ಇಟಾನಗರ್: ಅರುಣಾಚಲ ಪ್ರದೇಶಲ್ಲಿ ಹೈಡ್ರಾಮ ನಡೆದಿದ್ದು ಕಾಂಗ್ರೆಸ್‍ನ 43 ಶಾಸಕರು ಬಿಜೆಪಿ ಬೆಂಬಲಿತ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್(ಪಿಪಿಎ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅಧಿಕಾರಕ್ಕೆ ಏರಿದ್ದ ಕಾಂಗ್ರೆಸ್ ಈಗ ಮತ್ತೊಮ್ಮೆ ಅಧಿಕಾರವನ್ನು ಕಳೆದುಕೊಂಡಿದೆ.
ಎರಡು ತಿಂಗಳ ಹಿಂದೆ ರಾಜಕೀಯ ಬಿಕ್ಕಟ್ಟು ಸಂಭವಿಸಿದ ವೇಳೆ ಸುಪ್ರೀಂಕೋರ್ಟ್ ಆದೇಶದಂತೆ ಪೆಮಾ ಖಂಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಹೀಗಾಗಿ ಮರಳಿ ಕಾಂಗ್ರೆಸ್ ಅರುಣಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಏರುವಲ್ಲಿ ಯಶಸ್ವಿಯಾಗಿತ್ತು.
ಆದರೆ ಶುಕ್ರವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಪಕ್ಷದ 43 ಶಾಸಕರು ಬಿಜೆಪಿ ಬೆಂಬಲಿತ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್‍ಗೆ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್‍ಗೆ ಶಾಕ್ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ನಬಂ ಟುಕಿ ಮಾತ್ರ ಕಾಂಗ್ರೆಸ್ ಪಕ್ಷದಲ್ಲೇ ಉಳಿದುಕೊಂಡಿದ್ದು, ಉಳಿದೆಲ್ಲಾ ಕಾಂಗ್ರೆಸ್ ಶಾಸಕರು ಪಿಪಿಎ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.60 ಸದಸ್ಯ ಬಲ ಹೊಂದಿರುವ ಅರುಣಾಚಲ ಪ್ರದೇಶದಲ್ಲಿ 45(+2) ಮಂದಿ ಕಾಂಗ್ರೆಸ್ ಶಾಸಕರಿದ್ದರೆ, ಬಿಜೆಪಿ 11 ಹಾಗೂ ಇಬ್ಬರು ಪಕ್ಷೇತರ ಶಾಸಕರನ್ನು ಹೊಂದಿದೆ. ಈಗ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದ ಇಬ್ಬರೂ ಪಕ್ಷೇತರ ಶಾಸಕರು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್‍ಗೆ ಸೇರ್ಪಡೆಯಾಗಿದ್ದಾರೆ.
ಮುಖ್ಯಮಂತ್ರಿ ನಬಂ ಟುಕಿ ವಿರುದ್ಧ ಶಾಸಕರು ಬಂಡೆದ್ದ ಕಾರಣ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಮರಳಿ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡುವಂತೆ ಆದೇಶ ನೀಡಿತ್ತು. ಈ ಮಧ್ಯೆ ನಬಂ ಟುಕಿ ಅವರು ಸಿಎಂ ರೇಸ್‍ನಿಂದ ಹಿಂದೆ ಸರಿದ ಕಾರಣ ಬಂಡಾಯ ನಾಯಕರಾಗಿದ್ದ ಪೆಮಾ ಖಂಡು ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಕ ಮಾಡಿತ್ತು. ಪೆಮಾ ಖಂಡುಗೆ ಬಂಡಾಯ ಶಾಸಕರು ಮತ್ತು ಪಕ್ಷೇತರರು ಬೆಂಬಲ ನೀಡಿದ್ದರು.
The post ಅರುಣಾಚಲ ಪ್ರದೇಶದಲ್ಲಿ ಮತ್ತೆ ಅಧಿಕಾರ ಹೋಯ್ತು; ಕಾಂಗ್ರೆಸ್‍ಗೆ 43 ಶಾಸಕರು ಗುಡ್‍ಬೈ appeared first on Kannada Public tv.