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಗರಾಜ್‍ನನ್ನು ಬಂಧಿಸಿದ್ದಾರೆ.
The post ಸಾಯ್ತೀನಿ ಅಂತಾ ಪೆಟ್ರೋಲ್ ಸುರಿದ್ಳು ಹೆಂಡ್ತಿ: ಕಾರಲ್ಲೇ ಬೆಂಕಿ ಹಚ್ಚಿ ಕೊಂದ ಪತಿ! appeared first on Kannada Public tv.