-ಸುಪ್ರಿಂಕೋರ್ಟ್‍ನಲ್ಲಿ ಇಂದು ಮರುಪರಿಶೀಲನಾ ಅರ್ಜಿ ವಿಚಾರಣೆ
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸೋದಿಲ್ಲ ಅಂತ ಶಪಥ ಮಾಡಿದ್ದ ಸರ್ಕಾರ, ಸದನದ ನಿರ್ಣಯದಂತೆ ರಾತ್ರೋರಾತ್ರಿ 4 ಸಾವಿರ ಕ್ಯೂಸೆಕ್ ನೀರು ಹರಿಸಿದೆ.
ಸೋಮವಾರದಂದು ಸದನದಲ್ಲಿ ಸಿಎಂ ಸಾಹೇಬ್ರು ನಮ್ಮ ರಾಜ್ಯದ ರೈತರ ಬೆಳೆ ಹಾಳಾಗಿದೆ ಅಂತ ಒಪ್ಪಿಕೊಂಡಿದ್ರು. ಇಂಥಾ ಸಮಯದಲ್ಲಿ ತಮಿಳುನಾಡಿಗೆ ಮತ್ತೆ ನೀರು ಬಿಟ್ರೆ ಕಾವೇರಿ ಕೊಳ್ಳದ ರೈತರು ಸುಮ್ಮನಿರಲ್ಲ ಅಂತಾನೂ ಲೆಕ್ಕಾಚಾರ ಹಾಕಿದ್ರು. ಅದಕ್ಕೆ ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ ನೀರು ಕೊಟ್ಟು, ನಮ್ಮ ರಾಜ್ಯದ ನಾಲೆಗಳಿಗೆ ಬರೀ 2856 ಕ್ಯೂಸೆಕ್ ನೀರು ಹರಿಸಿದ್ದಾರೆ. ಆದ್ರೆ ತಮಿಳುನಾಡಿಗೆ ನೀರು ಬಿಟ್ಟಿರೋದು ಸುಪ್ರೀಂಕೋರ್ಟ್‍ನ ನ್ಯಾಯಾಂಗ ನಿಂದನೆಯಿಂದ ಪಾರಾಗಲು ಸರ್ಕಾರ ಹೆಣದಿರುವ ರಣತಂತ್ರ ಅನ್ನೋದು ಕಾನೂನು ಪಂಡಿತರ ಲೆಕ್ಕಚಾರ.
ರಾತ್ರಿ 10 ಗಂಟೆಯಿಂದಲೇ ಸದ್ದಿಲ್ಲದೇ ಕೆಆರ್‍ಎಸ್‍ನಿಂದ ತಮಿಳುನಾಡಿಗೆ ನೀರು ಹರಿಸೋ ಕೆಲಸವನ್ನ ಅಧಿಕಾರಿಗಳು ಶುರುಮಾಡಿದ್ರು. ವಿಷಯ ಗೊತ್ತಾಗ್ತಿದ್ದಂತೆ ರೈತ ಮುಖಂಡರು ಜಲಾಶಯದ ಮುಂದೆ ತಡರಾತ್ರಿ ಪ್ರತಿಭಟನೆ ಮಾಡಿದ್ರು. ರಾಜ್ಯ ಸರ್ಕಾರ ರೈತರ ಕಣ್ಣೊರೆಸುವ ತಂತ್ರ ಮಾಡ್ತಿದೆ. ನಮ್ಮ ಜಿಲ್ಲೆಯ ನಾಲೆಗಳಿಗೆ ನೀರು ಹರಿಸೋ ನೆಪದಲ್ಲಿ ತಮಿಳುನಾಡಿಗೆ ನೀರು ಹರಿಸ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಭಯದಲ್ಲಿ ರಾತ್ರೋರಾತ್ರಿ ಕೆಆರ್‍ಎಸ್‍ಗೆ ಭದ್ರತೆ ಹೆಚ್ಚಿಸಲಾಗಿದೆ. ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ ಸೇರಿದಂತೆ ನಾಲ್ಕು ತಾಲೂಕುಗಳಲ್ಲಿ 3 ದಿನಗಳ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸುಪ್ರೀಂಕೋರ್ಟ್‍ನಲ್ಲಿ ಇವತ್ತು ಎರಡು ಅರ್ಜಿಗಳು ವಿಚಾರಣೆಗೆ ಬರಲಿವೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಯಲಿದೆ. ಮಧ್ಯಾಹ್ನ 2ಗಂಟೆಗೆ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಉದಯ್ ಲಲಿತ್ ಪೀಠ ವಿಚಾರಣೆ ನಡೆಸಲಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆದೇಶ ನೀಡಲು ಸುಪ್ರೀಂಕೋರ್ಟ್ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸಂಸತ್ತಿನ ಉಭಯ ಸದನಗಳಲ್ಲಿ ಮಂಡಳಿ ರಚನೆ ಪ್ರಸ್ತಾಪವಾಗಿ ಒಪ್ಪಿಗೆ ಸಿಗಬೇಕು. ಹಾಗಾಗಿ ಸೆಪ್ಟೆಂಬರ್ 30ರ ಆದೇಶವನ್ನ ಮರುಪರಿಶೀಲಿಸಬೇಕು ಅಂತಾ ಕೇಂದ್ರ ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಆದೇಶ ದೋಷಪೂರಿತ. ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಆದೇಶಿಸುವಂತಿಲ್ಲ. ಅಲ್ಲದೆ ನೀರು ಬಿಡುಗಡೆಯ ಬಗ್ಗೆ ಸೆ.20, 27, 30 ರಂದು ನೀಡಿದ ಆದೇಶಗಳನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿ ಕೂಡ ವಿಚಾರಣೆಗೆ ಬರಲಿದೆ. ಇವತ್ತು ಮಧ್ಯಾಹ್ನ 2ಗಂಟೆಯೊಳಗೆ ತಮಿಳುನಾಡಿಗೆ ನೀರು ಬಿಡುಗಡೆ ಬಗ್ಗೆ ನಿಲುವು ತಿಳಿಸಿ ಅಂತಾ ರಾಜ್ಯಕ್ಕೆ ತಾಕೀತು ಮಾಡಿದ್ದ ಸುಪ್ರೀಂಕೋರ್ಟ್‍ಗೆ ರಾಜ್ಯದ ಪರ ವಕೀಲರು ಮಾಹಿತಿಯನ್ನು ಒದಗಿಸಲಿದ್ದಾರೆ. ರೈತರ ಬೆಳೆಗಳಿಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೂ ನೀರು ಹರಿಸುತ್ತಿರೋದ್ರಿಂದ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆಯಿಂದ ಪಾರಾಗಲಿದೆ. ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಈ ಎರಡು ಅರ್ಜಿಗಳನ್ನ ವಿಚಾರಣೆ ನಡೆಸಿ ಏನು ಆದೇಶ ಕೊಡ್ತಾರೋ ಅನ್ನೋ ಕುತೂಹಲವಿದೆ.