ಕೊಲ್ಲಂ: ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪುರವೂರಿನಲ್ಲಿರುವ ಪುಟ್ಟಿಂಗಲ್ ದೇವಾಲಯಕ್ಕೆ ದುರಂತ ನಡೆದ ದಿನವೇ ಭೇಟಿ ನೀಡಿದ್ದಕ್ಕೆ ಕೇರಳ ಡಿಜಿಪಿ ಆಕ್ಷೇಪ ವ್ಯಕ್ತಪಡಿಸಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕೇರಳ ಡಿಜಿಪಿ ಟಿಪಿ ಸೇನು ಕುಮಾರ್ ಪ್ರಧಾನಿ ಮೋದಿ ಅವರಿಗೆ ದುರಂತ ನಡೆದ ಮರುದಿನ ಸ್ಥಳಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದ್ದರು ಎಂದು ಮಾಧ್ಯಮವೊಂದು ಪ್ರಕಟಿಸಿದೆ.
ದುರಂತ ನಡೆದ 12 ಗಂಟೆಯ ಒಳಗಡೆ ಗಣ್ಯ ವ್ಯಕ್ತಿಗಳು ಸ್ಥಳಕ್ಕೆ ಭೇಟಿ ನೀಡುವುದಕ್ಕೆ ನಾನು ಆಕ್ಷೇಪಿಸಿದ್ದೆ. ಪ್ರಧಾನಿ ಅವರು ಮರು ದಿನ ಭೇಟಿ ನೀಡಲಿ ಎಂದು ಸಲಹೆ ನೀಡಿದೆ. ಆದರೆ ಪ್ರಧಾನಿ ಅವರು ಅದೇ ದಿನ ಸ್ಥಳಕ್ಕೆ ಭೇಟಿ ನೀಡಿದರು. ನಮ್ಮ ಪೊಲೀಸರು ಬೆಳಗ್ಗೆಯಿಂದಲೇ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ಅಷ್ಟೇ ಅಲ್ಲದೇ ತುಂಬಾ ಕೆಲಸಗಳು ಬಾಕಿ ಇತ್ತು. ಈ ನಡುವೆ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಸ್ಥಳಕ್ಕೆ ಭೇಟಿ ನೀಡಿದ ಕಾರಣ ಅವರ ರಕ್ಷಣೆಗೂ ಪೊಲೀಸರನ್ನು ನಿಯೋಜಿಸಬೇಕಿತ್ತು ಎಂದು ಅವರು ಹೇಳಿದರು.
ರಕ್ಷಣಾ ಕಾರ್ಯದಲ್ಲಿ ತೊಡಗಿದ ಪೊಲೀಸರಿಗೆ ಕುಡಿಯಲು ನೀರಿನ ವ್ಯವಸ್ಥೆ ಇರಲಿಲ್ಲ. ಈ ಘಟನೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವೈಫಲ್ಯ ಹೊಂದಿತ್ತು ಎಂದು ಸೇನು ಕುಮಾರ್ ಕೊಲ್ಲಂ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರವಿವಾರ ನಸುಕಿನ ವೇಳೆ ಪಟಾಕಿಯ ಕಿಡಿಯೊಂದು ದಾಸ್ತಾನು ಮಳಿಗೆಯ ಮೇಲೆ ಬಿದ್ದ ಪರಿಣಾಮ ಪಟಾಕಿಗಳು ಸಿಡಿದು ಈ ಅಗ್ನಿ ಅವಘಡ ಸಂಭವಿಸಿತ್ತು. ಈ ದುರಂತದಲ್ಲಿ 114 ಮಂದಿ ಮೃತಪಟ್ಟಿದ್ದು, 400ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದರು.
The post ಕೊಲ್ಲಂ ದುರಂತ; ಪ್ರಧಾನಿ, ರಾಹುಲ್ ಭೇಟಿಗೆ ಆಕ್ಷೇಪಿಸಿದ್ದ ಕೇರಳ ಡಿಜಿಪಿ appeared first on Public TV.