– ರಾಜಮೌಳಿಯ ಕನಸಿಗೆ ಸ್ಪೂರ್ತಿಯಾಯ್ತು ರಾಜ ಕಾಣಿಕೆ
– ಕನ್ನಡದ್ದೇ ಹೂರಣ,ಕನ್ನಡದ್ದೇ ಚಿತ್ರಣ.ಕನ್ನಡದ್ದೇ ದೃಶ್ಯ ಕಥನ
ಎರಡು ವರ್ಷಗಳ ಹಿಂದೆ `ಬಾಹುಬಲಿ’ ಮೊದಲ ಭಾಗದ ಒಂದು ದೃಶ್ಯ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಈ ಚಿತ್ರ ಇದೀಗ ಮತ್ತೆ ಹವಾ ಎಬ್ಬಿಸಿದೆ. ಅದಕ್ಕೆ ಕಾರಣವಾಗಿದ್ದು ಡಾ.ರಾಜ್‍ಕುಮಾರ್ ಮತ್ತು ಅವರು ನಟಿಸಿದ ಇಮ್ಮಡಿ ಪುಲಕೇಶಿ ಎನ್ನುವ ಚಿತ್ರ. ಎಲ್ಲಿಯ ಬಾಹುಬಲಿ ಎಲ್ಲಿಯ ಪುಲಕೇಶಿ? ರಾಜಮೌಳಿ ಚಿತ್ರಕ್ಕೂ ರಾಜ್‍ಕುಮಾರ್‍ಗೂ ಏನು ಸಂಬಂಧ ಎಂಬ ಅನುಮಾನ ನಿಮ್ಮಲ್ಲಿ ಮೂಡುವುದು ಸಹಜ.
`ಪುಲಕೇಶಿ’ಗೂ `ಬಾಹುಬಲಿ’ಗೂ ಒಂದೇ ಹೂರಣ!
ಬಾಹುಬಲಿ ಚಿತ್ರವು ಬರೀ ತೆಲುಗಿನಲ್ಲಿ ಮಾತ್ರ ಅಲ್ಲ ಭಾರತವನ್ನೂ ದಾಟಿಯನ್ನೂ ದಾಟಿ ಹೋಗಿತ್ತು. ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರ ಎಬ್ಬಿಸಿದ್ದ ಬಿರುಗಾಳಿ ಅಂತಿಂಥದ್ದಲ್ಲ. ಕಣ್ಣಿಗೆ ಹಬ್ಬ, ಮನಸಿಗೆ ಮಂದಾರ. ಒಂದೊಂದು ದ್ರಶ್ಯವನ್ನು ಕಟ್ಟಿಕೊಟ್ಟ ಖದರ್‍ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಗ್ರಾಫಿಕ್ ತಂತ್ರಜ್ಞಾನವನ್ನು ಬಳಸಿಕೊಂಡಿದ್ದ ರೀತಿಗೆ ಹುಚ್ಚೆದ್ದಿದ್ದರು. ಬಾಹುಬಲಿಯನ್ನು ತಲೆಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿಯೇ ಬಿಟ್ಟರು. ಬಾಹುಬಲಿ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು. ಚಿತ್ರ ಕೋಟಿ ಕೋಟಿ ಹಣಗಳಿಸಲು ಡಾ.ರಾಜ್‍ಕುಮಾರ್ ಅವರು ಪರೋಕ್ಷ ಕಾರಣವೆನ್ನಬಹುದು.
ಅರೆರೆರೆ…ರಾಜ್‍ಕುಮಾರ್ ಇಲ್ಲದ ಹೊತ್ತಿನಲ್ಲಿ ಬಂದ ಬಾಹುಬಲಿಗೂ ಅದರ ಗೆಲುವಿಗೂ ಹೇಗೆ ಲಿಂಕ್? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. 1967ರಲ್ಲಿ ಒಂದು ಸಿನಿಮಾ ಬಂದಿತ್ತು. ಅದರ ಹೆಸರು ಇಮ್ಮಡಿ ಪುಲಕೇಶಿ. ಜಿ ವಿ ಆಯ್ಯರ್ ನಿರ್ದೇಶಕ. ರಾಜ್‍ಕುಮಾರ್, ಉದಯ್‍ಕುಮಾರ್, ಜಯಂತಿ, ಕಲ್ಪನಾ ಹೀಗೆ ದೊಡ್ಡ ದೊಡ್ಡ ಸ್ಟಾರ್‍ಗಳಿದ್ದರು. ಚಾಲುಕ್ಯ ಸಂಸ್ಥಾನದ ದಿ ಗ್ರೇಟ್ ಕಿಂಗ್ ಇಮ್ಮಡಿ ಪುಲಕೇಶಿ ಜೀವನ ಆಧರಿಸಿದ ಕತೆ ಇದೆ.
`ಬಾಹುಬಲಿ’ಯಲ್ಲೂ ಇದೇ ಆ ದೃಶ್ಯವೈಭವದ ಮೋಡಿ!
ಇಮ್ಮಡಿ ಪುಲಕೇಶಿಯಾಗಿ ರಾಜ್‍ಕುಮಾರ್ ನೀಡಿದ ಅಭಿನಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಮೊದಲೇ ಅವರು ರಾಜ್‍ಕುಮಾರ್. ಅದೂ ರಾಜನ ಪಾತ್ರ. ಕನ್ನಡದಲ್ಲಿ ಅಣ್ಣಾವ್ರನ್ನು ಬಿಟ್ಟರೆ ಅಂಥ ಐತಿಹಾಸಿಕ ಪಾತ್ರದಲ್ಲಿ ಗತ್ತು ತೋರಿಸುವ ಗಂಡಸು ಯಾರಿದ್ದಾರೆ? ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದರು. ರಾಜ, ಮಗ, ಸೋದರ…ಈ ರೀತಿ ಮೂರು ಮೂರು ಆಯಾಮದ ಪಾತ್ರಕ್ಕೆ ಜೀವ ತುಂಬಿದ್ದರು. ಇಮ್ಮಡಿ ಪುಲಕೇಶಿ ಅಂದರೆ ರಾಜ್‍ಕುಮಾರ್ ಥರಾನೇ ಇರಬೇಕು ಎನ್ನುವಷ್ಟು ಪಾತ್ರಕ್ಕೆ ಜೀವ ತುಂಬಿದ್ದರು. ಅದೊಂದು ದ್ರಶ್ಯದಲ್ಲಿ ಮಾತ್ರ ಬಾಹುಬಲಿ ಸೃಷ್ಟಿಗೆ ಕಾರಣವಾಗುವಂತೆ ಮಾಡಿದರು.
ಇನ್ನು ಇಮ್ಮಡಿ ಪುಲಕೇಶಿಯನ್ನು ಗರುಡಗಂಬವನ್ನು ಸೈನಿಕರು ಎತ್ತಿ ಹಿಡಿಯುತ್ತಾರೆ. ಹಗ್ಗ ತುಂಡಾಗುತ್ತದೆ. ರಾಜ್‍ಕುಮಾರ್ ಅದು ಬೀಳದಂತೆ ಬೆನ್ನು ಕೊಟ್ಟು ಮತ್ತೆ ಎತ್ತಲು ಸಹಾಯ ಮಾಡುತ್ತಾರೆ. ಆದರೆ ಬಾಹುಬಲಿಯಲ್ಲಿ ವಿಜಯೇಂದ್ರ ಪ್ರಸಾದ್ ಅವರು ಅದನ್ನು ಕೊಂಚ ಬದಲಾಯಿಸಿದ್ದಾರೆ. ಬೀಳುತ್ತಿದ್ದ ಬಲ್ಲಾಳದೇವನ ವಿಗ್ರಹವನ್ನು ಬಾಹುಬಲಿಯನ್ನು ಹಗ್ಗದಿಂದ ಹಿಡಿದು ನಿಲ್ಲಿಸುತ್ತಾನೆ. ಆಗ ಸೈನಿಕರು ವಿಗ್ರಹವನ್ನು ಮೇಲೆತ್ತಿ ನಿಲ್ಲಿಸುತ್ತಾರೆ. ಅಲ್ಲಿಗೆ ಕತೆಗಾರ ವಿಜಯೇಂಧ್ರ ಪ್ರಸಾದ್ ಈ ದೃಶ್ಯದಿಂದ ಪ್ರೇರಿತರಾಗಿರುವುದು ಪಕ್ಕಾ ಆಗುತ್ತದೆ.
ಆಂಧ್ರದ ವಿಜಯೇಂದ್ರ ಪ್ರಸಾದ್ ಅದ್ಯಾಕೆ ಕನ್ನಡ ಚಿತ್ರವನ್ನು ನೋಡುತ್ತಾರೆ? ನೋಡಿದರೂ ಎಲ್ಲ ಬಿಟ್ಟು 1967ರಲ್ಲಿ ರಿಲೀಸ್ ಆಗಿದ್ದ ಇಮ್ಮಡಿ ಪುಲಕೇಶಿಯನ್ನೇಕೆ ಹುಡುಕುತ್ತಾರೆ? ಇಂಥ ಅನುಮಾನಕ್ಕೆ ಜಸ್ಟ್ ಫುಲ್‍ಸ್ಟಾಪ್ ಇಡಿ. ಇವರು ಈಗ ಆಂಧ್ರದಲ್ಲಿ ಇರಬಹುದು. ಆದರೆ ಅವರ ಮೂಲ ತವರು ಕರ್ನಾಟಕ. ಅದರಲ್ಲೂ ರಾಯಚೂರು ಸಮೀಪದ ಮಾನ್ವಿ. ಬಾಲ್ಯ ಮತ್ತು ಸ್ವಲ್ಪ ಹರೆಯದ ದಿನಗಳಲ್ಲಿ ಕನ್ನಡ ಮಣ್ಣಿನಲ್ಲೇ ಕಳೆದವರು. ಅವರಿಗೆ ರಾಜ್‍ಕುಮಾರ್ ಗೊತ್ತು. ರಾಜ್‍ಕುಮಾರ್ ಚಿತ್ರಗಳ ಖದರ್ ಗೊತ್ತು. ಅದರಲ್ಲೂ ರಾಜ್ ನಟಿಸಿದ ಐತಿಹಾಸಿಕ, ಪೌರಾಣಿಕ ಚಿತ್ರಗಳ ಫೋರ್ಸ್ ಹೇಗಿರುತ್ತದೆಂದು ಅರಿವಿದೆ. ಬಬ್ರುವಾಹನ, ಹುಲಿಯ ಹಾಲಿನ ಮೇವು, ಇಮ್ಮಡಿ ಪುಲಕೇಶಿ, ಮಯೂರ. ಈ ಎಲ್ಲಾ ಚಿತ್ರಗಳಿಂದ ವಿಜಯೇಂಧ್ರ ಪ್ರಸಾದ್ ಸ್ಫೂರ್ತಿ ಪಡೆದದ್ದು ಸುಳ್ಳಲ್ಲ.
ಇಮ್ಮಡಿ ಪುಲಕೇಶಿಯ ಒಂದು ದ್ರಶ್ಯದಿಂದ ಮಾತ್ರ ಬಾಹುಬಲಿ ಕತೆಗಾರ ವಿಜಯೇಂಧ್ರ ಪ್ರಸಾದ್ ಸ್ಫೂರ್ತಿ ಪಡೆದಿಲ್ಲ. ಪುಲಕೇಶಿಯ ಕತೆಯಿಂದಲೂ ಪೂರ್ಣ ಕತೆಯನ್ನು ಎತ್ತಿದ್ದಾರೆ. ಎರಡೂ ಸೇಮ್ ಟು ಸೇಮ್ ಕತೆ. ಯಾವುದರಲ್ಲೂ ಚೇಂಜ್ ಇಲ್ಲ. ಹಾಗೆ ನೋಡಿದರೆ ಬಾಹುಬಲಿ ಪಾರ್ಟ್ 2 ಕೂಡ ಇಮ್ಮಡಿ ಪುಲಕೇಶಿಯ ನೆರಳಿರುವುದು ಪಕ್ಕಾ.
ಇಮ್ಮಡಿ ಪುಲಕೇಶಿ ತಂದೆ ಬಾಲ್ಯದಲ್ಲೇ ಸತ್ತು ಹೋಗಿರುತ್ತಾನೆ. ಹೀಗಾಗಿ ಚಿಕ್ಕಪ್ಪ ಚಿಕ್ಕಮ್ಮನ ಸುಪರ್ದಿಯಲ್ಲಿ ಬೆಳೆಯುತ್ತಿರುತ್ತಾನೆ. ಚಿಕ್ಕಪ್ಪನಿಗೆ ತನ್ನ ಮಗ ರಾಜನಾಗಬೇಕೆನ್ನುವ ಹಂಬಲ. ಆದರೆ ಚಿಕ್ಕಮ್ಮನಿಗೆ ಪುಲಕೇಶಿ ರಾಜನಾಗುವ ಆಸೆ. ಅದನ್ನು ಹೇಗಾದರೂ ತಪ್ಪಿಸಲು ಪುಲಕೇಶಿ ಚಿಕ್ಕಪ್ಪ ಯಾವುದೋ ಅಪವಾದ ಹೊರಿಸಿ ಪುಲಕೇಶಿಯನ್ನು ಕಾಡಿಗೆ ಅಟ್ಟುತ್ತಾನೆ. ಪುಲಕೇಶಿ ಕಾಡಿನಲ್ಲಿದ್ದುಕೊಂಡು ಸೈನ್ಯ ಕಟ್ಟುತ್ತಾನೆ. ಅಲ್ಲಿಂದ ಬಂದು ಹೋರಾಟಿ ಮತ್ತೆ ರಾಜನಾಗುತ್ತಾನೆ. ಇದಿಷ್ಟೇ ಕತೆ. ಇದನ್ನೇ ವಿಜಯೇಂದ್ರ ಪ್ರಸಾದ್ ಅವರು ಮಕ್ಕಿ ಕಾ ಮಕ್ಕಿ ಭಟ್ಟಿ ಇಳಿಸಿದ್ದಾರೆ.
ಬಾಹುಬಲಿಯಲ್ಲಿ ಮೊದಲಾರ್ಧ ಕತೆ ಹೀಗಿದೆ
ಬಾಲ್ಯದಲ್ಲಿ ಮರಿ ಬಾಹುಬಲಿ ಅಪ್ಪ ಬಾಹುಬಲಿಯನ್ನು ಕಳೆದುಕೊಂಡಿರುತ್ತಾನೆ. ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆಯುತ್ತಿರುತ್ತಾನೆ. ಆದರೆ ಈತನ ಚಿಕ್ಕಪ್ಪನಿಗೆ ತನ್ನ ಮಗ ಬಲ್ಲಾಳ ದೇವ ಸಿಂಹಾಸನದ ಮೇಲೆ ಕೂಡಿಸುವ ಆಸೆ ಇರುತ್ತದೆ. ಇದಕ್ಕೆ ಬಾಹುಬಲಿಯ ಚಿಕ್ಕಮ್ಮ ರಮ್ಯಕೃಷ್ಣಗೆ ಇಷ್ಟ ಇರುವುದಿಲ್ಲ. ಯಾರು ಯೋಗ್ಯರೊ ಅವರನ್ನು ಕೂಡಿಸುವ ಆಸೆ ಇರುತ್ತದೆ. ಅದ್ಯಾವುದೊ ಮೋಸದಲ್ಲಿ ಹಿರಿಯ ಬಾಹುಬಲಿಯನ್ನು ಕೊಲ್ಲಿಸುತ್ತಾರೆ. ರಾಣಿ ಅನುಷ್ಕಾ ಶೆಟ್ಟಿಯನ್ನು ಬಂಧನದಲ್ಲಿಡುತ್ತಾರೆ. ಬಲ್ಲಾಳದೇವ ರಾಜನಾಗುತ್ತಾನೆ. ತಾಯಿಯನ್ನು ಬಿಡಿಸಿಕೊಳ್ಳಲು ಮರಿ ಬಾಹುಬಲಿ ಬಂದು ಸಾಮ್ರಾಜ್ಯದಲ್ಲಿ ನಿಂತಿದ್ದಾನೆ. ಸದ್ಯಕ್ಕೆ ಇಲ್ಲಿವರೆಗೆ ಚಿತ್ರದ ಮೊದಲ ಭಾಗದ ಕತೆ ಬಂದು ನಿಂತಿದೆ.
ಎರಡನೇಯ ಭಾಗದಲ್ಲಿ ಮುಂದುವರೆದಿದೆ ಇದರ ಫ್ಯಾಂಟಸಿ ರೂಪ:
ಇಮ್ಮಡಿ ಪುಲಕೇಶಿಯಂತೆ ಬಾಹುಬಲಿ ಕಾಡಿಗೆ ಹೋಗುವುದು, ಅಲ್ಲಿ ಸೈನ್ಯ ಕಟ್ಟುವುದು, ಮತ್ತೆ ಸಿಂಹಾಸನಕ್ಕಾಗಿ ಹೋರಾಡುವುದು… ಹೀಗೆ ಎಲ್ಲವೂ ಎರಡನೇ ಭಾಗದಲ್ಲಿ ಇದೆ ಎನ್ನಲಾಗುತ್ತಿದೆ. ಆದರೆ ಇಮ್ಮಡಿ ಪುಲಕೇಶಿ ಕತೆ ಕೇಳಿದರೆ ನಾವು ಹೇಳಿದಂತೆ ಇರುವುದು ಪಕ್ಕಾ. ಒಟ್ಟಿನಲ್ಲಿ ಆ ಎಳೆಯನ್ನು ಇಟ್ಟುಕೊಂಡು ವಿಜಯೇಂದ್ರ ಪ್ರಸಾದ್ ಕತೆ ಹೆಣೆದಿರುವುದು ಸತ್ಯ. ಆ ಕತೆಗೆ ಇಂದಿನ ಆಧುನಿಕ ತಂತ್ರಜ್ಞಾನ ಬಳಸಿದ್ದಾರೆ. ಗ್ರೀನ್ ಮ್ಯಾಟ್ ಬಳಸಿ ದ್ರಶ್ಯಗಳನ್ನು ಚಿತ್ರಿಸಿದ್ದಾರೆ. ನಂಬಲು ಸಾಧ್ಯವಾಗದಂಥ ಫ್ಯಾಂಟಸಿ ಲೋಕವನ್ನು ಕಟ್ಟಿಕೊಟ್ಟಿದ್ದಾರೆ ರಾಜಮೌಳಿ.
ಆ ರುದ್ರ ಮನೋಹರ ಜಲಪಾತ, ಮಾಹಿಷ್ಮತಿ ಸಾಮ್ರಾಜ್ಯದ ಕೋಟೆ ವೈಭವ, ಶಿವಲಿಂಗವನ್ನು ಎತ್ತಿಕೊಂಡು ಪ್ರಭಾಸ್ ಖದರ್, ಭಾರತೀಯ ಇತಿಹಾಸದಲ್ಲೇ ಕ್ಲಾಸಿಕ್ ಅನ್ನಿಸುವ ಯುದ್ದದ ಮಹಾ ದ್ರಶ್ಯ, ಬಲ್ಲಾಳ ದೇವ ಕಾಡು ಕೋಣದೊಂದಿಗೆ ಹೋರಾಡುವ ಅಬ್ಬರ, ಹಿಮದ ಗುಡ್ಡದಲ್ಲಿ ಪ್ರಭಾಸ್ ತಮನ್ನಾ ವೈರಿಗಳಿಂದ ತಪ್ಪಿಸಿಕೊಳ್ಳುವ ಜೋಶ್, ಬಲ್ಲಾಳ ದೇವನ ವಿಗ್ರಹವನ್ನು ಮರಿ ಬಾಹುಬಲಿ ಹಿಡಿದು ನಿಲ್ಲಿಸುವ ಟೆಂಪರ್. ಹೀಗೆ ಒಂದೊಂದು ದ್ರಶ್ಯಗಳನ್ನು ರಾಜಮೌಳಿ ಬರೀ ಚಿತ್ರಿಸಿಲ್ಲ. ಅದನ್ನು ಕಣ್ಣಿಗೆ ಮಾತ್ರವಲ್ಲ ಮನಸು ಸೇರಿದಂತೆ ಎಲ್ಲದಕ್ಕೂ ಇಳಿಬಿಟ್ಟಿದ್ದಾರೆ. ಆಧುನಿಕ ತಂತ್ರಜ್ಞಾನಕ್ಕೊಂದು ಸಲಾಂ ಹೇಳಿ.
ಯಾರು ಏನೇ ಹೇಳಲಿ. ಬಾಹುಬಲಿಯಂಥ ಬಾಹುಬಲಿಗೆ ನಮ್ಮ ಕನ್ನಡದ ಇಮ್ಮಡಿ ಪುಲಕೇಶಿ ಸಾಲ ಕೊಟ್ಟನಲ್ಲ ಅನ್ನೋದೇ ನಮಗೆ ಹೆಮ್ಮೆ. ಅದರಲ್ಲೂ ಅಣ್ಣಾವ್ರು ನಟಿಸಿದ ಚಿತ್ರಗಳು ಈಗಲೂ ವಿಜಯೇಂದ್ರ ಪ್ರಸಾದ್‍ರಂಥ ಲೇಖಕರಿಗೆ ಕತೆಗಳ ಕಾಮಧೇನು ಆಗಿರುವುದು ನಮಗೆ ಕಮ್ಮಿ ಅಹಂಕಾರಾನಾ ? ಅಣ್ಣಾವ್ರ ಗತ್ತು, ಗೈರತ್ತು ಹೇಗಿದೆ ನೋಡಿ. ಮುಂದಿನ ದಿನಗಳಲ್ಲಿ ವಿಜಯೇಂದ್ರ ಪ್ರಸಾದ್‍ಗೆ ನಮ್ಮ ಅಣ್ಣಾವ್ರು ಇನ್ನಷ್ಟು ಸಾಲ ಕೊಡಲಿ. ಆ ಸಾಲದಿಂದ ತೆಲುಗು ಚಿತ್ರರಂಗ ಬೆಳೆಯಲಿ. ಕರ್ನಾಟಕದ ನಾವು ಬಡ್ಡಿಯನ್ನೂ ಕೇಳುವುದಿಲ್ಲ. ಸಾಲಕ್ಕೂ ಬೇಡಿಕೆ ಇಡುವುದಿಲ್ಲ. ಸಾಲ ಸಂಪೂರ್ಣ ಮನ್ನಾ. ಯಾಕೆಂದ್ರೆ ನಮ್ಮದು ಕಸ್ತೂರಿ ನಿವಾಸದ ವಂಶವಾಗಿದೆ.
ಬಾಹುಬಲಿ ಚಿತ್ರದ ಹೂರಣ ಹೆಕ್ಕಿದ್ದು ಇತಿಹಾಸದಲ್ಲಿ!
ಹೌದು, ಬಾಹುಬಲಿ ಚಿತ್ರಕ್ಕೆ ಸೊಗಸಾದ ಕಥೆ ಹೆಣೆದುಕೊಟ್ಟ ವಿಜಯೇಂದ್ರ ಪ್ರಸಾದ್ ಮತ್ತು ಅದನ್ನು ದೃಶ್ಯವೈಭವದಂತೆ ಕಟ್ಟಿಕೊಟ್ಟ ರಾಜಮೌಳಿ ಅಪ್ಪಟ ಚತುರ ಸಿನಿಮಾ ಮೇಕರ್ ಗಳು. ಅದಕ್ಕೇ ಇತಿಹಾಸದಲ್ಲಿ ಘಟಿಸಿದ ನೈಜ್ಯ ಕಥೆಗಳನ್ನೇ ಇಟ್ಕೊಂಡು ಅದಕ್ಕೆ ಅದ್ದೂರಿ ತಾಂತ್ರಿಕ ವರ್ಗ, ಸಿನಿಮೀಯ ಸ್ಪರ್ಶ, ಕೌತುಕ ತಿರುವುಗಳನ್ನು ಕೊಟ್ಟು, ದೊಡ್ಡ ಮಟ್ಟದಲ್ಲಿ ಬಾಹುಬಲಿ ಸಿನಿಮಾ ಮಾಡಿ ಗೆದ್ದರು. ಯಾಕಂದ್ರೆ ಬಾಹುಬಲಿ ಚಿತ್ರದ ಅದೆಷ್ಟೋ ದೃಶ್ಯಸಂಯೋಜನೆಗಳು ಇತಿಹಾಸದ ನಾನಾ ದೊರೆಗಳ ಬದುಕಿನಿಂದ ಆಯ್ದಂಥವುಗಳು.
ಈಗಾಗ್ಲೇ ಹೇಳಿದಂತೆ ಕನ್ನಡಲ್ಲಿ ಡಾ.ರಾಜ್ ಅಭಿನಯದ ಇಮ್ಮಡಿ ಪುಲಿಕೇಶಿಯ ದೃಶ್ಯವೊಂದೇ ಅಲ್ಲ, ಸ್ವತಃ ಇಮ್ಮಡಿ ಪುಲಿಕೇಶಿಯ ಬದುಕಿನ ಕಥೆಯನ್ನೇ ಬಾಹುಬಲಿಯಲ್ಲಿ ಮಾರ್ಪಾಡು ಮಾಡಿರೋದು ಕಂಡುಬರುತ್ತೆ. ಪುಲಿಕೇಶಿಯ ತಂದೆ ಕೀರ್ತಿವರ್ಮನ ಸಾವಿನ ಬಳಿಕ ಅವನ ತಮ್ಮ ಮಂಗಳೇಶನು ರಾಜಪ್ರತಿನಿಧಿಯಾಗಿ ಚಾಲುಕ್ಯ ವಂಶವನ್ನು ಮುನ್ನಡೆಸುತ್ತಾನೆ, ಆದ್ರೆ ಅಣ್ಣನ ಮಗ ಪುಲಿಕೇಶಿ ವಯಸ್ಕನಾದಾಗ ಅವನಿಗೆ ಅಧಿಕಾರ ನೀಡಲು ನಿರಾಕರಿಸಿ ತನ್ನ ಮಗನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಪ್ರಯತ್ನಿಸುವನು.
ಆಗ ಇಮ್ಮಡಿ ಪುಲಿಕೇಶಿಯು ತನ್ನ ಸಹಚರರೊಂದಿಗೆ ಗುಪ್ತವಾಗಿ ಸೈನ್ಯ ಸಂಘಟಿಸಿ ಚಿಕ್ಕಪ್ಪನ ಮೇಲೆ ಯುದ್ಧ ಘೋಷಿಸಿ ಗೆದ್ದು ಚಾಲುಕ್ಯ ಸಿಂಹಾಸನವನ್ನೇರಿದನು. ಹೆಚ್ಚು ಕಮ್ಮಿ ಹೀಗೇ ಇದೆ ಬಾಹುಬಲಿ ಕಥಾಹಂದರ. ಆದ್ರೆ ಬಾಹುಬಲಿ ಚಿಕ್ಕಪ್ಪನ ಮೇಲಲ್ಲ, ಚಿಕ್ಕಪ್ಪನ ಮಗನ ಮೇಲೆ ಯುದ್ಧ ಸಾರುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಬಾಹುಬಲಿಯಲ್ಲಿ ಇಣುಕುವನು ಮಯೂರ ಆದರೆ ಚಿತ್ರದಲ್ಲಿದ್ದಾನೆ ಚಂದ್ರಗುಪ್ತ ಮೌರ್ಯ!
ನಮ್ಮ ಭಾರತದ ಇತಿಹಾಸದಲ್ಲಿ ಎಂತೆಂಥ ಧೈರ್ಯಶಾಲಿ, ಶೌರ್ಯವಂತ, ಸಾಹಸಿ ದೊರೆಗಳಿದ್ದರು ಅಂದ್ರೆ ಅವರ ಬದುಕಿನ ಎಳೆಗಳನ್ನು ಸುಂದರವಾಗಿ ಹೆಣೆದುಬಿಟ್ರೆ ಸಾಕು ಬಾಹುಬಲಿಯಂತಹ ಅತ್ಯದ್ಭುತ ಸಿನಿಮಾ ಆಗೋದ್ರಲ್ಲಿ ಡೌಟೇ ಇಲ್ಲ. ಒಂದು ರೀತೀಲಿ ಭಾರತವನ್ನು ಒಗ್ಗೂಡಿಸಿದ ಮೊದಲ ದೊರೆ ಮತ್ತು ಅಸಲಿ ಸಾಮ್ರಾಟನೆನಿಸಿಕೊಂಡ ಚಂದ್ರಗುಪ್ತನ ಬದುಕಿನಗಾಥೆಯನ್ನೇ ಯಥಾವತ್ ಹೋಲುತ್ತದೆ ಬಾಹುಬಲಿ ಸಿನಿಮಾ.
ಚಂದ್ರಗುಪ್ತ ಹುಟ್ಟಿದಾಗ ತಂದೆ ಸೂರ್ಯಗುಪ್ತ ಶತ್ರುವಿನಿಂದ ಹತನಾಗುವನು. ತಾಯಿ ಮೂರಾ ಮಗುವನ್ನು ಗುಪ್ತವಾಗಿಟ್ಟು ಶತ್ರು ನಂದನಿಗೆ ಸೆರೆಯಾಗುತ್ತಾಳೆ. ಹೇಗಾದ್ರೂ ಮಾಡಿ ಮೂರಾಳನ್ನು ತನ್ನವಳನ್ನಾಗಿ ಮಾಡಿಕೊಳ್ಳಲು ನಂದನು ಹವಣಿಸಿದ್ದನು. ಥೇಟ್ ಬಾಹುಬಲಿಯಲ್ಲೂ ಹೀಗೇ ಉಂಟು. ಬಾಹುಬಲಿ ತಾಯಿ ಬಲ್ಲಾಳದೇವನ ಸೆರೆಯಲ್ಲಿರುತ್ತಾಳೆ.
ಸಾಮಾನ್ಯ ನಾಗರಿಕನಂತೆ ಬೆಳೆಯೋ ಚಂದ್ರಗುಪ್ತನ ಧೈರ್ಯ, ಚಾಣಾಕ್ಷತೆ, ನ್ಯಾಯಪರ ಸ್ವಭಾವಗಳಿಗೆ ಮಾರುಹೋಗೋ ಚಾಣಕ್ಯ ತಕ್ಷಶಿಲೆಯಲ್ಲಿ ಹೆಚ್ಚಿನ ಶಿಕ್ಷಣ ಕೊಡುತ್ತಾನೆ. ಬಳಿಕ ತಾಯಿಯನ್ನು ಸೆರೆಯಿಟ್ಟ ಮಗಧ ದೊರೆ ನಂದನನ್ನು ದೊಡ್ಡವನಾದ್ಮೇಲೆ ಸೋಲಿಸುವನು ಚಂದ್ರಗುಪ್ತ ಮೌರ್ಯ. ಬಾಹುಬಲಿಯ 2ನೇ ಭಾಗದಲ್ಲಿ ಬಹುತೇಕ ಇದೇ ಕಥಾಹಂದರವಿರೋದು ಖಚಿತ. ಇನ್ನು ಡಾ.ರಾಜ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮಯೂರ ಚಿತ್ರವನ್ನೊಮ್ಮೆ ನೆನಪಿಸಿಕೊಳ್ಳಿ. ಅಲ್ಲೂ ಅಷ್ಟೇ ಸಾಧಾರಣ ಬ್ರಾಹ್ಮಣ ವೀರಶರ್ಮನ ಮಗನಾಗಿದ್ದ ಮಯೂರನು ಕದಂಬ ಸಾಮ್ರಾಜ್ಯ ಸ್ಥಾಪಿಸಿದ ಕಥಾನಕವೂ ಬಾಹುಬಲಿ ಸಿನಿಮಾದಲ್ಲಿ ಅಲ್ಲಲ್ಲಿ ಕಾಣಸಿಗುತ್ತೆ.
ಒಟ್ಟಿನಲ್ಲಿ ಸಿನಿಮಾ ಮಾಡೋದು ಅಂದ್ರೆ ಬರೀ ತಾಂತ್ರಿಕವಾಗಿ ಶ್ರೇಷ್ಟಮಟ್ಟದಲ್ಲಿದ್ರೆ ಸಾಲದು. ಸಿನಿಮಾ ಕಥೆಯನ್ನು ರಸವತ್ತಾಗಿ, ಸ್ವಾರಸ್ಯಕರವಾಗಿ ಹೇಳುವ ಛಾತಿಯೂ ಇರ್ಬೇಕು. ಆ ಎಲ್ಲಾ ಗುಣಗಳನ್ನು ಮಿಳಿತಗೊಳಿಸಿಕೊಂಡಿರೋ ವಿಜಯೇಂದ್ರಪ್ರಸಾದ್ ಮತ್ತು ರಾಜಮೌಳಿ ಜೋಡಿ ಇತಿಹಾಸವನ್ನೇ ಮರುಕಳಿಸಿ ಹೊಸ ಇತಿಹಾಸ ನಿರ್ಮಿಸಿರೋದು ಮೆಚ್ಚತಕ್ಕದ್ದು.