ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ನಿದ್ದೆಗೆ ಜಾರೋ ಸುದ್ದಿ ಹಳೆಯದು. ಆದ್ರೆ ಸಿಎಂ ಭಾಷಣಕ್ಕೆ ನಾಯಕರು ನಿದ್ರೆ ಹೊಡೆದ್ರೆ? ಹೌದು, ಮೈಸೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಭರ್ಜರಿ ನಿದ್ದೆ ಹೊಡೆದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಗ್ರಾಮ ಸ್ವರಾಜ್ ಹೆಸರಿನ ಚುನಾವಣಾ ಸಮಾವೇಶದಲ್ಲಿ ವೇದಿಕೆಯಲ್ಲೇ ನಾಯಕರು ನಿದ್ದೆಗೆ ಶರಣಾದರು. ಸಂಸದ ವೀರಪ್ಪ ಮೊಯ್ಲಿ. ಸಚಿವ ರಮಾನಾಥ ರೈ ಮತ್ತು ಶಾಸಕ ಎಂ.ಕೆ ಸೋಮಶೇಖರ್ ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಗಡತ್ತಾಗಿ ನಿದ್ದೆ ಹೊಡೆದರು.
ಇವರೆಲ್ಲಾ ನಿದ್ದೆ ಹೊಡೀತಿದ್ರೂ ಭಾಷಣ ಮುಂದುವರೆಸಿದ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಮೂರು ಕಾಸು ಮಾನ-ಮರ್ಯಾದೆ ಇಲ್ಲದವ್ರು ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಅವ್ರ ಅಪ್ಪನಾಣೆಯಾಗ್ಲೂ ಅಧಿಕಾರಕ್ಕೆ ಬರೋದಿಲ್ಲ. ಸದನದಲ್ಲಿ ಬಿಜೆಪಿಯವ್ರು ಬ್ಲೂ ಫಿಲ್ಮ್ ನೋಡಿದವ್ರು. ಅವತ್ತೆ ನಂಗೂ ಗೊತ್ತಾಗಿದ್ದು ಅಂತ ಮೈಸೂರಿನಲ್ಲಿ ಬಿಜೆಪಿಗೆ ಕಿಚಾಯಿಸಿದರು.
ಬಿಜೆಪಿಯ ಮುಖ್ಯಮಂತ್ರಿಗಳೇ ಜೈಲಿಗೆ ಹೋದವ್ರು, ಬೇರೆಯವ್ರಿಗೆ ಹೇಳ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವ್ರು ಮಗನಿಗೆ 5ಕೋಟಿ ಕಾರು ಕೊಡಿಸಿದ್ದಾರೆ. ಆದ್ರೆ ನನ್ನ ಕನ್ನಡಕ, ವಾಚ್ ಬಗ್ಗೆ ಮಾತನಾಡುತ್ತಾರೆ ಅಂತ ಟಾಂಗ್ ನೀಡಿದ್ರು. ಸಿಎಂ ಇಷ್ಟೆಲ್ಲಾ ಭಾಷಣ ಮಾಡ್ತಿದ್ರೆ ಅತ್ತ ಕಾಂಗ್ರೆಸ್ ನಾಯಕರು ಒಂದು ರೌಂಡ್ ನಿದ್ದೆ ಮುಗಿಸಿದ್ರು.