ಆಗ್ರಾ:“ಚಿಟ್ ಫಂಡ್ ಹೆಸರಿನಲ್ಲಿ ಬಡವರ ಹಣವನ್ನು ಲೂಟಿ ಹೊಡೆದವರು ಈಗ ನನ್ನ ವಿರುದ್ಧ ಕೈ ತೋರಿಸುತ್ತಿದ್ದಾರೆ” ಇದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಟಾಂಗ್ ನೀಡಿದ ಪರಿ.
ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಬಿಜೆಪಿ ಸಾರ್ವಜನಿಕಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಮೋದಿ, ನನ್ನ ವಿರುದ್ಧ ಧ್ವನಿ ಎತ್ತುತ್ತಿರುವ ವ್ಯಕ್ತಿಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಚಿಟ್ ಫಂಡ್ ಹೆಸರಿನಲ್ಲಿ ಲಕ್ಷಾಂತರ ಜನರ ಕೋಟ್ಯಂತರ ರೂ ಹಣವನ್ನು ಲೂಟಿ ಮಾಡುರುವ ವ್ಯಕ್ತಿಗಳು ನೋಟು ನಿಷೇಧದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಚಿಟ್ ಫಂಡ್ ಹಗರಣದದಿಂದಾಗಿ ನೂರಕ್ಕೂ ಅಧಿಕ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡವರ ಆತ್ಮಹತ್ಯೆಗೆ ಕಾರಣರಾದವರು ಈಗ ನನ್ನ ವಿರುದ್ಧ ಕೈ ತೋರಿಸುತ್ತಿದ್ದಾರೆ ಎನ್ನುವ ಮೂಲಕ ಮೋದಿ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.
ನೋಟು ನಿಷೇಧದಿಂದ ಮುಂದಿನ ದಿನಗಳಲ್ಲಿ ಅರ್ಥಿಕವಾಗಿ ಜನರು ಕಠಿಣ ಪರಿಸ್ಥಿತಿ ಎದುರಿಸಬೇಕಾಗಬಹುದೆಂದು ಮೊದಲೇ ನಾನು ಹೇಳಿದ್ದೆ. ಜನರು ಕಷ್ಟ ಎದುರಿಸುತ್ತಿದ್ದರೂ, ಕಪ್ಪುಹಣದ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ದೇಶದ ರೈತರು, ಬಡ ಜನರೂ ಬೆಂಬಲ ಸೂಚಿಸಿದ್ದು ನನ್ನ ನಿರ್ಧಾರದ ಬಗ್ಗೆ ಹೆಮ್ಮೆಯಿದೆ. ನಿಮ್ಮ ತ್ಯಾಗವು ಖಂಡಿವಾಗಿಯೂ ವ್ಯರ್ಥವಾಗಲಾರದು ಎಂದು ಮೋದಿ ಭರವಸೆ ನೀಡಿದರು.
ನನಗೆ 50 ದಿನ ನೀಡಿ ಎಂದು ನಾನು ನಿಮ್ಮ ಜೊತೆ ಕೇಳಿಕೊಂಡಿದ್ದೆ. ಈಗ 10 ದಿನ ಪೂರ್ಣಗೊಂಡಿದ್ದು, 5 ಸಾವಿರ ಕೋಟಿ ಹಣ ಠೇವಣಿ ರೂಪದಲ್ಲಿ ಬ್ಯಾಂಕ್‍ಗೆ ಬಂದಿದೆ. ಕಷ್ಟವಾದರೂ ಜನ ಸಾಮಾನ್ಯರು ನೋಟು ನಿಷೇಧ ಕ್ರಮಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ಅಕ್ರಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿ ಕೂಡಿಟ್ಟವರು ಈಗ ದಿಕ್ಕೇ ತೋಚದಂತೆ ಓಡಾಡುತ್ತಿದ್ದಾರೆ. ಈಗ ನಿಮಗೆ ಸ್ವಲ್ಪ ಕಷ್ಟವಾದರೂ ನಮ್ಮ ದೇಶಕ್ಕೆ ಒಳ್ಳೆದಾಗಲಿದೆ ಎಂದು ಹೇಳಿದರು.