ಬೆಂಗಳೂರು: ಪ್ರತಿಷ್ಠಿತ ಇಕೋಸ್ಪೇಸ್ ಟೆಕ್‍ಪಾರ್ಕ್ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿರುವ ಘಟನೆ ಬೆಂಗಳೂರು ಹೊರವಲಯದ ಬೆಳ್ಳಂದೂರು ಬಳಿ ನಡೆದಿದೆ.
ಇಂದು ಮಧ್ಯಾಹ್ನ 12.30ರ ವೇಳೆಗೆ ಈ ಘಟನೆ ನಡೆದಿದ್ದು ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳದಲ್ಲಿದ್ದು ಕಾರ್ಯಾಚರಣೆ ಮಾಡಿ ಕಾರ್ಮಿಕರ ರಕ್ಷಣೆ ಮಾಡುತ್ತಿದ್ದಾರೆ.
ಪ್ರತ್ಯಕ್ಷ್ಯದರ್ಶಿ ಮಲ್ಲಿನಾಥ ರೆಡ್ಡಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದು, ಈ ದುರಂತಕ್ಕೆ ಕಳಪೆ ಕಾಮಗಾರಿಯೇ ಕಾರಣ. ಕೇವಲ ಮೂರು ನಾಲ್ಕು ತಿಂಗಳಿನಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇಟ್ಟಿಗೆಯ ಮೂಲಕ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.
ಎಷ್ಟು ಜನ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವ ಪ್ರಶ್ನೆಗೆ, ಒಂದು ವರ್ಷದಿಂದ ಇಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಮೂರು ಕಟ್ಟಡಗಳನ್ನು ಇದೇ ವೇಗದಲ್ಲಿ ಕಟ್ಟಿದ್ದಾರೆ. ಒಟ್ಟು 50ಕ್ಕೂ ಹೆಚ್ಚು ಜನ ಅಲ್ಲಿ ಕೆಲಸ ಮಾಡುತ್ತಿದ್ದರು. ಈಗ ಎಷ್ಟುಜನ ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಈ ಕಟ್ಟಡ ಬೇಕರಿಯ ಮುಂಭಾಗ ಬಿದ್ದಿದೆ. ಈ ವೇಳೆ ಬೇಕರಿಯಲ್ಲಿ ಮೂರು ಮಂದಿ ಚಹಾ ಕುಡಿಯುತ್ತಿದ್ದರು. ಅವರು ಮೃತಪಟ್ಟಿರಬಹುದು ಎಂದು ಮಲ್ಲಿನಾಥ ರೆಡ್ಡಿ ಹೇಳಿದರು.
ಎರಡು ಅಂತಸ್ತಿನ ನಿರ್ಮಾಣಕ್ಕೆ ಅನುಮತಿ ಪಡೆದು ನಿಯಮ ಉಲ್ಲಂಘಿಸಿ 5 ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದೆ ಈ ದುರಂತಕ್ಕೆ ಮತ್ತೊಂದು ಕಾರಣ ಎನ್ನುವುದು ಈಗ ಬೆಳಕಿಗೆ ಬಂದಿದೆ.