ಚೆನ್ನೈ: ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ನೀಡಿದ್ದು ಸರಿಯಾಗಿದೆ ಎಂದು ಚೆನ್ನೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ನೀಡಿದ್ದು ಸರಿಯಲ್ಲ ಎಂದು ವಕೀಲ ಗಾಂಧಿ ಎಂಬವರು ಮದ್ರಾಸ್ ಹೈಕೋರ್ಟ್‍ನಲ್ಲಿ ತಕಾರರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ಮುಖ್ಯ ನ್ಯಾಯಾಧೀಶ ಸಂಜಯ್ ಕುಶಾನ್ ಕೌಲ್ ಮತ್ತು ನ್ಯಾ. ಮಾಧವನ್‍ರಿದ್ದ ದ್ವಿಸದಸ್ಯ ಪೀಠ, ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನೇ ವಜಾಗೊಳಿಸಿದೆ.
ಕೇಂದ್ರ ಸರ್ಕಾರ ತಜ್ಞರ ಸಮಿತಿ ನೀಡಿದ ವರದಿಯ ಮಾನದಂಡದ ಆಧಾರದಲ್ಲಿ ಕನ್ನಡ ಸೇರಿದಂತೆ ಉಳಿದ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ಹೀಗಾಗಿ ನ್ಯಾಯಾಲಯ ಮಧ್ಯಪ್ರವೇಶಿಸಿ ತಜ್ಞರು ನೀಡಿದ ವರದಿಗಿಂತಲೂ ಮತ್ತಷ್ಟು ಆಳವಾದ ಅಧ್ಯಯನಕ್ಕೆ ಹೋಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಉಳಿದ ಭಾಷೆಗಳಿಗೆ ಶಾಸ್ತ್ರಿಯ ಸ್ಥಾನಮಾನ ನೀಡಿದರೆ ತಮಿಳು ಭಾಷೆಯ ಗೌರವ ಕಡಿಮೆ ಆಗುತ್ತದೆ ಎನ್ನುವ ಅರ್ಜಿದಾದರ ವಾದವನ್ನು ಒಪ್ಪದ ನ್ಯಾಯಾಲಯ ಒಂದು ಭಾಷೆಯ ಅಭಿವೃದ್ಧಿಯಿಂದಾಗಿ ಮತ್ತೊಂದು ಭಾಷೆ ಪತನವಾಗುತ್ತದೆ ಎಂದು ಹೇಳಲು ಬರುವುದಿಲ್ಲ ಎಂದು ತಿಳಿಸಿದೆ.
ಸರ್ಕಾರ ನಿಗದಿಪಡಿಸಿದ ಮಾನದಂಡವನ್ನು ಪರಿಗಣಿಸದೇ ರಾಜಕೀಯ ಕಾರಣಗಳಿಗಾಗಿ ಕನ್ನಡ, ತೆಲುಗು ಭಾಷೆಗಳಿಗೆ ಶಾಸ್ತ್ರಿಯ ಸ್ಥಾನಮಾನದ ಗೌರವ ನೀಡಿದೆ. ಈ ರೀತಿಯ ಸ್ಥಾನಮಾನ ನೀಡಿದ ಕಾರಣ ತಮಿಳಿನ ಗೌರವ ಕಡಿಮೆ ಆಗುತ್ತದೆ. ಹೀಗಾಗಿ ಈ ಭಾಷೆಗಳಿಗೆ ನೀಡಿದ ಶಾಸ್ತ್ರಿಯ ಸ್ಥಾನಮಾನದ ಗೌರವವನ್ನು ರದ್ದುಪಡಿಸಬೇಕೆಂದು ವಕೀಲ ಗಾಂಧಿ ಮದ್ರಾಸ್ ಹೈಕೋರ್ಟ್‍ನಲ್ಲಿ 2008ರಲ್ಲಿ ಅರ್ಜಿ ಸಲ್ಲಿಸಿದ್ದರು. ಕರ್ನಾಟಕ ಪರ ವಕೀಲೆ ಸುಶೀಲ ವಾದ ಮಂಡಿಸಿದ್ದರು.
The post ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ಸರಿ: ಮದ್ರಾಸ್ ಹೈಕೋರ್ಟ್ appeared first on Kannada Public tv.