ನವದೆಹಲಿ: ತಮಿಳುನಾಡಿಗೆ ನೀರು ಕೊಡುವ ದೊಡ್ಡತನ ತೋರಿಸಲು ಹೋಗಿ ಸರ್ಕಾರ ಎಡವಿತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ನ್ಯಾ.ದೀಪಕ್ ಮಿಶ್ರಾ ಪೀಠದ ಮುಂದೆ, ಸಂಕಷ್ಟಕ್ಕಾಗಿ ನಿತ್ಯ 10 ಸಾವಿರ ಕ್ಯೂಸೆಕ್‍ನಂತೆ 6 ದಿನ ನೀರು ಬಿಡುವುದಾಗಿ ಕರ್ನಾಟಕ ಸರ್ಕಾರದ ಪರವಾಗಿ ವಕೀಲ ಫಾಲಿ ನಾರಿಮನ್ ವಾದ ಮಂಡಿಸಿದ್ದರು. ಕರ್ನಾಟಕದ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ವಕೀಲರು 20 ಸಾವಿರ ಕ್ಯೂಸೆಕ್‍ನಂತೆ 10 ದಿನ ನೀರು ಕೊಡಿ ಎಂದು ಪಟ್ಟು ಹಿಡಿದರು.
ಇಬ್ಬರ ವಾದವನ್ನು ಆಲಿಸಿದ ಪೀಠ ಇಬ್ಬರಿಗೂ ಸಮಾನ ನ್ಯಾಯ ಎನ್ನುವಂತೆ ನಿತ್ಯ 15 ಸಾವಿರ ಕ್ಯೂಸೆಕ್‍ನಂತೆ 10 ದಿನ ನೀರು ನೀಡಿ. ಮಂಗಳವಾರ ಬೆಳಗ್ಗೆಯಿಂದಲೇ ನೀರು ಹರಿಸಿ, ನಿಮ್ಮ ಸಮಸ್ಯೆ ಕುರಿತಂತೆ ಕಾವೇರಿ ಮೇಲುಸ್ತುವಾರಿ ಸಮಿತಿಗೆ ನಿಮ್ಮ ಅಹವಾಲು ಸಲ್ಲಿಸಿ ಎಂದು ಕರ್ನಾಟಕಕ್ಕೆ ಸೂಚಿಸಿತು.
ಇದೇ ವೇಳೆ ತಮಿಳುನಾಡು ಕೂಡ ಕಾವೇರಿ ಮೇಲುಸ್ತುವಾರಿ ಸಮಿತಿ ಜೊತೆ ಮಾತನಾಡಲಿ. ಸೆ. 16ಕ್ಕೆ ಮತ್ತೆ ವಿಚಾರಣೆ ನಡೆಸುವ ಹೊತ್ತಿಗೆ ಮತ್ತೆ ಈ ಪ್ರಕ್ರಿಯೆ ಮುಗಿಸಿಕೊಂಡು ಬನ್ನಿ ಎಂದು ಸುಪ್ರೀಂಕೋರ್ಟ್ ಇಬ್ಬರಿಗೆ ತಿಳಿಸಿದೆ.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರತಿಯ ಪಿಡಿಎಫ್ ಪ್ರತಿ ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: CAUVERY ORDER
The post ತಮಿಳುನಾಡಿಗೆ ನೀರು ಕೊಡುವ ದಡ್ಡತನ ತೋರಿಸಿ ಎಡವಿತೆ ಸರ್ಕಾರ? appeared first on Kannada Public tv.