ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರೆ ಇತ್ತ ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಮ್ಮ ನಿವಾಸ ಇರುವ ಸೆವೆನ್ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡರು.
ಸಿಎಂ ಸಿದ್ದರಾಮಯ್ಯನವರಿಗೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದು ಹೀಗೆ:
ಸಿದ್ದರಾಮಯ್ಯ: ಪಕ್ಷಕ್ಕೆ ಮುಜುಗುರವಾಗಬಾರದು ಎಂದು ಜಾರ್ಜ್ ರಾಜೀನಾಮೆ ಕೊಟ್ಟಿದ್ದಾರೆ
ಶೆಟ್ಟರ್: ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸಿಎಂ ಹಾಗೂ ಪರಮೇಶ್ವರ್ ಹೇಳಿದ್ದಾರೆ. ಜಾರ್ಜ್ ರಾಜಿನಾಮೆ ನೀಡಿದ್ದು ಅವರಿಗೆ ಆದ ಮುಜುಗರ ತಪ್ಪಿಸಿಕೊಳ್ಳುವ ಪ್ರಯತ್ನ. ಗಣಪತಿ ಆರೋಪ ಮಾಡಿದಾಗಲೇ ಅವರ ಡೈಯಿಂಗ್ ಡಿಕ್ಲರೇಷನ್ ನಲ್ಲಿ ನಮೂದು ಆದಾಗಲೇ ರಾಜಿನಾಮೆ ನೀಡಿದ್ದರೆ ಅದು ಜಾರ್ಜ್ ಅವರ ಒಳ್ಳೇತನವನ್ನು ತೋರಿಸುತ್ತಿತ್ತು. ಒಂದು ವೇಳೆ ಪಕ್ಷಕ್ಕೆ ಮುಜುಗರವಾಗಿದ್ದರೆ ಕೋರ್ಟ್ ಎಫ್‍ಐಆರ್ ಹಾಕಲು ಸೂಚಿಸುವ ಮೊದಲೇ ರಾಜೀನಾಮೆ ನೀಡಬೇಕಿತ್ತು.
ಸಿದ್ದರಾಮಯ್ಯ: ರೋಹಿತ್ ವೆಮುಲಾ ಆತ್ಮಹತ್ಯೆ ಕೇಸ್‍ನಲ್ಲಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಮೇಲೆ ಎಫ್‍ಐಆರ್ ಆಗಿದೆ. ಅವರು ರಾಜೀನಾಮೆ ಯಾಕೆ ನೀಡಿಲ್ಲ?
ಶೆಟ್ಟರ್: ಹೈದರಾಬಾದ್ ಕೇಂದ್ರೀಯ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಗೆ ಯಾರು ಹೊಣೆಗಾರರು ಅಲ್ಲ ಎಂದು ಬರೆದಿದ್ದರು. ಕೇಂದ್ರ ಮಂತ್ರಿ ಬಂಡಾರು ದತ್ತಾತ್ರೇಯ ಹೆಸರನ್ನು ಅವರು ಪತ್ರದಲ್ಲಿ ಬರೆದಿದಲ್ಲ. ಆದರಿಂದ ಆ ಪ್ರಕರಣ ಡೈಯಿಂಗ್ ಡಿಕ್ಲೇರಶನ್ ಆಗುವುದಿಲ್ಲ.
ಸಿದ್ದರಾಮಯ್ಯ: ಎನ್‍ಸಿಆರ್‍ಬಿ ಮಾಹಿತಿ ಪ್ರಕಾರ 2003ರಿಂದ 2013 ರವರೆಗೆ 122 ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಚ್‍ಡಿಕೆ ಸಿಎಂ ಆಗಿದ್ದಾಗ 24 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಶೆಟ್ಟರ್ ಸಿಎಂ ಆಗಿದ್ದಾಗ 17 ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದಾರೆ
ಶೆಟ್ಟರ್: ನಮ್ಮ ಸರ್ಕಾರದ ಅವಧಿಯಲ್ಲಿ ಯಾವ ಪೊಲೀಸರು ಸಚಿವರ, ಅಧಿಕಾರಿಗಳ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ ಅಸಮರ್ಥ ಮುಖ್ಯಮಂತ್ರಿ ಯಾಗಿದ್ದು ಸರ್ಕಾರದ ಮೇಲಿರುವ ಆರೋಪಕ್ಕೆ ನನ್ನ ಕಾಲದಲ್ಲಿ ಹಾಗಾಗಿತ್ತು ಹೀಗಾಗಿತ್ತು ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಮರ್ಥರಾಗಿದ್ದರೆ ಆ ವಿಚಾರವನ್ನು ಎತ್ತದೇ ಹೊರಗೆಡೆ ಇರುವ ಕೆಲಸ ಮಾಡಬೇಕಿತ್ತು. ಈಗ ಹಿಂದೆ ಆಗಿದ್ದನ್ನು ಮತ್ತೆ ಪ್ರಶ್ನೆ ಮಾಡುವುದು ಎಷ್ಟು ಸರಿ?
ಸಿದ್ದರಾಮಯ್ಯ: ಕೇಂದ್ರ ಸಚಿವರ ಮೇಲೆ ಹಲವು ಕೇಸ್‍ಗಳಿಗೆ. ಅವರ ರಾಜೀನಾಮೆ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುವುದಿಲ್ಲ?
ಶೆಟ್ಟರ್: ಕೇಂದ್ರ ಸಚಿವರ ಮೇಲೆ ಕೇಸ್‍ಗಳಿದ್ದರೆ. ರಾಜ್ಯಸಭೆ, ಲೋಕಸಭೆಯಲ್ಲಿ ಯಾಕೆ ಕಾಂಗ್ರೆಸ್ ನವರು ಧ್ವನಿ ಎತ್ತುತ್ತಿಲ್ಲ. ಅಲ್ಲೂ ಎತ್ತಬಹುದಲ್ಲ?
ಸಿದ್ದರಾಮಯ್ಯ: ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ದ ಆರೋಪ ಮಾಡಲು ಯಾವುದೇ ನೈತಿಕತೆ ಇಲ್ಲ
ಶೆಟ್ಟರ್: ಸರ್ಕಾರ ಜನರಲ್ ಆಗಿ ನ್ಯಾಯಾಂಗ ತನಿಖೆಗೆ ವಹಿಸಲಾದ ಕಾರಣ ಇದರಲ್ಲೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಒಂದು ಬಾರಿ ಕೋರ್ಟು ಎಫ್‍ಐಆರ್ ಹಾಕಿಸಿ ತನಿಖೆ ಆಗಬೇಕು ಎಂದು ಆದೇಶಿಸಿದಾಗ ನ್ಯಾಯಾಂಗ ಆಯೋಗವೇ ಅಸ್ತಿತ್ವ ಕಳೆದುಕೊಳ್ಳಲಿದೆ. ಹೀಗಾಗಿ ಸಿಬಿಐ ತನಿಖೆ ಆಗಬೇಕು. ಪ್ರತಿಪಕ್ಷಗಳ ಮೇಲೆ ವಿನಾಕಾರಣ ಈ ವಿಚಾರದಲ್ಲಿ ಆರೋಪ ಮಾಡುವುದು ಸರಿಯಲ್ಲ. ಈ ಆರೋಪದಿಂದ ತಪ್ಪು ಮುಚ್ಚಿ ಕೊಳ್ಳುವ ಯತ್ನವನ್ನು ಸರ್ಕಾರ ಮಾಡುತ್ತಿದೆ. ನಾವು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿಲ್ಲ. ನಾವು ಜನರ ಪರವಾಗಿ ಸದನದಲ್ಲಿ ಹೋರಾಡಿದ್ದೇವೆ. ಮೈಸೂರು ಡಿಸಿ ಶಿಖಾ ದೂರು ಕೊಟ್ರೂ ಮರಿಗೌಡ ಪೆÇಲೀಸರಿಗೆ ಸಿಗುತ್ತಿಲ್ಲ. ಮರಿಗೌಡರಿಗೆ ಸಿಎಂ ರಕ್ಷಣೆ ನೀಡುತ್ತಿದ್ದಾರೆ. ಸಿಎಂಗೆ ನೈತಿಕತೆ ಬಗ್ಗೆ ಮಾತನಾಡಲು ಅಧಿಕಾರವಿಲ್ಲ. ಇವತ್ತಿನ ಸರ್ಕಾರ ದಿವಾಳಿಯಾದ ಸರ್ಕಾರ.
ಸರ್ಕಾರದ ತಪ್ಪಿನಿಂದ, ಮೂರ್ಖತನದಿಂದ ಅಧಿವೇಶನವನ್ನು ಮುಂದೂಡಿದ್ದಾರೆ. ಕಳಸಾ ಬಂಡೂರಿ ವಿಚಾರದಲ್ಲಿ ನಮಗೂ ಕಾಳಜಿ ಇದೆ. ಗಣಪತಿ ಸಾವಿನ ವಿಚಾರ ಅವರ ಕುಟುಂಬಕ್ಕೆ ಮಾತ್ರ ಸೀಮಿತ ಅಲ್ಲ. ಅದು ಸಾಮಾಜಿಕವಾದ ಕಾರಣ ಹೋರಾಟ ಮಾಡುತ್ತಿದ್ದೇವೆ. ನಮಗೂ ಜವಾಬ್ದಾರಿಯಿದ್ದು ನಾವೂ ಕೂಡ ಹಲವು ವಿಚಾರಗಳನ್ನು ಚರ್ಚೆ ಮಾಡಲು ಸಿದ್ಧರಿದ್ದೇವು. ಮಡಿಕೇರಿಯಿಂದ ಮಾಡಲುದ್ದೇಶಿಸಿದ್ದ ಪಾದಯಾತ್ರೆ ಸದ್ಯಕ್ಕೆ ಇಲ್ಲ.
The post ಸಿಎಂ ಹೇಳಿದ ಪ್ರತಿ ಪಾಯಿಂಟ್‍ಗೆ ಶೆಟ್ಟರ್ ತಿರುಗೇಟು ನೀಡಿದ್ದು ಹೀಗೆ appeared first on Kannada Public tv.