ಬೆಂಗಳೂರು: ರಾಜ ಕಾಲುವೆ ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ 16ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧ ಆವರಣದಲ್ಲಿನ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ರಾಜ ಕಾಲುವೆ ಮತ್ತು ಮಳೆ ನೀರು ಹರಿಯುವ ಚರಂಡಿಗಳ ಒತ್ತುವರಿದಾರರ ಪಟ್ಟಿಯಲ್ಲಿ ಬಿಲ್ಡರ್‍ಗಳು, ಡೆವಲಪರ್‍ಗಳು ಸೇರಿದಂತೆ ಯಾರೇ ಇರಲಿ, ಅವರು ಎಷ್ಟೇ ದೊಡ್ಡವರಾಗಿರಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರಭಾವಿಗಳ ಕಟ್ಟಡಗಳು ಇರುವ ಕಡೆಗಳಲ್ಲಿ ರಾಜ ಕಾಲುವೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆಧಾರ ಇದ್ದರೆ ಈ ರೀತಿ ಆರೋಪ ಮಾಡಬೇಕು. ಮನೆಗಳನ್ನು ಒಡೆಯಬಾರದು ಅಂತ ಅವರು ಹೇಳುತ್ತಾರೆ. ನಮಗೂ ಈ ಬಗ್ಗೆ ಕಾಳಜಿ ಇದೆ. ಮನೆ ಹೋಗತ್ತೆ ಅನ್ನೋದಾದ್ರೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಬಾರದೇ..? ಮನೆಗಳನ್ನು ಕಳೆದುಕೊಳ್ಳುವವರು ಕೆಡವಬೇಡಿ ಎನ್ನುತ್ತಾರೆ. ಸರ್ಕಾರದ ಮೇಲೆ ಆರೋಪವನ್ನೂ ಮಾಡುತ್ತಾರೆ. ಅದು ಸಹಜ ಅಂತ ಹೇಳಿದ್ರು.
ಅಧಿಕಾರಿಗಳ ವಿರುದ್ಧ ಕ್ರಮ: ಮನೆಗಳನ್ನು ಕಳೆದುಕೊಳ್ಳುವವರ ಬಗ್ಗೆ ನಮಗೂ ಕಾಳಜಿ ಇದೆ. ಆದರೆ, ಮಳೆ ಬಂದಾಗ ಆಗುವ ಆನಾಹುತದ ಬಗ್ಗೆಯೂ ಯೋಚಿಸಬೇಕಲ್ಲವೇ ಎಂದು ಪ್ರಶ್ನಿಸಿದ ಅವರು ಈ ವಿಚಾರದಲ್ಲಿ ಕೆಲ ತಪ್ಪುಗಳು ಅಧಿಕಾರಿಗಳಿಂದಲೂ ಆಗಿದೆ. ಈ ಬಗ್ಗೆ ಇಲ್ಲ ಎಂದು ಹೇಳಲಾಗದು. ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿಯೇ ತನಿಖೆಗೆ ಆದೇಶ ನೀಡಲಾಗಿದೆ ಎಂದರು.
ಒತ್ತುವರಿ ಮತ್ತು ಅಕ್ರಮ ನಿರ್ಮಾಣಗಳು ಹಿಂದಿನ ಸರ್ಕಾರಗಳ ಅವಧಿಯಲ್ಲಿ ಆಗಿರುವಂಥದ್ದು. ರಾಜ ಕಾಲುವೆಗಳ ಒತ್ತುವರಿ ತೆರವುಗೊಳಿಸದಿದ್ದರೆ ಬೆಂಗಳೂರು ಚೆನ್ನೈ ನಗರದಂತೆ ಆಗುತ್ತದೆ. ಜೊತೆಗೆ ಮಳೆ ಬಂದಾಗ ಸಮಸ್ಯೆ ಅನುಭವಿಸುವವರು ಸಾರ್ವಜನಿಕರೇ ಅಲ್ಲವೇ ಎಂದು ಅವರು ಪ್ರಶ್ನಿಸಿದರು.
ಮಾಧ್ಯಮದವರಲ್ಲೇ ಪ್ರಶ್ನೆ: ಒಳ್ಳೆಯ ಕೆಲಸ ಮಾಡುವಾಗ ಕೆಲವರಿಗೆ ತೊಂದರೆ ಆಗುತ್ತದೆ. ಆದರೆ ಹೆಚ್ಚು ಜನರಿಗೆ ಅನುಕೂಲ ಆಗುತ್ತದೆ. ಯಾರೇ ಆಗಲಿ, ಕಾನೂನು ರೀತ್ಯ ನಡೆದುಕೊಳ್ಳಬೇಕಾಗುತ್ತದೆ ಮಳೆ ನೀರು ಹರಿಯುವ ಚರಂಡಿ ಮೇಲೆ ಮನೆ ಕಟ್ಟಿಕೊಂಡಿರುವುದರಿಂದ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗತ್ತದೆ. ಆಗ ಬಿಬಿಎಂಪಿಯನ್ನು ದೂಷಿಸಲಾಗುತ್ತದೆ. ಈಗ ಮನೆಗಳನ್ನು ಒಡೆಯಲು ಮುಂದಾದರೆ ಟೀಕೆ ವ್ಯಕ್ತವಾಗುತ್ತದೆ. ಈ ರೀತಿ ಆದರೆ ಉತ್ತರಿಸುವುದು ಹೇಗೆ ಎಂದು ಮುಖ್ಯಮಂತ್ರಿಗಳು ಮಾಧ್ಯಮದವರಿಗೇ ಪ್ರಶ್ನೆ ಹಾಕಿದ್ರು.
ನಿಜಲಿಂಗಪ್ಪ ಸ್ಮರಣೆ: ನಿಜಲಿಂಗಪ್ಪ ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಣಿ, ಅವರ ಕಾಲ ರಾಜ್ಯದ ಅಭಿವೃದ್ಧಿ ಪರ್ವಕಾಲ ಅಂತ ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ರು. ವಿಧಾನಸೌಧದಲ್ಲಿ ನಿಜಲಿಂಗಪ್ಪನವರ ಹದಿನಾರನೇ ಪುಣ್ಯ ತಿಥಿ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಿದ್ದರಾಮಯ್ಯ, ನಿಜಲಿಂಗಪ್ಪ ಅವರು ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಣಿ. ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ಅವಧಿ ಅಭಿವೃದ್ಧಿ ಪರ್ವವಾಗಿತ್ತು. ನೀರಾವರಿಗೆ ಹೆಚ್ಚಿನ ಆದ್ಯತೆಯನ್ನು ಅವರ ನೀಡಿದ್ದರು. ಈ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಬೇಕು ಎಂಬ ಕನಸು ಕಂಡಿದ್ದರು. ಕರ್ನಾಟಕದ ಏಕೀಕರಣಕ್ಕೂ ಹೋರಾಟ ಮಾಡಿದ್ದರು ಎಂದು ಬಣ್ಣಿಸಿದರು.
The post ರಾಜಕಾಲುವೆ ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ: ಸಿಎಂ appeared first on Kannada Public tv.