ಬೆಳಗಾವಿ: ಗಡಿ ಭಾಗದ ಜಿಲ್ಲೆಯಾದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರ್ನಾಟಕ ಸರ್ಕಾರ ಮತ್ತು ಪೋಲಿಸರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಬೆಳಗಾವಿ ನಗರದಲ್ಲಿ ಎಂಇಎಸ್ ಸಂಘಟನೆಯು ಕರಾಳ ದಿನ ಆಚರಿಸಿತ್ತು. ಸರ್ಕಾರ ಇದರ ವಿರುದ್ಧ ಕ್ರಮಕೈಗೊಂಡ ಹಿನ್ನಲೆಯಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?: ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಬೆಳಗಾವಿ, ಕಾರವಾರ ಮತ್ತು ಬೀದರ್ ಜಿಲ್ಲೆಗಳಲ್ಲಿ ಮರಾಠಿ ಭಾಷೆ ಮತ್ತು ಸಂಸ್ಕøತಿಯ ಜನರಿದ್ದ ನಮ್ಮನ್ನು 1956 ರಿಂದ ಬೇರೆ ಭಾಷೆ, ಸಂಸ್ಕøತಿ ಇರುವ ಕರ್ನಾಟಕಕ್ಕೆ ಸೇರಿಸಿ ಅನ್ಯಾಯ ಮಾಡಲಾಗಿದೆ. ಈ ಅನ್ಯಾಯ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಎಂಬ ಸಂಘಟನೆಯನ್ನು ಮಾಡಿಕೊಂಡು ನವೆಂಬರ್ 1 ರಂದು ಕರಾಳ ದಿನ ಆಚರಿಸುತ್ತಾ ಬಂದಿದ್ದೇವೆ. ಕರ್ನಾಟಕ ಸರ್ಕಾರ ಹಾಗೂ ಪೋಲಿಸರು ಅಧಿಕಾರ ದುರ್ಬಳಕೆ ಮಾಡಿಕೊಂಡು ಯುವಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಮಹಿಳೆಯರು ಮತ್ತು ವೃದ್ಧರಿಗೆ ಹಿಂಸೆಯನ್ನು ನೀಡಿದ್ದಾರೆ. ಅಲ್ಲದೇ ಕರಾಳ ದಿನದಲ್ಲಿ ಭಾಗಿಯಾದ ಮೇಯರ್ ಮತ್ತು ಉಪ ಮೇಯರ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈ ರೀತಿ ಹಿಂದೆಯೂ ಕ್ರಮ ಕೈಗೊಂಡು ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಗಡಿ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಎರಡೂ ರಾಜ್ಯಗಳ ಸಿಎಂಗಳನ್ನು ಮಾತುಕತೆಗೆ ಆಹ್ವಾನಿಸಿದ್ದರು. ಆಗ ಕರ್ನಾಟಕ ಸಿಎಂ ಹೇಳದೆ ದೆಹಲಿಯಿಂದ ಕಾಲ್ಕಿತ್ತಿದ್ದರು. ಕೂಡಲೇ ತಾವು ಮಧ್ಯಪ್ರವೇಶಿಸಿ ನಮಗೆ ಅನ್ಯಾಯ ಆಗುತ್ತಿರುವುದನ್ನು ತಡೆದು, ನಮಗೆ ಕಿರುಕುಳ ನೀಡದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಪತ್ರದಲ್ಲಿ ಬರೆಯಲಾಗಿದೆ.
ಇದೇ ತಿಂಗಳು 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಆಗಮಿಸುತ್ತಿರುವುದರ ಹಿನ್ನಲೆಯಲ್ಲಿ ಈ ಪತ್ರ ಮಹತ್ವ ಪಡೆದುಕೊಂಡಿದೆ.