ಈಗಿನ ಯುವಕ ಯುವತಿಯರಿಗೆ ಟ್ಯಾಟೂ ಹಾಕಿಸಿಕೊಳ್ಳೋ ಹುಚ್ಚು ಹೊಸದೇನಲ್ಲ. ಜೀವನ ಪೂರ್ತಿ ಚರ್ಮದ ಮೇಲೆ ಉಳಿಯೋ ಟ್ಯಾಟೂ ಹಾಕಿಸಿಕೊಳ್ಳೋ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನ ತಗೋಬೇಕು. ಆಸೆಪಟ್ಟು ಟ್ಯಾಟೂ ಹಾಕಿಸಿಕೊಂಡು ಆಮೇಲೆ ಕೊರಗೋದಕ್ಕಿಂತ ಮೊದಲೇ ಅದರ ಬಗ್ಗೆ ತಿಳ್ಕೊಂಡಿರೋದು ಒಳ್ಳೆಯದು. ಟ್ಯಾಟೂ ಹಾಕಿಸುವಾಗ ಏನೆಲ್ಲಾ ವಿಷಯಗಳನ್ನ ನೆನಪಿಡಬೇಕು ಅನ್ನೋದಕ್ಕೆ ಇಲ್ಲಿದೆ 5 ಟಿಪ್ಸ್.
1. ಟ್ಯಾಟೂ ಟೂಲ್/ಸೂಜಿ ಎಚ್ಚರವಿರಲಿ
ಟ್ಯಾಟೂ ಹಾಕೋ ಮುನ್ನ ನೀವು ಯಾವ ಆರ್ಟಿಸ್ಟ್ ಬಳಿ ಹಾಕಿಸುತ್ತೀರಾ ಅನ್ನೋದನ್ನ ಮೊದಲೇ ನಿರ್ಧರಿಸಿ. ಕಡಿಮೆ ಬೆಲೆಗೆ ಟ್ಯಾಟೂ ಹಾಕುತ್ತಾರೆ ಅಂತ ಸಿಕ್ಕಸಿಕ್ಕ ಆರ್ಟಿಸ್ಟ್ ಬಳಿಯೆಲ್ಲಾ ಹಾಕಿಸಿಕೊಳ್ಳಬೇಡಿ. ಟ್ಯಾಟೂ ಹಾಕುವ ಟೂಲ್‍ನಲ್ಲಿ ಬಳಸುವ ಸೂಜಿ ಯಾವಾಗಲೂ ಹೊಸದಾಗಿರಬೇಕು. ಬೇರೆಯವರಿಗೆ ಬಳಿಸಿದ ಸೂಜಿಯನ್ನೇ ಬಳಸಿದರೆ ಖಂಡಿತ ಅದಕ್ಕೆ ನೋ ಅನ್ನಿ.
2. ಟ್ಯಾಂಟೂ ಹಾಕಲು ಬಳಸುವ ಇಂಕ್
ಟ್ಯಾಟೂ ಟೂಲ್‍ನಂತೆಯೇ ಆರ್ಟಿಸ್ಟ್‍ಗಳು ಯಾವ ಗುಣಮಟ್ಟದ ಇಂಕ್ ಬಳಸ್ತಾರೆ ಅನ್ನೋದು ಕೂಡ ಮುಖ್ಯ. ಇಂಕ್‍ನಲ್ಲಿ ವಾಟರ್ ಬೇಸ್, ಗ್ಲಿಸರಿನ್ ಬೇಸ್ ಮತ್ತು ಪ್ರೊಪೆಲ್ಲಿನ್ ಗ್ಲೈಕೊಲ್ ಬೇಸ್ ಅಂತ ಮೂರು ವಿಧವಿರುತ್ತದೆ. ಗ್ಲಿಸರಿನ್ ಮತ್ತು ವಾಟರ್ ಬೇಸ್ ಇಂಕ್‍ಗಳು ಚರ್ಮಕ್ಕೆ ಹೊಂದುತ್ತವೆ. ಆದರೆ ಇಂಕ್‍ನಲ್ಲಿ ಲೆಡ್‍ನಂತಹ ವಿಷಕಾರಿ ಮೆಟಲ್ ಇದ್ದರೆ ಅದರಿಂದ ಚರ್ಮದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ನಿಮ್ಮ ಟ್ಯಾಟೂಗಾಗಿ ಬಳಸುತ್ತಿರುವ ಇಂಕ್ ಬಗ್ಗೆ ಆರ್ಟಿಸ್ಟ್‍ಗಳ ಬಳಿಯೇ ಕೇಳಿ ತಿಳಿದುಕೊಂಡು ಅನಂತರ ಮುಂದುವರೆಯಿರಿ.
3. ಯಾವ ಡಿಸೈನ್ ಹಾಕಿಸೋದಪ್ಪಾ!
ಈ ಪ್ರಶ್ನೆ ಅಥವಾ ಗೊಂದಲ ಮೊದಲ ಬಾರಿ ಟ್ಯಾಟೂ ಹಾಕಿಸೋರಿಗೆ ಇದ್ದೇ ಇರುತ್ತೆ. ಗೆಳೆಯ/ಗೆಳತಿ ಹಾಕಿಸಿದ ಟ್ಯಾಟೂ ಇಷ್ಟವಾಗಿ ಅದನ್ನೇ ಕಾಪಿ ಮಾಡೋರು ಬಹಳಷ್ಟು ಮಂದಿ. ಆದ್ರೆ ನಿಮ್ಮ ಟ್ಯಾಟೂ ಎಲ್ಲರಿಗಿಂತ ಭಿನ್ನವಾಗಿರಬೇಕು ಅಂತಾದರೆ ಮೊದಲ ನೀವು ಹಾಕಿಸಿಕೊಳ್ಳಬಯಸುವ ಡಿಸೈನನ್ನು ಮೊದಲೇ ಆರಿಸಿಕೊಳ್ಳಿ. ಏನೂ ಗೊತ್ತಿಲ್ಲದೆ ಆರ್ಟಿಸ್ಟ್ ಬಳಿ ಹೋಗಿ ಯಾವ ಡಿಸೈನ್ ಆದರೂ ಪರವಾಗಿಲ್ಲ ಅನ್ನಬೇಡಿ. ಇದಕ್ಕಾಗಿ ಆನ್‍ಲೈನ್‍ನಲ್ಲೇ ಟ್ಯಾಟೂ ಡಿಸೈನ್ ಟೆಸ್ಟ್ ಮಾಡಬಹುದು. ಇಲ್ಲವಾದರೆ ಟ್ಯಾಟೂ ಆರ್ಟಿಸ್ಟ್‍ಗಳ ಬಳಿ ಅನೇಕ ಮಾದರಿಯ ಡಿಸೈನ್‍ಗಳಿರುತ್ತದೆ. ಅದರಲ್ಲಿ ನಿಮಗೆ ಸೂಕ್ತವಾದುದನ್ನೇ ಆರಿಸಿಕೊಳ್ಳಿ.
4. ನಿಮ್ಮ ಟ್ಯಾಟೂ ಅರ್ಥ ಏನು?
ಸಾಮಾನ್ಯವಾಗಿ ಟ್ಯಾಟೂ ಹಾಕಿಸಿಕೊಳ್ಳೋವಾಗ ಅದರ ಅರ್ಥ ಏನಿರಬಹುದು ಅಂತ ಯಾರೂ ತಲೆಕೆಡಿಸಿಕೊಂಡಿರೋದಿಲ್ಲ. ಆದರೆ ಟ್ಯಾಟೂ ನೋಡಿದವರು ಅದರ ಅರ್ಥ ಏನು ಅಂತ ಕೇಳಿದಾಗ ತಬ್ಬಿಬ್ಬಾಗೋದಕ್ಕಿಂತ ಮೊದಲೇ ಟ್ಯಾಟೂ ಅರ್ಥವನ್ನ ತಿಳ್ಕೊಳ್ಳಿ. ಉದಾಹರಣೆಗೆ ನೀವು ಸ್ಟಾರ್ ಟ್ಯಾಟೂ ಹಾಕಿಸಿಕೊಂಡರೆ ಅದರ ಅರ್ಥ ಕತ್ತಲಿನ ವಿರುದ್ಧದ ಹೋರಾಟ ಅಂತ. ಚಿಟ್ಟೆಯ ಟ್ಯಾಟೂ ಬದಲಾವಣೆ ಅಥವಾ ರೂಪಾಂತರಕ್ಕೆ ಪ್ರತೀಕ. ಇನ್ನು ಹಾರುತ್ತಿರುವ ಪಕ್ಷಿಯ ಟ್ಯಾಟೂ ಸ್ವಾತಂತ್ರ್ಯ ಮತ್ತು ಆಶಾವಾದದ ಸಂಕೇತ. ನೀವು ಹಾಕಿಸಿಕೊಳ್ಳಬಯಸುವ ಟ್ಯಾಟೂವಿನ ಅರ್ಥ ಏನು ಅಂತ ತಿಳ್ಕೊಂಡಿದ್ರೆ ಯಾರಾದ್ರೂ ಅದರ ಅರ್ಥ ಕೇಳ್ದಾಗ ಖುಷಿಯಿಂದ ಹೇಳಬಹುದು.
5 ಟ್ಯಾಟೂ ಹಾಕಿಸಿದ ಮೇಲೆ ಏನು?
ಇಷ್ಟೆಲ್ಲಾ ಮುತುವರ್ಜಿ ವಹಿಸಿ, ಸಾಕಷ್ಟು ದುಡ್ಡು ಖರ್ಚು ಮಾಡಿ ಟ್ಯಾಟೂ ಹಾಕಿಸಿದ ಮೇಲೆ ಅದ್ರಿಂದ ಅಲರ್ಜಿಯಾದರೆ ಎಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ. ಟ್ಯಾಟೂ ಹಾಕಿಸಿದ ಮೇಲೆ ಒಂದೆರಡು ದಿನ ನೋವಾಗುವುದು ಸಹಜ. ನಿಮ್ಮ ದೇಹ ತುಂಬಾ ಸೂಕ್ಷ್ಮವಾಗಿದ್ದರೆ ಜ್ವರ ಕೂಡ ಬರಬಹುದು. ಆದರೆ ಅದಕ್ಕಾಗಿ ಚಿಂತಿಸೋ ಅಗತ್ಯ ಇಲ್ಲ. ಟ್ಯಾಟೂವಿನಿಂದ ಅಲರ್ಜಿ ಆಗಬಾರದು ಅಂದ್ರೆ ಟ್ಯಾಟೂ ಹಾಕಿಸಿದ ಮೇಲೆ ಬಿಸಿಲು ಅಥವಾ ಧೂಳಿನಲ್ಲಿ ಓಡಾಡಬೇಡಿ. ಟ್ಯಾಟೂ ಸ್ಟೋರ್‍ನಿಂದ ಮನೆಗೆ ಹೋಗುವಾಗ ಟ್ಯಾಟೂ ಹಾಕಿಸಿದ ದೇಹದ ಭಾಗವನ್ನು ಬ್ಯಾಂಡೇಜ್ ಬಟ್ಟೆಯಿಂದ ಮುಚ್ಚಿರಬೇಕು. ಟ್ಯಾಟೂ ಹಾಕಿಸಿದ ನಂತರದ 4 ದಿನಗಳ ಕಾಲ ಅದರ ಮೇಲೆ ನೀರು ಬೀಳದಂತೆ ಎಚ್ಚರಿಕೆ ವಹಿಸಬೇಕು. ಅಲರ್ಜಿ ಆಗುವುದನ್ನ ತಡೆಯಲು ದಿನಕ್ಕೆ ಎರಡು ಬಾರಿ ಟ್ಯಾಟೂ ಮೇಲೆ ಆ್ಯಂಟಿ ಬ್ಯಾಕ್ಟೀರಿಯಲ್ ಆಯಿಂಟ್‍ಮೆಂಟ್(ಉದಾ: ನಿಯೋಸ್ಪೋರಿನ್) ಹಚ್ಚಬೇಕು. ಒಂದು ವಾರದ ನಂತರ ಟ್ಯಾಟೂ ಇಂಕಿನ ಒಂದು ಲೇಯರ್ ಚರ್ಮದಿಂದ ಬಿಟ್ಟುಕೊಳ್ಳುತ್ತದೆ. ಇದು ಸಾಮಾನ್ಯ, ಇದ್ರಿಂದ ಟ್ಯಾಟೂ ಅಳಿಸಿಹೋಗೋದಿಲ್ಲ. ಆದರೆ ಎರಡು ವಾರದ ನಂತರವೂ ಟ್ಯಾಟೂ ಸುತ್ತ ಅರಿಶಿಣ ಅಥವಾ ಹಸಿರು ಬಣ್ಣದ ಕಲೆಗಳು ಕಂಡುಬಂದರೆ ಕೂಡಲೇ ವೈದ್ಯರನ್ನ ಸಂಪರ್ಕಿಸಿ.
ಒಂದು ಟ್ಯಾಟೂ ಹಾಕಿಸೋದು ಅಂದರೆ ಒಂದು ದಿನದ ಕೆಲಸವಷ್ಟೇ ಅಲ್ಲ. ಅದು ನಾವು ಮಣ್ಣಲ್ಲಿ ಮಣ್ಣಾಗೋವರೆಗೂ ದೇಹದ ಮೇಲೆ ಇರುವಂತದ್ದು. ಸೋ ಬೀ ಕೇರ್‍ಫುಲ್..!