ಹಾಸನ: ಅರಕಲಗೂಡು ತಾಲೂಕಿನ ಪಾರಸನಹಳ್ಳಿ ಅನ್ನೋ ಪುಟ್ಟ ಗ್ರಾಮದ ಹೊರಭಾಗದಲ್ಲಿರೋ ಒಂಟಿ ಮನೆಯಲ್ಲಿ ನಾಲ್ಕು ಮಕ್ಕಳೊಂದಿಗೆ ಭಾಗ್ಯ ವಾಸವಾಗಿದ್ರು. ಜಮೀನಿಲ್ಲದ ಈ ಕುಟುಂಬಕ್ಕೆ ಬದುಕೋಕೆ ಯಾವ ಆಧಾರವೂ ಇರಲಿಲ್ಲ. ತಮ್ಮ ಕುಟುಂಬದ ಕಷ್ಟವನ್ನ ಪತ್ರದ ಮೂಲಕ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬರೆದು ಸಹಾಯ ಕೇಳಿದ್ದ ಬಾಲಕಿ ಪೂಜಾಲಕ್ಷ್ಮೀಗೆ ಸಹಾಯದ ಭರವಸೆಯನ್ನ ನೀಡಲಾಗಿತ್ತು.
ಹಣವಿಲ್ಲದೆ ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ್ದ ಪೂಜಾಲಕ್ಷ್ಮೀಯನ್ನ ಸರ್ಕಾರಿ ಪ್ರೌಢ ಶಾಲೆಗೆ ಮತ್ತೆ ಸೇರಿಸಲಾಗಿದೆ. ಕುಟುಂಬ ನಿರ್ವಹಣೆಗೆಂದು ಬೆಳಕು ಕಾರ್ಯಕ್ರಮದ ಮೂಲಕ ಒಂದು ಹಸುವನ್ನು ಕೊಡಿಸಲಾಗಿದೆ. ರೈತ ಗವಿರಂಗೇಗೌಡ ಅವರು 5 ಸಾವಿರ ಕಡಿಮೆ ಹಣಕ್ಕೆ ಹಸುವನ್ನ ಮಾರಾಟ ಮಾಡಿ ಸಹಾಯ ಮಾಡಿದ್ದಾರೆ. ಪ್ರತಿದಿನ ಹಸು 14 ಲೀಟರ್ ಹಾಲು ನೀಡುತ್ತದೆ. ಕುಟುಂಬಕ್ಕೆ ಬೆಳಕು ನೀಡಿರುವ ಪಬ್ಲಿಕ್‍ಟಿವಿಗೆ ಗ್ರಾಮಸ್ಥರು ಹಾಗೂ ಕುಟುಂಬದ ಸದಸ್ಯರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಹೆಸರಿನಲ್ಲಿ ಭಾಗ್ಯವಿದ್ರೂ ಜೀವನದಲ್ಲಿ ದೌರ್ಭಾಗ್ಯಗಳನ್ನೇ ಕಂಡ ಭಾಗ್ಯರ ಜೀವನ ಕೊಂಚ ನಿರಾಳವಾಗಿದೆ. ನೊಂದ ಕುಟುಂಬದಲ್ಲಿ ಸಣ್ಣ ಕಿರುನಗೆ ಚೆಲ್ಲಿದೆ. ಇವರ ಈ ನಗು ನಿರಂತರವಾಗಿರಲಿ ಅನ್ನೋದೇ ನಮ್ಮ ಹಾರೈಕೆ.
The post ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ಬಾಲಕಿ ಮತ್ತೆ ಶಾಲೆ ಸೇರಿದ್ಲು appeared first on Kannada Public tv.