ಕೊಪ್ಪಳ: ಜಿಲ್ಲೆಯಲ್ಲಿ ಈಗ ಕೇವಲ ಮುನಿರಾಬಾದಿನ ಪೊಲೀಸ್ ಠಾಣೆಯ ಕುರಿತೇ ಮಾತುಗಳು. ಮುನಿರಾಬಾದಿನ ಪಿಎಸ್‍ಐ ಕರ್ಮಕಾಂಡಗಳು ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಶುಕ್ರವಾರದಂದು ಪಿಎಸ್‍ಐ ವಿರುದ್ಧ ಠಾಣೆಯ ಪೇದೆ ದೂರು ಸಲ್ಲಿಸಿದ್ದರು. ಇದಲ್ಲದೆ ಪಿಎಸ್‍ಐ ಶಾಸಕರೊಬ್ಬರ ಬಗ್ಗೆ ಹಗುರವಾಗಿ ಮಾತನಾಡಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅಷ್ಟೇ ಅಲ್ಲ ಅವರ ವಿರುದ್ಧ ದಾಖಲೆಗಳ ಸಮೇತ ವ್ಯಕ್ತಿಯೋರ್ವರು ಪತ್ರ ಬರೆದಿದ್ದಾರೆ.
ಪಿಎಸ್‍ಐ ಜಯಪ್ರಕಾಶ್ ಪೊಲೀಸ್ ಪೇದೆಗೆ ಕಿರುಕುಳ ಕೊಟ್ಟಿದ್ದಾರೆ ಎಂದು ಆ ಠಾಣೆಯ ಪೇದೆಯೇ ಆರೋಪಿಸಿದ್ದ ಘಟನೆಯ ಹಿಂದೆಯೇ ಆಡಿಯೋ ಕ್ಲಿಪ್ ಬಿಡುಗಡೆಯಾಗಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಕೊಪ್ಪಳದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಕ್ಲಿಪ್ ವಾಟ್ಸಪ್‍ನಲ್ಲಿ ಹರಿದಾಡುತ್ತಿದೆ.
ಆಗಸ್ಟ್ ತಿಂಗಳಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶಾಸಕ ಇಕ್ಬಾಲ್ ಅನ್ಸಾರಿ ಬಂದಿದ್ದ ವೇಳೆ ಬಳ್ಳಾರಿಯಲ್ಲಿ ನಡೆದ ಗಲಾಟೆಯ ಸಂಬಂಧ ವ್ಯಕ್ತಿಯೋರ್ವ ಕರೆ ಮಾಡಿ ಪಿಎಸ್‍ಐಗೆ ತಿಳಿಸಿದಾಗ, ಇಕ್ಬಾಲ್ ಅನ್ಸಾರಿ ಸಾಯಲಿ ನಾನೇನು ಮಾಡಲಿ ಎಂದು ಉಡಾಫೆಯಾಗಿ ಮಾತನಾಡಿದ ಆಡಿಯೋ ಹೊರಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ನಗರದ ಅಶೋಕ ಸರ್ಕಲ್ ನಲ್ಲಿ ಅನ್ಸಾರಿ ಬೆಂಬಲಿಗರು, ಅಭಿಮಾನಿಗಳು ಪ್ರತಿಭಟನೆ ಮಾಡಿ ಪಿಎಸ್‍ಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಅಷ್ಟೇ ಅಲ್ಲದೇ ಇಂದು ಪಿಎಸ್‍ಐ ಬಗ್ಗೆ ಅನಾಮಧೇಯ ವ್ಯಕ್ತಿಯೋರ್ವ ಪತ್ರ ಬರೆದು ಮಾಹಿತಿ ನೀಡಿದ್ದಾನೆ. ಪಿಎಸ್‍ಐ ಜಯಪ್ರಕಾಶ್ ಠಾಣೆಗೆ ಬಂದಾಗಿನಿಂದ ಇಲ್ಲಿಯವರೆಗೆ ಮಾಡಿದ ಡೀಲ್‍ಗಳ ಬಗ್ಗೆ ದಿನಾಂಕ ಸಮೇತ ಪತ್ರದಲ್ಲಿ ನಮೂದಿಸಲಾಗಿದೆ. ಪ್ರತಿ ತಿಂಗಳು ವಸೂಲಿ ಮಾಡುತ್ತಿದ್ದ ಮಾಮೂಲಿಯ ಬಗ್ಗೆ ಕೂಡ ಪತ್ರದಲ್ಲಿ ತಿಳಿದಲಾಗಿದೆ. ಅದರಂತೆ ಸಾಕ್ಷಿ ನೀಡುವವರ 50 ಜನರ ಹೆಸರು ಕೂಡ ಪತ್ರದಲ್ಲಿ ಹೆಸರಿಸಲಾಗಿದೆ.
ಓಸಿ ಬರೆದುಕೊಳ್ಳುವವರ ಬಳಿ ಎಷ್ಟು ಮಾಮೂಲಿ ಪಡೆಯುತ್ತಿದ್ದರು, ಮರಳು ದಂಧೆಕೋರರ ಬಳಿ ತೆಗೆದುಕೊಳ್ಳುತ್ತಿದ್ದರು ಮಾಮೂಲಿನ ಬಗ್ಗೆ ಮತ್ತು ಠಾಣಾ ವ್ಯಾಪ್ತಿಯಲ್ಲಿ ಬರುವ ಕ್ರಷರ್ ಮಾಲೀಕರಿಂದ, ವಿವಿಧ ಕಾರ್ಖಾನೆ ಮಾಲೀಕರ ಬಳಿ ಎಷ್ಟು ಎಷ್ಟು ಮಾಮೂಲು ಪಡೆಯುತ್ತಿದ್ದರು ಎಂಬುದನ್ನು ಪತ್ರದಲ್ಲಿ ತಿಳಿಸಲಾಗಿದೆ.