ಫ್ರೆಂಚ್ ಫ್ರೈಸ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದನ್ನ ರೆಸ್ಟೊರೆಂಟ್‍ಗಳಲ್ಲಿ ಸವಿದಿರುತ್ತೀರಿ. ಆದ್ರೆ ಮನೆಯಲ್ಲೇ ಟ್ರೈ ಮಾಡಿದಾಗ ಆಲೂ ಸಂಪೂರ್ಣ ಬೇಯದೆ ಅಯ್ಯೋ ಇದನ್ನು ಮಾಡೋದು ದೊಡ್ಡ ತಾಪತ್ರಯ ಅಂತ ಗೊಣಗಬೇಡಿ. ಮನೆಯಲ್ಲೇ ಕ್ರಿಸ್ಪಿ ಫ್ರೆಂಚ್ ಫ್ರೈಸ್ ಮಾಡೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಸಿಂಪಲ್ ರೆಸಿಪಿ. ಒಮ್ಮೆ ನೀವೂ ಟ್ರೈ ಮಾಡಿ.
ಬೇಕಾಗುವ ಸಾಮಾಗ್ರಿಗಳು:
1. ದೊಡ್ಡ ಆಲೂಗಡ್ಡೆ- 1
2. ಕಾಳುಮೆಣಸಿನಪುಡಿ/ ಖಾರದ ಪುಡಿ- 1/4 ಚಮಚ
3. ಉಪ್ಪು – ರುಚಿಗೆ ತಕ್ಕಷ್ಟು
4. ಎಣ್ಣೆ- 2 ಕಪ್
ಮಾಡುವ ವಿಧಾನ:
ಮೊದಲು ಆಲೂಗಡ್ಡೆಯ ಮೇಲಿನ ಸಿಪ್ಪೆ ತೆಗೆಯಿರಿ. ಬಳಿಕ ಆಲೂಗಡ್ಡೆಯ ಎರಡೂ ತುದಿಗಳನ್ನು ಕಟ್ ಮಾಡಿ ಉದ್ದಕ್ಕೆ ಹೋಳುಗಳನ್ನಾಗಿ ಮಾಡಿಕೊಳ್ಳಿ.
ಒಂದು ಪಾತ್ರೆಗೆ ತಣ್ಣೀರು ಹಾಕಿ ಅದರಲ್ಲಿ ಆಲೂಗಡ್ಡೆ ಹೋಳುಗಳನ್ನು ಹಾಕಿ 20 ನಿಮಿಷಗಳ ನೆನಯಲು ಬಿಡಿ. ನಂತರ ಅದನ್ನು ತೆಗೆದು ಬಿಸಿನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ತೆಗೆಯಿರಿ. ನಂತರ ಶುಭ್ರವಾದ ಬಟ್ಟೆಯ ಮೇಲೆ ಆಲೂಗಡ್ಡೆ ಹೋಳುಗಳನ್ನು ಹರಡಿ ನೀರು ಒಣಗುವಂತೆ ಮಾಡಿ.
ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಟ್ಟು ಎಣ್ಣೆ ಕಾದ ಮೇಲೆ ಆಲೂಗಡ್ಡೆ ಪೀಸ್ ಗಳನ್ನು ಹಾಕಿ ನಿಧನವಾಗಿ ಎರಡು ನಿಮಿಷಗಳ ಕಾಲ ಅಂದರೆ ಹೋಳುಗಳು ಅರ್ಧ ಫ್ರೈ ಆಗುವವರೆಗೆ ಕರಿದು ತೆಗೆಯಿರಿ. ಫ್ರೈ ಮಾಡಿದ ಆಲೂಗಡ್ಡೆ ತಣ್ಣಗಾಗಲು ಬಿಡಿ.
ನಂತರ ಮತ್ತೊಮ್ಮೆ ಎಣ್ಣೆಗೆ ಹಾಕಿ ಕಂದುಬಣ್ಣ ಬರುವವರೆಗೆ ಕರಿದು ತೆಗೆಯಿರಿ. ನಂತರ ಇದರ ಮೇಲೆ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿಯನ್ನು ಚಿಮುಕಿಸಿ ಸವಿಯಲು ಕೊಡಿ.