ಉಡುಪಿ: ಆತ ಕೂಲಿ ಕಾರ್ಮಿಕ. ಬರೋ ಕಾಸು ಸಂಸಾರ ತೂಗಿಸೋದಕ್ಕಷ್ಟೇ ಸಾಕಾಗುತ್ತಿತ್ತು. ಸಮಾಜ ಸೇವೆ ಮಾಡಬೇಕು, ಇತರರ ನೋವಿಗೆ ಸ್ಪಂದಿಸಬೇಕು ಅನ್ನೋ ಆಸೆ ಆಸೆಯಾಗಿಯೇ ಉಳಿದುಕೊಂಡಿತ್ತು. ಆದ್ರೆ ಈ ಬಾರಿ ಮೈ ಚರ್ಮ ಸುಲಿಸಿಕೊಂಡು, ಉಪವಾಸ ಇದ್ದುಕೊಂಡು ಸಮಾಜ ಸೇವೆಯ ಆಸೆಯನ್ನು ಕೈಗೂಡಿಸಿಕೊಂಡಿದ್ದಾರೆ.
ಕಾಂಕ್ರೀಟ್ ಸೆಂಟ್ರಿಂಗ್ ಕೆಲಸ ಮಾಡುವ ರವಿ ಈ ಬಾರಿ ಕೃಷ್ಣಜನ್ಮಾಷ್ಟಮಿಗೆ ವಿಭಿನ್ನ ವೇಷ ಹಾಕಿದ್ರು. ವೇಷದ ಹಿಂದೊಂದು ಉದ್ದೇಶ ಇಟ್ಟುಕೊಂಡು ಮೂರು ದಿನ ಅನ್ನ- ಆಹಾರವಿಲ್ಲದೆ ದುಡಿದಿದ್ದರು. ಊರೂರು ಸುತ್ತಿ ಜನರಿಂದ ನಾಲ್ಕು ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದರು. ಬಂದ ಎಲ್ಲಾ ಹಣವನ್ನು ರವಿ ಇದೀಗ ದಾನ ಮಾಡಿದ್ದಾರೆ.
ರವಿ ಕಳೆದ ನಾಲ್ಕು ವರ್ಷಗಳಿಂದ ವೇಷ ಹಾಕಿ ಧನಸಹಾಯ ಮಾಡುತ್ತಿದ್ದಾರೆ. ಈ ಬಾರಿ ಹಾಲಿವುಡ್ ಪಿಶಾಚಿಯ ವೇಷ ಹಾಕಲು ಒಂದು ದಿನ ತಗೆದುಕೊಂಡಿದ್ರು. ನಂತರ ತಿರುಗಾಟಕ್ಕೆ ಎರಡು ದಿನ, ಹೀಗೆ ಮೂರು ದಿನ ಉಪವಾಸ ಮಾಡಿ ಕಿಡ್ನಿ ವೈಫಲ್ಯ, ನ್ಯುಮೋನಿಯಾ, ಸಿಕಲ್‍ಸೆಲ್ ಅನೀಮಿಯಾ, ಶ್ರವಣದೋಷ ಇರುವ ನಾಲ್ಕು ಮಕ್ಕಳಿಗೆ ತಲಾ ಒಂದು ಲಕ್ಷ ರೂಪಾಯಿ ಸಹಾಯ ಮಾಡಿದ್ದಾರೆ. ಸುಮಾರು 50 ಸಾವಿರ ರೂಪಾಯಿ ವೇಷ- ಓಡಾಟಕ್ಕೆ ಖರ್ಚು ಮಾಡಿದ್ರೂ ನಯಾ ಪೈಸೆ ಸ್ವಂತಕ್ಕೋಸ್ಕರ ಇಟ್ಟುಕೊಂಡಿಲ್ಲ.
ರವಿ ದೇಹಪೂರ್ತಿ ಗಮ್ ಹಾಕಿಕೊಂಡು ಫೋಮ್, ಸ್ಪಾಂಜ್ ಅಂಟಿಸಿಕೊಂಡಿದ್ದರು. ವೇಷ ಕಳಚುವಾಗ ರವಿಯ ಮೈಮೇಲಿನ ಚರ್ಮವೂ ಕಳಚಿದೆ. ನಾನು ನಾಲ್ಕು ದಿನ ನೋವು ಅನುಭವಿಸಿದರೂಪರವಾಗಿಲ್ಲ. ನಾಲ್ಕು ಮಕ್ಕಳ ಪ್ರಾಣ ಉಳಿದರೆ ಸಾಕು ಅಂತ ಹೇಳ್ತಾ ಮುಂದಿನ ವರ್ಷದ ವೇಷದ ಬಗ್ಗೆ ಚಿಂತಿಸಲು ಶುರು ಮಾಡಿದ್ದಾರೆ ರವಿ ಕಟಪಾಡಿ.
The post ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ 4 ಲಕ್ಷ ರೂ. ದಾನ ಮಾಡಿದ ಕೂಲಿ ಕಾರ್ಮಿಕ appeared first on Kannada Public tv.