ನವದೆಹಲಿ: ನಗರಗಳಲ್ಲಿ ವಾಸಮಾಡುತ್ತಿದ್ದು ಕಾರ್ ಖರೀದಿಸುವ ಆಸೆ ಇರುವ ಮಂದಿಗೆ ಕೇಂದ್ರ ಸರ್ಕಾರ ಕಹಿ ಸುದ್ದಿ ನೀಡಿದೆ. ಕಾರ್ ಖರೀದಿಗೂ ಮುನ್ನ ಪಾರ್ಕಿಂಗ್‍ಗೆ ಸ್ಥಳಾವಕಾಶ ಇರುವ ಬಗ್ಗೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಶೌಚಾಲಯ ಪತ್ತೆ ಮೊಬೈಲ್ ಆಪ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ದೇಶದೆಲ್ಲೆಡೆ ನಿಲುಗಡೆ ಸ್ಥಳಾವಕಾಶದ ಧೃಡೀಕರಣ ಪ್ರಮಾಣಪತ್ರ ಒದಗಿಸದ ಹೊರತು, ವಾಹನ ನೊಂದಣಿ ಸಾಧ್ಯವಿಲ್ಲ. ಈ ನಿಯಮವನ್ನು ಜಾರಿಗೊಳಿಸಲು ಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ವಾಹನ ದಟ್ಟಣೆ ನಿಯಂತ್ರಣ ಕುರಿತು ಈಗಾಗಲೇ ಚರ್ಚೆ ನಡೆಯುತ್ತಿದ್ದು, ಕಡ್ಡಾಯ ಪ್ರಮಾಣ ಪತ್ರದ ಕ್ರಮವನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಾಹನ ಖರೀದಿಗೆ ತರಲಾಗುತ್ತಿರುವ ನಿಮಯದಂತೆ ಮುಂದೆ ಶೌಚಾಲಯ ರಹಿತ ನಿವಾಸಗಳ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.