Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80365

ಜಿಯೋದ ಮಾರುಕಟ್ಟೆ ತಂತ್ರವೇನು? ಗ್ರಾಹಕನಿಗೆ ಲಾಭವಾಗುತ್ತಾ? ಇಲ್ಲಿದೆ ಪೂರ್ಣ ಮಾಹಿತಿ

$
0
0

ಜಿಯೋ ಸೇವೆ ಆರಂಭಗೊಂಡ ಬಳಿಕ ಈಗ ಪರ, ವಿರೋಧ ಮಾತುಗಳು ಕೇಳಿ ಬಂದಿದೆ. ಕೆಲವರು ಜಿಯೋದಿಂದ ಜನರಿಗೆ ಏನು ಲಾಭ ಇಲ್ಲ ಈಗ ಇರುವುದಕ್ಕಿಂತಲೂ ಜಾಸ್ತಿ ಹಣವನ್ನು ಪಾವತಿ ಮಾಡಬೇಕು ಎಂದು ಹೇಳಿದರೆ ಕೆಲವರು ಈ ಸೇವೆಯಿಂದ ಲಾಭವಿದೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಯೋಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಮೂಡಬಹುದಾದ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಲು ಇಲ್ಲಿ ಮಾಹಿತಿಗಳನ್ನು ನೀಡಲಾಗಿದೆ.

ಮೊಬೈಲ್ ನೆಟ್‍ವರ್ಕ್ ಮಾರುಕಟ್ಟೆಯಲ್ಲಿ ಜಿಯೋ ಹೇಗಿದೆ?
ಜಿಯೋ 2,50,000 ಕಿ.ಮೀ ಉದ್ದದ ಆಪ್ಟಿಕಲ್ ಫೈಬರ್ ಕೇಬಲ್‍ಗಳನ್ನು ಅಗೆದಿದೆ. ಅಷ್ಟೇ ಅಲ್ಲದೇ 90 ಸಾವಿರಕ್ಕೂ ಹೆಚ್ಚು ಮೊಬೈಲ್ 4ಜಿ ಮೊಬೈಲ್ ಟವರ್‍ಗಳನ್ನು ಸ್ಥಾಪಿಸಿದೆ. ಉಳಿದ ಕಂಪೆನಿಗಳು ಯಾರು ಇಷ್ಟೊಂದು ನೆಟ್‍ವರ್ಕ್ ಸ್ಥಾಪಿಸಿಲ್ಲ. ಇದರ ಜೊತೆಗೆ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಕಮ್ಯೂನಿಕೇಶನ್ ನವರು ತೆಗೆದಿರುವ ಕೇಬಲ್‍ಗಳನ್ನು ಜಿಯೋ ಬಳಸುತ್ತಿದೆ. ಜಿಯೋ 288 ಫೈಬರ್ಸ್ ಅಥವಾ96 ಫೈಬರ್ಸ್ ಬಹಳಷ್ಟು ಕಡೆಗಳಲ್ಲಿ ಬಳಸುತ್ತಿದ್ದರೆ ಉಳಿದ ಕಂಪೆನಿಗಳು 12-24 ಫೈಬರ್ಸ್‍ಗಳನ್ನು ಬಳಸುತ್ತಿದ್ದಾರೆ. ಫೈಬರ್ಸ್‍ ಹೆಚ್ಚು ಬಳಸಿದ್ದಷ್ಟು ಬ್ಯಾಂಡ್ ವಿಡ್ತ್ ಸ್ಪೀಡ್ ಹೆಚ್ಚಿರುತ್ತದೆ.

2ಜಿ, 3ಜಿ ಸೇವೆಯಿಂದ ಕೂಡಲೇ 4ಜಿ ಸೇವೆ ನೀಡಬೇಕಾದರೆ ಬಹಳಷ್ಟು ಬಂಡವಾಳ ಬೇಕಾಗುತ್ತದೆ. ಅಷ್ಟೇ ಅಲ್ಲದೇ ಸಮಯವೂ ಹಿಡಿಯುತ್ತದೆ. ಆದರೆ ರಿಲಯನ್ಸ್ 2010ರಲ್ಲೇ 4800 ಕೋಟಿ ರೂ. ನೀಡಿ ಎಲ್ಲ 22 ವೃತ್ತಗಳಲ್ಲಿ ಸ್ಪೆಕ್ಟ್ರಂ ಖರೀದಿ ಮಾಡಿದೆ. ಆದರೆ ಏರ್‍ಟೆಲ್ 15 ವೃತ್ತಗಳಲ್ಲಿ ಖರೀದಿಸಿದ್ದರೆ ಐಡಿಯಾ 10 ಮತ್ತು ವೋಡಾಫೋನ್ 8 ವೃತ್ತಗಳಲ್ಲಿ ಖರೀದಿಸಿದೆ. ಹೀಗಾಗಿ ಜಿಯೋ ಮಾತ್ರ ಭಾರತಲ್ಲಿ ಎಲ್ಲ ಕಡೆ 4ಜಿ ಸೇವೆ ನೀಡುವ ಕಂಪೆನಿಯಾಗಿದೆ. ಈ ಕಾರಣಕ್ಕಾಗಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ, ‘ದೇಶದ ಅತಿ ದೊಡ್ಡ 4ಜಿ ನೆಟ್‍ವರ್ಕ್’, ‘ವಿಶ್ವದ ಅತಿ ದೊಡ್ಡ 4ಜಿ ನೆಟ್‍ವರ್ಕ್’ ಜಾಹೀರಾತುಗಳು ಪ್ರಸಾರಗೊಂಡಿತ್ತು.

ಇದನ್ನೂ ಓದಿ: ಇ ಕೆವೈಸಿ ಮೂಲಕ ಕೆಲವೇ ನಿಮಿಷಗಳಲ್ಲಿ ಜಿಯೋ ಸಿಮ್ ಆ್ಯಕ್ಟಿವೇಟ್ ಆಗುತ್ತೆ!

ಕೇವಲ 4ಜಿ ಮಾತ್ರ:
ಈಗ ನೀವು 3ಜಿ ನೆಟ್‍ವರ್ಕ್ ಬಳಸುತ್ತಿದ್ದರೂ 3ಜಿ ಸೇವೆ ಇಲ್ಲದ ಸ್ಥಳಕ್ಕೆ ಹೋದರೆ ಅದು ಆಟೋಮ್ಯಾಟಿಕ್‍ಗೆ 2ಜಿ ಸೇವೆ ನೀಡುತ್ತದೆ. ಆದರೆ ಜಿಯೋದಲ್ಲಿ ಈ ರೀತಿಯ ಬದಲಾವಣೆಗೆ ಅವಕಾಶವೇ ಇಲ್ಲ. 4ಜಿ ನೆಟ್‍ವರ್ಕ್ ಸಿಕ್ಕಿದರೆ ಮಾತ್ರ ನಿಮಗೆ ಡೇಟಾ ಸಿಗುತ್ತದೆ. 4ಜಿ ನೆಟ್‍ವರ್ಕ್ ಸಿಗದ ಕಡೆ ಯಾವುದೇ ಡೇಟಾ ಸಿಗುವುದಿಲ್ಲ.

ಭಾರೀ ಬಂಡವಾಳ:
ಮುಕೇಶ್ ಅಂಬಾನಿ ಈ ಯೋಜನೆಗೆ 1,50,000 ಕೋಟಿ ರೂ. ಬಂಡವಾಳ ಹೂಡಿದ್ದಾರೆ. ಉಳಿದ ಕಂಪೆನಿಗಳಿಗೆ ಹೋಲಿಸಿದರೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಇದು ಭಾರೀ ಮೊತ್ತ. ಏರ್‍ಟೆಲ್ ಈಗಾಗಲೇ ತನ್ನ ನೆಟ್‍ವರ್ಕ್ ಆಧುನಿಕರಣಗೊಳಿಸಲು 60 ಸಾವಿರ ಕೋಟಿ ಬಂಡವಾಳ ಹೂಡಿದೆ. ಆರಂಭದ ವರ್ಷಗಳಲ್ಲಿ ಈ ಸೇವೆಯಿಂದ ಯಾವುದೇ ಆದಾಯ ಬರದೇ ಇದ್ದರೂ ಭವಿಷ್ಯದಲ್ಲಿ ಜಿಯೋ ದೇಶದ ದೊಡ್ಡ ಕಂಪೆನಿಯಾಗಿ ಹೊರ ಹೊಮ್ಮುವ ಸಾಧ್ಯತೆಯಿದೆ.

ಸಮುದ್ರದ ಆಳದಲ್ಲೂ ಕೇಬಲ್ ಇದೆ:
ಬಂಗಾಳಕೊಲ್ಲಿ ಮೂಲಕ ಮಲೇಷ್ಯಾ ಮತ್ತು ಸಿಂಗಾಪುರ್ ನಿಂದ ಚೆನ್ನೈಗೆ ಸಂಪರ್ಕ ಸಾಧಿಸಲು 8 ಸಾವಿರ ಕಿ.ಮೀ ಉದ್ದದ ಫೈಬರ್ ಕೇಬಲ್ ಹಾಕಿದೆ. ಯುರೋಪ್‍ನಿಂದ ಮುಂಬೈ 20 ಸಾವಿರ ಕಿ.ಮೀ ಉದ್ದದ ಫೈಬರ್ ಕೇಬಲ್‍ನಲ್ಲಿ ಜಿಯೋ ಒಂದು ಭಾಗವಾಗಿದೆ. ಈ ಕೇಬಲ್‍ಗಳು ಪ್ರತಿ ಸೆಕೆಂಡ್‍ಗೆ 32-40 ಟೆರಾ ಬೈಟ್ ಡೇಟಾ ಕಳುಹಿಸುವ ಸಾಮಥ್ರ್ಯ ಹೊಂದಿದ್ದರೆ ಏರ್‍ಟೆಲ್ 3.84 ಟೆರಾ ಬೈಟ್ಸ್ ಸಾಮಥ್ರ್ಯ ಕೇಬಲ್ ಹೊಂದಿದೆ.

ಏನಿದು ವಾಯ್ಸ್ ಓವರ್ ಎಲ್‍ಟಿಇ?
ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ವೇಗದ ಇಂಟರ್‍ನೆಟ್ ಇದ್ದರೆ ಮಾತ್ರ ಈ ಸೇವೆಯನ್ನು ಗ್ರಾಹಕರು ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಭಾರತದಲ್ಲಿ 2ಜಿ, 3ಜಿ ಫೋನ್‍ಗಳಿದ್ದರೂ ಎಲ್‍ಟಿಇ ತಂತ್ರಜ್ಞಾನ ಹೊಂದಿರುವ ಫೋನ್‍ಗಳ ಸಂಖ್ಯೆ ಕಡಿಮೆ ಇದೆ.

ನಿಮ್ಮ ಫೋನಲ್ಲಿ ಎಲ್‍ಟಿಇ ಚೆಕ್ ಮಾಡೋದು ಹೇಗೆ?
ಸೆಟ್ಟಿಂಗ್ಸ್ ಹೋಗಿ ಸಿಮ್ ಕಾರ್ಡ್ ಮತ್ತು ಮೊಬೈಲ್ ನೆಟ್‍ವರ್ಕ್ ಹೋಗಿ ಚೆಕ್ ಮಾಡಿದಾಗ ಅಲ್ಲಿ ‘VoLTE enabled’  ಇದ್ದರೆ ನಿಮ್ಮ ಫೋನ್ ಎಲ್‍ಟಿಇ ಸಂಪರ್ಕ ಇರುವ ಸಿಮ್ ಗೆ ಬೆಂಬಲ ನೀಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ಜಿಯೋ ಉದ್ಯಮದ ಸ್ವರೂಪ ಏನು?
ಈ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರ ಹೇಳಬೇಕಾದರೆ ಜನರಿಗೆ ಇಂಟರ್‍ನೆಟ್ ಚಟ ಹತ್ತಿಸಿ ದುಡ್ಡು ಮಾಡುವುದು. ಈಗಾಗಲೇ ಮೂರು ತಿಂಗಳು ಉಚಿತ ಇಂಟರ್‍ನೆಟ್ ನೀಡುವುದಾಗಿ ಜಿಯೋ ಹೇಳಿದೆ. ಮೂರು ತಿಂಗಳ ಕಾಲ ವೇಗದಲ್ಲಿ ಡೇಟಾ ಬಳಸಿದ ವ್ಯಕ್ತಿಗೆ ಬ್ರೌಸಿಂಗ್ ಚಟ ಹತ್ತಿದ ಮೇಲೆ ಆತ ಮುಂದೆಯೂ ಈ ಸೇವೆಯನ್ನು ಬಳಸಲು ಮುಂದಾಗುತ್ತಾನೆ. ಆದರೆ ಜನವರಿ ನಂತರ ದುಡ್ಡು ನೀಡಿ ಪ್ಯಾಕ್ ಹಾಕಿಸಿಕೊಳ್ಳಬೇಕು. ಆದರೆ ಈ ಪ್ಯಾಕ್‍ನಲ್ಲಿ ಎಲ್ಲಿಯೂ 50 ರೂ. ನೀಡಿದರೆ 1 ಜಿಬಿ ಡೇಟಾ ಸಿಗುವುದಿಲ್ಲ. ಬದಲಾಗಿ 4ಜಿಬಿ ಡೇಟಾದ ಜೊತೆ ಅವರು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿಕೊಂಡ ವೈಫೈ ಮೂಲಕ ಡೇಟಾ ಬಳಸಿಕೊಂಡರೆ ಮಾತ್ರ ನಿಮಗೆ 28 ದಿನಗಳ ಕಾಲ 50 ರೂ.ಗೆ 1 ಜಿಬಿ ಡೇಟಾ ಸಿಗುತ್ತದೆ.

ಪ್ಲಾನ್ ಹೇಗಿದೆ?
ಸದ್ಯಕ್ಕೆ ಒಟ್ಟು 10 ಪ್ಲಾನ್‍ಗಳನ್ನು ಆರಂಭಿಸಿದೆ. 1 ದಿನಕ್ಕೆ 19 ರೂ. ಪ್ಯಾಕ್ ಅಳವಡಿಸಿದರೆ 200 ಎಂಬಿ ಡೇಟಾ ಸಿಗುತ್ತದೆ. 28 ದಿನಗಳ ಡೇಟಾ ಪ್ಯಾಕ್‍ಗೆ 149 ರೂ. ನಿಗದಿಯಾಗಿದೆ. ಆದರೆ ಈ ಡೇಟಾ ಹಾಕಿದರೆ ನಿಮಗೆ ಕೇವಲ 300 ಎಂಬಿ ಡೇಟಾ ಮಾತ್ರ ಸಿಗುತ್ತದೆ. ಇದರ ಬಳಿಕ 21 ದಿನಗಳ ಅವಧಿಗೆ 299 ರೂ. ಪ್ಲಾನ್ ಇದ್ದು ಇದರಲ್ಲಿ 2ಜಿಬಿ 4ಜಿಬಿ ಡೇಟಾ, 4 ಜಿಬಿ ವೈಫೈ ಉಚಿತ ಸಿಗುತ್ತದೆ.

ನಂತರದ ಪ್ಲಾನ್ 499 ರೂಪಾಯಿಯದ್ದು. ಇದರಲ್ಲಿ 4 ಜಿಬಿ 4ಜಿ ಡೇಟಾ, 8 ಜಿಬಿ ವೈಫೈ ಉಚಿತ. ಈ ಪ್ಲಾನ್ ನಂತರ 999 ರೂ. ವರೆಗೆ ಯಾವುದೇ ಪ್ಲಾನ್ ಇಲ್ಲ. ಈ ಪ್ಲಾನ್‍ನಲ್ಲಿ 10 ಜಿಬಿ ಡೇಟಾ, ವೈಫೈ ಮೂಲಕ 20 ಜಿಬಿ ಡೇಟಾ ಸಿಗುತ್ತದೆ.

ಈ ಪ್ಲಾನ್‍ಗಳು ಪ್ರಯೋಜನಕಾರಿಯೇ ಎಂದು ಲೆಕ್ಕ ಹಾಕಿದರೆ ಯಾರೆಲ್ಲ ಹೆಚ್ಚು ಇಂಟರ್‍ನೆಟ್ ಬಳಸುತ್ತಾರೋ ಅವರಿಗೆ ಇದು ಸಹಕಾರಿಯಾಗಬಹುದು. ಡೇಟಾ ಕಡಿಮೆ ಬಳಸಿ ಕರೆಯೇ ಹೆಚ್ಚು ಮಾಡುವ ಗ್ರಾಹಕರಿಗೆ ಈಗಾಗಲೇ 150 ರೂ. ವಿವಿಧ ಕಂಪೆನಿಗಳು ಪ್ಲಾನ್‍ಗಳಿದ್ದು ಅದು ಸಹಕಾರಿಯಾಗಬಹುದು.

ಇನ್ನು ಡೇಟಾ ಪ್ಲಾನ್‍ಗೆ ಬಂದರೆ 149 ರೂ. ಹಾಕಿದರೆ ನಿಮಗೆ 300 ಎಂಬಿ ಡೇಟಾ ಮಾತ್ರ ಸಿಗುತ್ತದೆ. 28 ದಿನಗಳ ಕಾಲ ನಿಮಗೆ ಕನಿಷ್ಟ ಒಂದು 1 ಜಿಬಿ ಡೇಟಾ ಬೇಕಾದರೆ ಈಗ ನೀವು 250 ರೂ. ರಿಚಾರ್ಜ್ ಮಾಡಿಕೊಳ್ಳುತ್ತೀರಿ ಎಂದಿಟ್ಟುಕೊಳ್ಳಿ. ಆದರೆ ಇದರಲ್ಲಿ ನೀವು 1 ಜಿಬಿ ಡೇಟಾ ಬೇಕಾದರೆ 499 ರೂ. ಪ್ಯಾಕ್ ಹಾಕಿಸಬೇಕಾಗುತ್ತದೆ. ಕಡಿಮೆ ನೆಟ್ ಬಳಸುವ ಮಂದಿಗೆ ಜಿಯೋ ಸಿಮ್ ದುಬಾರಿ ಆದಿತು.

ರಾತ್ರಿ ಉಚಿತ ಹೇಗೆ?
ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಮಾತ್ರ ನಿಮಗೆ ಇಂಟರ್‍ನೆಟ್ ಫ್ರೀ. ಹೀಗಾಗಿ ಈ ಜಿಯೋ ಫ್ರೀ ಸೇವೆ ಬಳಕೆ ಮಾಡಬೇಕಾದರೆ ನೀವು ರಾತ್ರಿಯಿಡಿ ಜಾಗರಣೆ ಮಾಡಬೇಕು.

ಮಹಾನಗರಗಳಲ್ಲಿ ನೆಟ್‍ವರ್ಕ್ ಈಗ ಹೇಗಿದೆ?:
2017 ಮಾರ್ಚ್ ಒಳಗಡೆ ದೇಶ ಶೇ.90 ರಷ್ಟು ಭಾಗಕ್ಕೆ ನಾವು ತಲುಪುತ್ತೇವೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಇದರ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಹಾಟ್‍ಸ್ಪಾಟ್ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ. ಈ ಹಾಟ್‍ಸ್ಪಾಟ್ ಮಹಾನಗರಗಳಲ್ಲಿ ಸಿಗುತ್ತದೆ. ಆದರೆ ಬೇರೆ ಪ್ರದೇಶಗಳಲ್ಲಿ ಸಿಗುತ್ತದೆ ಎಂದು ಹೇಳಲು ಬರುವುದಿಲ್ಲ. ಬೆಂಗಳೂರು ದೊಡ್ಡ ನಗರವಾಗಿದ್ದರೂ ಹಲವು ಕಡೆ ಜಿಯೋ ನೆಟ್‍ವರ್ಕ್ ಸಿಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಹೇಳಿಕೊಂಡಿದ್ದಾರೆ. ಉಳಿದ ನಗರಗಳಲ್ಲೂ ಇದೇ ಸ್ಥಿತಿ ಇದೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಗೊತ್ತಾಗಿದೆ. ಹೀಗಾಗಿ ಹೊಸದಾಗಿ ಸಿಮ್ ಖರೀದಿಸುವ ಮಂದಿ ಮತ್ತು ಜಿಯೋಗೆ ಪೋರ್ಟ್ ಮಾಡಿಕೊಳ್ಳುವ ಮಂದಿ ಇದನ್ನು ಗಮನಿಸಿಕೊಳ್ಳಬೇಕು. ಡ್ಯುಯಲ್ ಸಿಮ್ ಇರುವ ಗ್ರಾಹಕರು ಒಂದು ಸ್ಲಾಟ್‍ನಲ್ಲಿ ಹಳೇಯ ಸಿಮ್ ಇನ್ನೊಂದು ಸ್ಲಾಟ್‍ನಲ್ಲಿ ಜಿಯೋ ಸಿಮ್ ಹಾಕಿಕೊಳ್ಳಬಹುದು. ನಾನು ಸಿಂಗಲ್ ಸಿಮ್ ಸ್ಮಾರ್ಟ್‍ಫೋನ್ ಬಳಸುತ್ತೇನೆ. ಇದರಲ್ಲೇ ಜಿಯೋ ಸಿಮ್ ಹಾಕುತ್ತೇನೆ ಎಂದು ಆಲೋಚನೆ ಮಾಡುವವರು ಈ ಮೇಲೆ ತಿಳಿಸಿದ ಎಲ್ಲ ವಿಚಾರಗಳನ್ನು ಅವಲೋಕನ ಮಾಡಿ ಸಿಮ್ ಖರೀದಿ ಮಾಡುವುದು ಉತ್ತಮ.

ಜಿಯೋ ಆಪ್ಲಿಕೇಶನ್‍ನಿಂದ ದುಡ್ಡು ಹೇಗೆ?
ಪ್ರಸ್ತುತ ಈಗ ಜಿಯೋಗೆ ಸಂಬಂಧಿಸಿದ 12 ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿ ಕೋಡ್ ಜನರೇಟ್ ಮಾಡಿ ಸಿಮ್ ಪಡೆಯಬೇಕು. 1500 ರೂ. ಮೌಲ್ಯದ ಈ ಅಪ್ಲಿಕೇಶನ್‍ಗಳು 1 ವರ್ಷ ಉಚಿತ ಎಂದು ಜಿಯೋ ಹೇಳಿದೆ ಹೀಗಾಗಿ ಈ ಅಪ್ಲಿಕೇಶನ್‍ಗಳನ್ನೆ ನೋಡುವುದಾದರೆ,

ಜಿಯೋ ಪ್ಲೇ: ಮನೆಗಳಿಗೆ ಈಗ ಟಿವಿ ವಾಹಿನಿಗಳು ಕೇಬಲ್ ಸಂಪರ್ಕ ಮತ್ತು ಡಿಟಿಎಚ್‍ನಿಂದ ಬರುತ್ತದೆ. ಆದರೆ ಈ ಜಿಯೋ ಪ್ಲೇಯಲ್ಲಿ ಟಿವಿ ವಾಹಿನಿಗಳು ಸಿಗುತ್ತದೆ. ಈ ವಾಹಿನಿಗಳನ್ನು ನೀವು ಇಂಟರ್‍ನೆಟ್ ಮೂಲಕ ಉಚಿತವಾಗಿ ನೋಡಬಹುದು

ಜಿಯೋ ಆನ್ ಡಿಮಾಂಡ್: ಎಚ್‍ಡಿ ಕ್ವಾಲಿಟಿಯಲ್ಲಿ ಇನ್ನು ಮುಂದೆ ಚಲನ ಚಿತ್ರಗಳನ್ನು ಈ ಆಪ್ ಮೂಲಕ ಉಚಿತವಾಗಿ ನೋಡಬಹುದು.

ಜಿಯೋ ಬೀಟ್ಸ್: ಮ್ಯೂಸಿಕ್ ಆಪ್, ಚಲನ ಚಿತ್ರ ಸೇರಿದಂತೆ ಎಲ್ಲ ಮ್ಯೂಸಿಕ್‍ಗಳು ಉಚಿತವಾಗಿ ನಿಮಗೆ ಸಿಗಲಿದೆ.

ಜಿಯೋಮ್ಯಾಗ್ಸ್: ದೇಶದ ಪ್ರಸಿದ್ಧ ಮ್ಯಾಗಜಿನ್‍ಗಳು ಸಿಗುತ್ತದೆ. ದುಡ್ಡು ನೀಡಿ ಪುಸ್ತಕ ಖರೀದಿಸದೇ ಉಚಿತವಾಗಿ ಓದಬಹುದು.

ಈಗ ಆಪ್ ಉಚಿತವಾಗಿ ನೀಡಿದ್ದರೂ 2017 ಜನವರಿಯಿಂದ ಗ್ರಾಹಕ ಹಣ ನೀಡಬೇಕು. ಈ ಮೇಲಿನ ಕಾರಣಗಳಿಂದ ಮುಂದಿನ ದಿನಗಳಲ್ಲಿಈ ಅಪ್ಲಿಕೇಶನ್‍ಗಳಿಂದ ಜಿಯೋಗೆ ಬಂಪರ್ ಆದಾಯದ ನಿರೀಕ್ಷೆ ಇದೆ. ಸದ್ಯ ದೇಶದಲ್ಲಿ ರಿಲಯನ್ಸ್‍ಗೆ 4ಜಿ ಸ್ಪರ್ಧೆ ನೀಡಬಲ್ಲ ಕಂಪೆನಿ ಏರ್‍ಟೆಲ್ ಮಾತ್ರ. ಆದರೆ ಅವರು ಜಿಯೋದಂತೆ ಮೂಲಸೌಕರ್ಯ ಒತ್ತು ಕೊಟ್ಟು ಈಗಲೇ ಈ ಆಪ್‍ಗಳನ್ನು ಬಿಡುಗಡೆ ಮಾಡುವುದು ಕಷ್ಟ. ಈ ಮೇಲೆ ತಿಳಿಸಿದ ಎಲ್ಲ ಕಾರಣಗಳಿಂದ ಮುಂದಿನ ದಿನಗಳಲ್ಲಿ ಜಿಯೋ ಡಿಜಿಟಲ್ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸ್ಥಾಪಿಸಲಿದೆ ಎಂದು ಡಿಜಿಟಲ್ ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಜಿಯೋದಂತೆ ಬಿಎಸ್‍ಎನ್‍ಎಲ್‍ಗೆ ಮಾಡಲು ಸಾಧ್ಯವೇ?
ನಿಯಮವನ್ನು ಉಲ್ಲಂಘಿಸಿ ಖಾಸಗಿ ಕಂಪೆನಿಗಳಿಗೆ 2ಜಿ ಸ್ಪೆಕ್ಟ್ರಂ ಹಂಚಿಕೆ ಮಾಡಿದ್ದು ಬಿಎಸ್‍ಎನ್‍ಎಲ್‍ಗೆ ಬಿದ್ದ ಹೊಡೆತ. ಈ ಹೊಡೆತದಿಂದ ಈಗ ಸ್ವಲ್ಪ ಚೇತರಿಕೆ ಕಾಣುತ್ತಿರುವ ಬಿಎಸ್‍ಎನ್‍ಎಲ್ 7 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಲಾಭ ಕಂಡಿದೆ. 2016ರ ಜನವರಿಯಲ್ಲಿ ಅಂದಿನ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿ, 2014ರಲ್ಲಿ ಬಿಎಸ್‍ಎನ್‍ಎಲ್ 8 ಸಾವಿರ ಕೋಟಿ ನಷ್ಟದಲ್ಲಿತ್ತು. ಆದರೆ ಈಗ 672 ಕೋಟಿ ರೂ. ಲಾಭದಲ್ಲಿದ್ದು, ಈ ಹಣಕಾಸು ವರ್ಷದಲ್ಲಿ 2 ಸಾವಿರ ಕೋಟಿ ರೂ. ಲಾಭದ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಜಿಯೋಗೆ ಸ್ಪರ್ಧೆ ಎನ್ನುವಂತೆ ಈಗ 249 ರೂ. ವೈರ್‍ಲೈನ್ ಬ್ರಾಡ್‍ಬ್ಯಾಂಡ್ ಮೂಲಕ ಜಿಯೋಗಿಂತಲೂ ಕಡಿಮೆ ಅಂದರೆ 1 ರೂಪಾಯಿಗೆ 1 ಜಿಬಿ ಡೇಟಾ ನೀಡುವುದಾಗಿ ಬಿಎಸ್ ಎನ್ಎಲ್ ಹೇಳಿಕೊಂಡಿದೆ. ಸರ್ಕಾರಿ ಕಂಪೆನಿಯಾಗಿರುವ ಬಿಎಸ್‍ಎನ್‍ಎಲ್‍ಗೆ ಲಾಭದ ಉದ್ದೇಶ ಇದ್ದರೂ ಸೇವೆಯೇ ಮುಖ್ಯವಾಗಿರುತ್ತದೆ. ಹೀಗಾಗಿ ಡೇಟಾ ನೀಡುವುದರಲ್ಲಿ ಬಿಎಸ್‍ಎನ್‍ಎಲ್ ಜಿಯೋಗೆ ಸ್ಪರ್ಧೆ ನೀಡಬಹುದೇ ವಿನಾಃ ಉಳಿದ ಕ್ಷೇತ್ರದಲ್ಲಿ ಸ್ಪರ್ಧೆ ನೀಡಲು ಬರುವುದಿಲ್ಲ.

ಜಿಯೋ ಸೇವೆಯಿಂದ ಜನರಿಗೆ ಲಾಭವೇ?
ಈ ಹಿಂದೆ ಕರೆಯಲ್ಲಿ ದರ ಸಮರ ಆಗಿದ್ದಾಗ ಕಂಪನಿಗಳು ಹೊಸ ಹೊಸ ಆಫರ್‍ಗಳನ್ನು ನೀಡುತ್ತಿದ್ದವು. ಆದರೆ ಈಗ ಕಡಿಮೆ ಬೆಲೆಯಲ್ಲಿ ಡೇಟಾ ನೀಡಲು ಸಾಧ್ಯವಿದ್ದರೂ ಕಂಪೆನಿಗಳು ತಮ್ಮೊಳಗೆ ರಹಸ್ಯ ಮಾತುಕತೆ ನಡೆಸಿ ದರ ಇಳಿಸಲು ಮುಂದಾಗುತ್ತಿರಲಿಲ್ಲ. ಹೀಗಾಗಿ ಇಲ್ಲಿಯವರೆಗೆ ಯಾವುದೇ ಡೇಟಾ ಸಮರ ಆರಂಭಗೊಂಡಿರಲಿಲ್ಲ. ಆದರೆ ಜಿಯೋದಿಂದಾಗಿ ಮಾರುಕಟ್ಟೆಯಲ್ಲಿ ತಮ್ಮ ಅಸ್ವಿತ್ವ ಉಳಿಸಿಕೊಳ್ಳಲು ಕಂಪೆನಿಗಳ ಮಧ್ಯೆ ಮತ್ತೆ ಡೇಟಾ ಸಮರ ಆರಂಭಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಏರ್‍ಟೆಲ್ ಡೇಟಾ ಪ್ಯಾಕ್ ಕಡಿಮೆ ಮಾಡಿದ್ದು ಮುಂದಿನ ದಿನಗಳಲ್ಲಿ ಉಳಿದ ಕಂಪೆನಿಗಳು ಕಡಿಮೆ ಮಾಡಲಿದೆ.

ಭವಿಷ್ಯದಲ್ಲಿ ಜಿಯೊ:
ವೈಫೈ ಹಾಟ್‍ಸ್ಪಾಟ್ ಮತ್ತು ನೆಟ್‍ವರ್ಕ್ ಎಲ್ಲ ಕಡೆ ಸುಧಾರಣೆಯಾದರೆ ಜಿಯೋ ಉಳಿದ ಕಂಪೆನಿಗಳನ್ನು ಮಾರುಕಟ್ಟೆ ಸೋಲಿಸುವುದರಲ್ಲಿ ಅನುಮಾನವೇ ಇಲ್ಲ. 1 ಜಿಬಿಗೆ 250 ರೂ. ತಿಂಗಳು 2, 3 ಜಿಬಿ ಮೊಬೈಲ್ ಡೇಟಾ ಪಡೆದುಕೊಳ್ಳುವ ಗ್ರಾಹಕ 499 ರೂ.ಗೆ 4 ಜಿಬಿ 4ಜಿ ಡೇಟಾ+ 8 ಜಿಬಿ ವೈಫೈ ಡೇಟಾ ನೀಡುವ ಜಿಯೋಗೆ ಹೋಗುವ ಸಾಧ್ಯತೆಯೇ ಹೆಚ್ಚು. ಒಟ್ಟಿನಲ್ಲಿ ಅಪ್ಲಿಕೇಶನ್, ವೈಫೈ ಹಾಟ್‍ಸ್ಪಾಟ್, ಫೈಬರ್‍ಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ ದೇಶದಲ್ಲಿ ಜಿಯೋ ನಂಬರ್ ಒನ್ ಟೆಲಿಕಾಂ ಕಂಪೆನಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ಲೇಷಣೆ ಆರಂಭಗೊಂಡಿದೆ.

ಇದನ್ನೂ ಓದಿ: ಜಿಯೋ ಎಫೆಕ್ಟ್; ಏರ್‍ಟೆಲ್ ಡೇಟಾ ಪ್ಯಾಕ್ ದರ ಭಾರೀ ಕಡಿತ

ಕೊನೆಯ ಮಾತು:
ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಯನ್ನು ಯಾರು ನೀಡುತ್ತಾರೋ ಆ ಕಂಪೆನಿಗೆ ಗ್ರಾಹಕ ಹೋಗುವುದು ಸಾಮಾನ್ಯ. ಒಂದು ವೇಳೆ ಜಿಯೋ ಸೇವೆ ಉತ್ತಮವಾಗಿಲ್ಲ ಎಂದಾದರೆ ಸಿಮ್ ಪೋರ್ಟ್ ಮಾಡಲು ಅವಕಾಶ ಇದ್ದೆ ಇದೆ. ಆದರೆ ಆರಂಭದಲ್ಲೇ ಜಿಯೋ ಸಿಮ್‍ಗೆ ಪೋರ್ಟ್ ಮಾಡುವ ಮುನ್ನ ಈ ಮೇಲೆ ತಿಳಿಸಿದ ಅಂಶಗಳನ್ನು ನೋಡಿಕೊಂಡು ಪೋರ್ಟ್ ಮಾಡಿಕೊಂಡರೆ ಉತ್ತಮ.

jio_1472738328475

 

The post ಜಿಯೋದ ಮಾರುಕಟ್ಟೆ ತಂತ್ರವೇನು? ಗ್ರಾಹಕನಿಗೆ ಲಾಭವಾಗುತ್ತಾ? ಇಲ್ಲಿದೆ ಪೂರ್ಣ ಮಾಹಿತಿ appeared first on Kannada Public tv.


Viewing all articles
Browse latest Browse all 80365

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ