ನವದೆಹಲಿ: ದೇಶದಲ್ಲಿ ಹೈ ಸ್ಪೀಡ್ ರೈಲು ಶೀಘ್ರದಲ್ಲೇ ಹಳಿಯಲ್ಲಿ ಸಂಚರಿಸಲಿದೆ. ಗಂಟೆಗೆ 160 ರಿಂದ 200 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲುಗಳ ಪರೀಕ್ಷಾರ್ಥ ಪ್ರಯೋಗ ಶೀಘ್ರದಲ್ಲಿ ನಡೆಯಲಿದೆ ಎಂದು ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಪೇನ್ ದೇಶದ ಟಾಲ್ಗೊ ಕಂಪೆನಿಯ ಹೈ ಸ್ಪೀಡ್ ರೈಲು ದೆಹಲಿ- ಮುಂಬೈ ಕಾರಿಡಾರ್‍ನಲ್ಲಿ ಸಂಚರಿಸಲಿದೆ. ಈ ಪರೀಕ್ಷಾರ್ಥ ಪ್ರಯೋಗಕ್ಕೆ ಹಳಿಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿಲ್ಲ. ಪ್ರಸ್ತುತ ಈಗ ಇರುವ ಹಳಿಯಲ್ಲೇ ಈ ಪ್ರಯೋಗ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದಲ್ಲಿ ಎರಡು ರೀತಿಯಲ್ಲಿ ರೈಲ್ವೇಗೆ ಲಾಭವಾಗಲಿದೆ. ಒಂದನೆಯದು ಪ್ರಸ್ತುತ ಮುಂಬೈ ಮತ್ತು ದೆಹಲಿ ನಡುವಿನ ರೈಲು ಪ್ರಯಾಣದ ಅವಧಿ 17 ಗಂಟೆ ಇದ್ದರೆ ಟಾಲ್ಗೊ ರೈಲು 12 ಗಂಟೆಗಳ ಅವಧಿಯಲ್ಲಿ ಕ್ರಮಿಸುತ್ತದೆ.
ಎರಡನೇಯದಾಗಿ ಈ ರೈಲು ಕಡಿಮೆ ವಿದ್ಯುತ್ ಬಳಸುತ್ತದೆ. ಹೀಗಾಗಿ ಈ ರೈಲಿನ ಸೇವೆಯನ್ನು ಅನುಷ್ಟಾನಕ್ಕೆ ತಂದರೆ ಶೇ. 30 ರಷ್ಟು ವಿದ್ಯುತ್ ಬಿಲ್ ಕಡಿಮೆಯಾಗಲಿದೆ.
ಈ ಟಾಲ್ಗೊ ರೈಲಿನ ಭಾಗಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಜೋಡಿಸಲಾಗುತ್ತದೆ. ಒಂದೊಮ್ಮೆ ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾದಲ್ಲಿ ಬೇರೆ ಹಳಿಗಳಲ್ಲೂ ರೈಲನ್ನು ಓಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು. ಈಗಾಗಲೇ ಟಾಲ್ಗೊ ರೈಲು ಏಷ್ಯಾ ಮತ್ತು ಅಮೆರಿಕದ ಹಲವಾರು ಪ್ರದೇಶಗಳಲ್ಲಿ ಸಂಚರಿಸುತ್ತಿದೆ.
ಪ್ರಸ್ತುತ ಭಾರತದಲ್ಲಿ ದಿಲ್ಲಿ – ಆಗ್ರಾ ನಡುವೆ ಸಂಚರಿಸುವ ಗತಿಮಾನ್ ಎಕ್ಸ್‍ಪ್ರೆಸ್ ರೈಲು ಅತಿವೇಗದಲ್ಲಿ ಚಲಿಸುವ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೈಲು ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸಿದರೆ, ದೆಹಲಿ – ಭೋಪಾಲ್ ಶತಾಬ್ದಿ ರೈಲು ಗಂಟೆಗೆ 150 ಕಿ.ಮೀ. ವೇಗದಲ್ಲಿ ಓಡುತ್ತಿದೆ.