ಬೆಂಗಳೂರು: ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿಯಾಗಿರುವ ವಿಜಯ್ ಭಾಸ್ಕರ್ ಅವರನ್ನು 4 ತಿಂಗಳಿನಲ್ಲಿ ಸರ್ಕಾರ ವರ್ಗಾವಣೆ ಮಾಡಿದೆ. ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ವಿಜಯ್ ಭಾಸ್ಕರ್ ಅವರನ್ನು ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ನನಗೆ ಬೇಕಾದಂತೆ ವರ್ತಿಸುತ್ತಿಲ್ಲ ಕೂಡಲೇ ವರ್ಗಾವಣೆ ಮಾಡಿ ಎಂದು ಬೆಂಗಳೂರು ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಪಟ್ಟು ಹಿಡಿದ ಕಾರಣ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸದ್ಯ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಮಹೇಂದ್ರ ಜೈನ್ ಅವರನ್ನು ವಿಜಯಭಾಸ್ಕರ್ ಜಾಗಕ್ಕೆ ಕೂರಿಸಬೇಕು ಎಂದು ಜಾರ್ಜ್ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರ ಪ್ರವಾಸದಲ್ಲಿದ್ದರೂ ಈ ವರ್ಗಾವಣೆ ಆದೇಶ ಹೊರ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಐಎಎಸ್ ಅಧಿಕಾರಿಯಾಗಿರುವ ಮಹೇಂದ್ರ ಜೈನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿದ್ದಾಗಲೇ ಗಣಿ ಹಗರಣ ತಾರಕಕ್ಕೇರಿತ್ತು. ಅಷ್ಟೇ ಅಲ್ಲದೇ ಗಣಿ ಹಗರಣದಲ್ಲೂ ಆರೋಪವನ್ನು ಮಹೇಂದ್ರ ಜೈನ್ ಎದುರಿಸುತ್ತಿದ್ದಾರೆ. ಈಗ ಮಹೇಂದ್ರ ಜೈನ್‍ಗೆ ಬಿಡಿಎ ಅಧ್ಯಕ್ಷರಾಗಿಯೂ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ವಿಜಯಭಾಸ್ಕರ್ ಅವಧಿಯಲ್ಲಿ ಬೆಂಗಳೂರು ಜಲಮಂಡಳಿಯ ಆದಾಯ ಮೂರು ಪಟ್ಟು ಹೆಚ್ಚಾಗಿತ್ತು. ಬಿಬಿಎಂಪಿ ಆಯುಕ್ತರಾಗಿ ಬಿಬಿಎಂಪಿಯಲ್ಲಿ ಭಾರೀ ಬದಲಾವಣೆ ತಂದಿದ್ದ ವಿಜಯ್ ಭಾಸ್ಕರ್ ಆದಾಯವನ್ನು ವೃದ್ಧಿಸಿದ್ದರು.
The post ದಕ್ಷ ಅಧಿಕಾರಿ ವಿಜಯ್ ಭಾಸ್ಕರ್‍ನ್ನು ಕಾಡಿಗೆ ಅಟ್ಟಿದ ಜಾರ್ಜ್ appeared first on Public TV.