ಬೆಂಗಳೂರು: ಜೈಲಿನಿಂದ ತಪ್ಪಿಸಿಕೊಂಡಿದ್ದ ಕೈದಿ ಡೇವಿಡ್ ಸೆರೆ ಸಿಕ್ಕಿದ್ದಾನೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಆಗಸ್ಟ್ 31ರಂದು ತರಕಾರಿ ವಾಹನದಲ್ಲಿ ಡೇವಿಡ್ ಅಲಿಯಾಸ್ ಆರ್ಯ ಎಸ್ಕೇಪ್ ಆಗಿದ್ದ.
ಡೇವಿಡ್ ಪತ್ತೆಗೆ ಮೂರು ವಿಶೇಷ ತಂಡ ರಚಿಸಲಾಗಿತ್ತು. ಸಂಜಯನಗರದ ಜಗ್ಗನಹಳ್ಳಿಯಲ್ಲಿದ್ದ ತನ್ನ ಅಜ್ಜಿಯನ್ನು ನೋಡಲು ಡೇವಿಡ್ ಬರ್ತಿದ್ದಾನೆ ಅನ್ನೋ ಮಾಹಿತಿ ಇತ್ತು. ಮಾಹಿತಿ ಬೆನ್ನತ್ತಿದ ಪೊಲೀಸರು ಜಗ್ಗನಹಳ್ಳಿಯಲ್ಲಿ ಕೈದಿಗಾಗಿ ಕಾಯುತ್ತಿದ್ದರು. ಬೆಂಗಳೂರು-ಬಳ್ಳಾರಿ ರಸ್ತೆಯ ಬಾರ್‍ವೊಂದರ ಮುಂದೆ ಅನಾಮಿಕ ರೀತಿಯಲ್ಲಿ ಡೇವಿಡ್ ಕುಳಿತುಕೊಂಡಿದ್ದ. ಇದನ್ನು ಗಮನಿಸಿದ ಪೊಲೀಸರು ಬಂಧಿಸಲು ಮುಂದಾದಾಗ ಕೈದಿ ಡೇವಿಡ್ ಸ್ಥಳದಿಂದ ಕಾಲ್ಕಿತ್ತ. ಓಡಿ ಓಡಿ ಸುಸ್ತಾದ ಬಳಿಕ ಕೊನೆಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ದೇವನಹಳ್ಳಿ ಮೂಲದ ಡೇವಿಡ್ ಮನೆಗಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ. ಕಳೆದ ಮೂರು ವರ್ಷದಿಂದ ಸೆರೆವಾಸದಲ್ಲಿದ್ದ ಡೇವಿಡ್‍ಗೆ ಮಾನಸಿಕ ಖಿನ್ನತೆ ಕಾಡ್ತಾ ಇತ್ತು. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಕೊಡಿಸಲಾಗಿತ್ತು. ಆದ್ರೆ, ಖಿನ್ನತೆ ಸಂಪೂರ್ಣವಾಗಿ ಗುಣಮುಖವಾಗಿರಲಿಲ್ಲ. ಆಸ್ಪತ್ರೆಯಲ್ಲಿ ಜಾಗ ಇಲ್ಲ ಅಂತ ಜೈಲಿಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡ್ತಾ ಇದ್ರು.
ಜೈಲಿನಿಂದ ತಪ್ಪಿಸಿಕೊಂಡಿದ್ದು ಹೇಗೆ?: ಎಂದಿನಂತೆ ಪ್ರತಿದಿನ ಮುಂಜಾನೆ ಮೂರು ಗಂಟೆ ವೇಳೆಗೆ ಜೈಲಿಗೆ ತರಕಾರಿ ತೆಗೆದುಕೊಂಡು ವ್ಯಾನ್ ಬಂದಿತ್ತು. ಎಲ್ಲಾ ತರಕಾರಿ ಇಳಿಸಿ ವ್ಯಾನ್ ಹೊರಹೋಗಿದೆ. ಅದಾದ ಸ್ವಲ್ಪ ಹೊತ್ತಿನಲ್ಲೇ ಡೇವಿಡ್ ಕಾಣಿಸಿಲ್ಲ. ಎಲ್ಲಾ ಲಿಸ್ಟ್ ಮಾಡಿ ಇಡೀ ಜೈಲೇಲ್ಲಾ ಹುಡುಕಿದ್ರು ಡೇವಿಡ್ ಪತ್ತೆಯಾಗಿರಲಿಲ್ಲ. ಕೊನೆಗೆ ಜೈಲಿನಲ್ಲಿರೋ ಸಿಸಿಟಿವಿ ದೃಶ್ಯಾವಳಿ ನೋಡಿದ್ರೆ, ತರಕಾರಿ ಹೊತ್ತು ಬಂದಿದ್ದ ವ್ಯಾನ್ ಗೋಣಿ ಚೀಲಗಳ ಮಧ್ಯೆ ಜೈಲಿನ ಮುಖ್ಯ ದ್ವಾರದಿಂದಲೇ ಡೇವಿಡ್ ಪರಾರಿಯಾಗಿದ್ದ.
The post ತರಕಾರಿ ವ್ಯಾನ್‍ನಲ್ಲಿ ಓಡಿ ಹೋಗಿದ್ದ ಕೈದಿ ಸಿಕ್ಕಿಬಿದ್ದ appeared first on Kannada Public tv.