– ಐತಿಹಾಸಿಕ ಸ್ಮಾರಕದಲ್ಲಿ ಮೋಜು-ಮಸ್ತಿ
ವಿಜಯಪುರ: ಐತಿಹಾಸಿಕ ಗೋಲಗುಂಬಜ್‍ನಲ್ಲಿ ಗುತ್ತಿಗೆದಾರೊಬ್ಬರು ತಮ್ಮ ಮಗಳ ಬರ್ತ್ ಡೇ ಪಾರ್ಟಿ ಆಚರಿಸಿದ್ದಾರೆ. ಈ ಮೂಲಕ ವಿಶ್ವಪ್ರಸಿದ್ಧ ಸ್ಮಾರಕದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ಪುರಾತತ್ವ ಇಲಾಖೆ ಅಧಿಕಾರಿಗಳ ಹೊಣೆಗೇಡಿತನ ಬಯಲಾಗಿದೆ.
ಜಿಲ್ಲೆಯ ಪ್ರಮುಖ ಗುತ್ತಿಗೆದಾರರಾಗಿರುವ ಜಾಧವ್ ಅನ್ನೋರು ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಐತಿಹಾಸಿಕ ಸ್ಮಾರಕದಲ್ಲಿ ರಾತ್ರಿ ಮೋಜು-ಮಸ್ತಿ ಜೋರಾಗಿತ್ತು. ಈ ಪಾರ್ಟಿಯಲ್ಲಿ 50ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಗೋಲಗುಂಬಜ್‍ಗೆ ಭೇಟಿ ನೀಡಿದ ಎಸಿ ಪರಶುರಾಮ ಮಾದರ ನೇತೃತ್ವದ ತಂಡ ಪಾರ್ಟಿಯಲ್ಲಿ ಭಾಗವಹಿಸಿದ್ದವರ 10ಕ್ಕೂ ಹೆಚ್ಚು ಕಾರ್‍ಗಳನ್ನು ವಶಪಡಿಸಿಕೊಂಡಿದೆ.
ಈ ಐತಿಹಾಸಿಕ ಸ್ಮಾರಕದಲ್ಲಿ ಸಂಜೆ 6 ಗಂಟೆಯಾದ್ಮೇಲೆ ಸಾರ್ವಜನಿಕರ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ. ಹೀಗಿದ್ದರೂ ಪುರಾತತ್ವ ಇಲಾಖೆ ಅಧಿಕಾರಿ ದೇಸಾಯಿ ಗುತ್ತಿಗೆದಾರರೊಬ್ಬರ ಪಾರ್ಟಿಗೆ ಗೋಲಗುಂಬಜನ್ನೇ ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ಮೊದಲು ಪ್ರತಿಕ್ರಿಯೆ ನೀಡಿದ ದೇಸಾಯಿ, ಬರ್ತ್‍ಡೇ ಪಾರ್ಟಿ ಇರೋದನ್ನು ಒಪ್ಪಿಕೊಂಡರು. ಆದ್ರೆ ನಂತರ ನನಗೇನೂ ಗೊತ್ತೇ ಇಲ್ಲ, ಈ ವಿಷಯ ಕೇಳಿ ಈಗ ಬಂದಿದ್ದೇನೆ ಅಂತಾ ಉಲ್ಟಾ ಹೊಡೆದ್ರು.