ಶಿವಮೊಗ್ಗ: ಹಟ್ಟಿ ಚಿನ್ನದ ಗಣಿ ಬರಿದಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಚಿನ್ನ ಸೇರಿದಂತೆ ಇನ್ನಿತರ ಖನಿಜಗಳ ಬಗ್ಗೆ ಸರ್ವೆ ನಡೆಯುತ್ತಿದೆ. ಜಿಲ್ಲೆಯ ಶಿಕಾರಿಪುರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸರ್ವೇ ಕಾರ್ಯ ಪ್ರಾರಂಭವಾಗಿದ್ದು, ಜನ ಇನ್ನೇನು ಚಿನ್ನ ಸಿಕ್ಕೇ ಬಿಟ್ಟಿತು ಎನ್ನುವ ರೀತಿಯಲ್ಲಿ ಮಾತನಾಡಲು ಆರಂಭಿಸಿದ್ದಾರೆ.
ರಾಜ್ಯ ಭೂ ಸರ್ವೇಕ್ಷಣಾ ಇಲಾಖೆ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರದ ಭೂ ಸರ್ವೇಕ್ಷಣಾ ಇಲಾಖೆ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಭೂಮಿ ಆಳದಲ್ಲಿ ಇರಬಹುದಾದ ಬಂಗಾರ ಇನ್ನಿತರ ಖನಿಜಗಳ ಪತ್ತೆ ಕಾರ್ಯ ಆರಂಭಿಸಿದೆ. ಹೆಲಿಕಾಪ್ಟರ್‍ಗೆ ತೂಗು ಹಾಕಿರುವ 60 ಮೀಟರ್ ಉದ್ದದ ಸೆನ್ಸರ್ ಮೂರು ಬಗೆಯಲ್ಲಿ ಭೂಮಿಯನ್ನು ಶೋಧಿಸುತ್ತಿದೆ. ಎಲೆಕ್ಟ್ರೋ ಮ್ಯಾಗ್ನೇಟಿಕ್, ಮ್ಯಾಗ್ನೆಟಿಕ್, ರೇಡಿಯೋ ಮೆಟ್ರಿಕ್ ಸೆನ್ಸರ್ ಮೂಲಕ ಭೂಮಿಯ ಮೇಲ್ಮೈನಿಂದ 50 ಮೀಟರ್ ಆಳದವರೆಗೂ ಶೋಧ ನಡೆಸಲಾಗುತ್ತಿದೆ.
ಹಿರಿಯ ಭೂ ವಿಜ್ಞಾನಿ ವಿನೋದ್ ಪ್ರತಿಕ್ರಿಯಿಸಿ, ಈ ಸರ್ವೆಯಿಂದ ಸಂಗ್ರಹವಾಗುವ ದತ್ತಾಂಶವನ್ನು ಸಂಸ್ಕರಿಸಿ ಅಂತಿಮ ಫಲಿತಾಂಶ ಪಡೆಯಲು ಇನ್ನೂ ಹತ್ತು ತಿಂಗಳು ಕಾಯಬೇಕು. ನಂತರವೇ ಇಲ್ಲಿ ಸಿಗುವ ಬಂಗಾರ, ಪ್ಲಾಟಿನಂ ಇನ್ನಿತರ ಖನಿಜಗಳ ಬಗ್ಗೆ ಮೊದಲ ಹಂತದ ಮಾಹಿತಿ ಸಿಗುತ್ತದೆ. ಯಾವುದೇ ಗಣಿ ಆರಂಭವಾಗಲು ಎಂಟರಿಂದ ಹತ್ತು ಬಗೆಯ ಸರ್ವೆಗಳು ನಡೆಯುತ್ತವೆ. ಅದರಲ್ಲಿ ಇದು ಮೊದಲ ಹಂತ. ಅಷ್ಟೂ ಹಂತಗಳು ಪೂರ್ಣಗೊಂಡ ನಂತರ ಸಿಗುವ ಖನಿಜಗಳ ಪ್ರಮಾಣ ಎಷ್ಟಿದೆ ಎನ್ನುವ ನಿಖರ ಮಾಹಿತಿ ದೊರೆಯುತ್ತದೆ. ನಂತರ ಲಾಭದಾಯಕವಾಗಿ ಇದ್ದರೆ ಮಾತ್ರ ಇಲ್ಲಿ ಗಣಿಗಾರಿಕೆ ಆರಂಭಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಮೂರು ದಿನಗಳ ಸರ್ವೆಯಿಂದ ಇಡೀ ಶಿಕಾರಿಪುರ ತಾಲೂಕು ಸಂಪೂರ್ಣ ಬಂಗಾರಮಯವಾಗಿದೆ ಎಂಬ ವದಂತಿ ಹರಡುತ್ತಿದೆ. ಇದೂವರೆಗೂ ರಾಜಕೀಯವಾಗಿ ಮಾತ್ರ ಮಹತ್ವ ಪಡೆದಿದ್ದ ಶಿಕಾರಿಪುರ ಈಗ ಬಂಗಾರದ ಕಾರಣದಿಂದ ಮತ್ತೆ ಸುದ್ದಿಯಾಗುತ್ತಿದೆ. ಒಟ್ಟಾರೆಯಾಗಿ ಇಲ್ಲಿ ಬಂಗಾರ ನಿಕ್ಷೇಪ ಇದೆ ಎಂಬುದು ಖಚಿತವಾಗಲು ಇನ್ನೂ ಎಂಟರಿಂದ ಹತ್ತು ತಿಂಗಳು ಕಾಯಲೇಬೇಕಾಗಿದೆ.