ಪ್ರತಿಯೊಬ್ಬ ಯುವತಿಯೂ ಉದ್ದನೆಯ ಕೂದಲು ಹೊಂದಲು ಇಚ್ಚಿಸುತ್ತಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ, ಹೊಗೆ, ಧೂಳು, ನೀರು ಹೀಗೆ ಅನೇಕ ಕಾರಣಗಳಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ನೀವು ಟ್ರೈ ಮಾಡಬೇಕಾದ 7 ಟಿಪ್ಸ್ ಗಳು ಇಂತಿವೆ.
1. ಒಣಗಿದ ನೆಲ್ಲಿಕಾಯಿ: ಒಣಗಿದ ನೆಲ್ಲಿಕಾಯಿ ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತದೆ. ಒಣಗಿದ ನೆಲ್ಲಿಕಾಯಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕಪ್ಪು ಬಣ್ಣ ಬರುವವರೆಗೆ ಬಿಸಿ ಮಾಡಿ ತಣ್ಣಗಾಗಲು ಬಿಡಿ. ಎಣ್ಣೆ ತಣ್ಣಗಾದ ಬಳಿಕ ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಹೀಗೆ ಮಾಡುತ್ತಾ ಬಂದಲ್ಲಿ ಕ್ರಮೇಣವಾಗಿ ಕೂದಲುದುರುವಿಕೆ ಕಡಿಮೆಯಾಗುತ್ತದೆ.
2. ತೆಂಗಿನ ಹಾಲು: ಕೂದಲುದುರುವಿಕೆ ತಡೆಗಟ್ಟಲು ತೆಂಗಿನ ಹಾಲು ಅತ್ಯಂತ ಉಪಕಾರಿ. ತೆಂಗಿನ ಕಾಯಿಯನ್ನು ತುರಿದು ಅದನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ರಸ ತೆಗೆಯಿರಿ. ಬಳಿಕ ಅದನ್ನ ತಲೆಗೆ ಹಚ್ಚಿ 15-20 ನಿಮಿಷದವರೆಗೆ ಚೆನ್ನಾಗಿ ಮಸಾಜ್ ಮಾಡಿ ನಂತರ ಸ್ನಾನ ಮಾಡಿ. ವಾರದಲ್ಲಿ 2 ಅಥವಾ 3 ಬಾರಿ ಹೀಗೆ ಮಾಡಿದ್ದಲ್ಲಿ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು.
3. ಮೊಸರು ಮತ್ತು ನಿಂಬೆಹಣ್ಣು: ಮೊಸರು ಹಾಗು ನಿಂಬೆಹಣ್ಣು ಕೂದಲುದುರುವಿಕೆಯನ್ನು ತಡೆಯುವುಲ್ಲದೇ ತಲೆಯಲ್ಲಿರುವ ಹೊಟ್ಟು ನಿಯಂತ್ರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಅರ್ಧ ನಿಂಬೆ ಹಣ್ಣಿನೊಂದಿಗೆ ಒಂದು ಕಪ್ ಮೊಸರು ಬೆರೆಸಿ ತಲೆಗೆ ಹಚ್ಚಬೇಕು. 30 ನಿಮಿಷದ ಬಳಿಕ ಸ್ನಾನ ಮಾಡಬೇಕು. ವಾರಕ್ಕೆ ಒಂದು ಬಾರಿ ಈ ರೀತಿ ಮಾಡಬಹುದು.
4. ಜೇನುತುಪ್ಪ ಹಾಗೂ ಆಲೀವ್ ಆಯಿಲ್: ಒಂದು ಕಪ್ ನಲ್ಲಿ ಎರಡು ಚಮಚ ಜೇನುತುಪ್ಪ, ಎರಡು ಚಮಚ ಆಲೀವ್ ಆಯಿಲ್ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ದಾಲ್ಚಿನಿ(ಚಕ್ಕೆ) ಪುಡಿ ಸೇರಿಸಿ ಚೆನ್ನಾಗಿ ಕಲಸಿ ಬಳಿಕ ತಲೆಗೆ ಹಚ್ಚಿ. ಹೀಗೆ ಮಾಡುತ್ತಾ ಬಂದಲ್ಲಿ ಕೂದಲುದುರುವಿಕೆ ನಿಲ್ಲುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುತ್ತದೆ.
5. ಅಲೊವೆರಾ: ಅಲೊವೆರಾದಿಂದಲೂ ಕೂಡ ಕೂದಲ ಆರೈಕೆ ಮಾಡಬಹುದು. ಇದನ್ನು ನೀವು ಕಂಡೀಷನರ್‍ನಂತೆ ಬಳಸಬಹುದು. ಇದರಿಂದ ಕೂದಲು ದೃಢವಾಗುತ್ತದೆ ಹಾಗೂ ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲು ತುಂಬಾ ಸಿಕ್ಕಾಗುವ ಸಮಸ್ಯೆಗೂ ಅಲೋವೆರಾ ಉತ್ತಮ ಪರಿಹಾರ. ವಾರದಲ್ಲಿ 2 ಬಾರಿ ಕೂದಲಿಗೆ ಅಲೋವೆರಾ ಜೆಲ್ ಹಚ್ಚಿದ್ರೆ ಒಳ್ಳೆ ರಿಸಲ್ಟ್ ಕಾಣುತ್ತೀರಿ.
6. ಈರುಳ್ಳಿ ರಸ: ಕೂದಲ ಆರೈಕೆಗೆ ಇನ್ನೊಂದು ಪ್ರಮುಖ ಟಿಪ್ಸ್ ಎಂದರೆ ಈರುಳ್ಳಿ ರಸ. ಇದು ಕೂದಲು ಉದುರುವಿಕೆಯನ್ನು ತಡೆಗಟ್ಟುವುದು ಮಾತ್ರವಲ್ಲದೇ ರಕ್ತಸಂಚಾರ ಹೆಚ್ಚಿಸಿ ತಲೆ ಉರಿಯನ್ನು ಕಡಿಮೆಗೊಳಿಸುತ್ತದೆ. ಕೂದಲು ಸೊಂಪಾಗಿ ಬೆಳೆಯಲು ಕೂಡ ಈರುಳ್ಳಿ ರಸ ಸಹಾಯ ಮಾಡುತ್ತದೆ.
7. ಬೇವಿನ ಎಣ್ಣೆ: ಬೇವಿನ ಎಣ್ಣೆ ಕೂದಲು ಉದುರುವಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ. ಮನೆಯಲ್ಲಿ ನೀವೇ ಬೇವಿನ ಎಣ್ಣೆ ತಯಾರಿಸಿಕೊಳ್ಳಬಹುದು. ಬೇವಿನ ಎಲೆಗಳನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆ ಜೊತೆ ಬೆರೆಸಿ ಸ್ವಲ್ಪ ಬಿಸಿ ಮಾಡಿ, ತಣ್ಣಗಾದ ಬಳಿಕ ತಲೆಗೆ ಹಚ್ಚಿ 30 ನಿಮಿಷದ ಬಳಿಕ ಸ್ನಾನ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಮಾಡಿದ್ದಲ್ಲಿ ಕೂದಲುದುರುವಿಕೆ ಕಡಿಮೆಯಾಗುವುದನ್ನು ನೀವೇ ಗಮನಿಸುತ್ತೀರಿ.
ಇಲ್ಲಿ ತಿಳಿಸಿರುವ ಟಿಪ್ಸ್‍ಗಳನ್ನು ವಾರದಲ್ಲಿ 2 ಬಾರಿ ಟ್ರೈ ಮಾಡಿ. ನಿಮ್ಮ ಕೂದಲಿನಲ್ಲಿ ಬದಲಾವಣೆಯನ್ನು ನೀವೇ ಕಾಣುತ್ತಿರಿ. ವಾತಾವರಣಕ್ಕೆ ಅನುಗುಣವಾಗಿ ಕೂದಲುದುರುವಿಕೆ ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಕೂದಲ ಆರೈಕೆ ಮಾಡುವುದು ಅತ್ಯಗತ್ಯ.