ಬೆಂಗಳೂರು: ಬಿಜೆಪಿ, ಆರ್‍ಎಸ್‍ಎಸ್‍ನವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಎಂಬ ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಸಂಸ್ಥಾಪಕರೇ ಸ್ವಾತಂತ್ರ್ಯ ಹೋರಾಟಗಾರರು. ಆಗ ಬಿಜೆಪಿಯ ನಾಯಕರು ಕಾಂಗ್ರೆಸ್‍ನಲ್ಲಿದ್ರು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ರು. ರಮ್ಯಾಗೆ ಪಾಕಿಸ್ತಾನದ ಗಾಳಿ ಬೀಸಿರಬೇಕು ಎಂದು ಶೋಭಾ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಇತಿಹಾಸ ಓದಿಲ್ಲ ಅನ್ನಿಸುತ್ತೆ!: ಕಾರ್ಮಲ್ ಶಾಲೆಯಲ್ಲಿ ಓದಿದ ಅವರು ದೇಶದ ಇತಿಹಾಸವನ್ನೇ ಓದಿಲ್ಲ ಎನಿಸುತ್ತದೆ. ಬಿಜೆಪಿಯ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಕಾಂಗ್ರೆಸ್‍ನಲ್ಲಿ ಮಂತ್ರಿಯಾಗಿದ್ದರು. ಆರ್‍ಎಸ್‍ಎಸ್ ಸಂಸ್ಥಾಪಕ ಹೆಡಗೇವಾರ್ ಕೂಡ ಕಾಂಗ್ರೆಸ್ ಸದಸ್ಯರಾಗಿದ್ರು. ಅಂದು ದೇಶಕ್ಕಾಗಿ ಹೋರಾಟ ಮಾಡಿದ ಎಲ್ಲರೂ ಕಾಂಗ್ರೆಸ್‍ನಲ್ಲಿದ್ದರು. ರಮ್ಯಾ ಪದೇ ಪದೇ ಲಘುವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೆ ಮಾತನಾಡುವಷ್ಟು ನೀವು ದೊಡ್ಡವರಾಗಿಲ್ಲ. ಆರ್.ಎಸ್.ಎಸ್, ಬಿಜೆಪಿ ಬಗ್ಗೆ ತಪ್ಪು ಹೇಳಿಕೆ ನೀಡಿದ್ದಕ್ಕಾಗಿ ರಮ್ಯಾ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ರಮ್ಯಾ ಪಾಕಿಸ್ತಾನಕ್ಕೆ ಹೋದ ಮೇಲೆ ವಿವಾದಗಳ ಮೇಲೆ ವಿವಾದಗಳನ್ನ ಸೃಷ್ಟಿಸುತ್ತಿದ್ದಾರೆ. ರಮ್ಯಾ ಅವರಿಗೆ ಪಾಕಿಸ್ತಾನದ ಗಾಳಿ ಬೀಸಿರಬೇಕು. ಅಂದು ದೇಶಕ್ಕಾಗಿ ಹೋರಾಟ ಮಾಡಿದವರೆಲ್ಲ ಕಾಂಗ್ರೆಸ್‍ನಲ್ಲಿದ್ರು. ಆದ್ರೆ ಅದನ್ನು ರಾಜಕೀಯಕ್ಕೆ ಬಳಸಲು ಕಾಂಗ್ರೆಸ್ ಕೆಲ ನಾಯಕರು ಮುಂದಾದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿಸರ್ಜಿಸಿ ಎಂದು ಗಾಂಧೀಜಿ ಹೇಳಿದ್ದರು ಎಂದು ಶೋಭಾ ಹೇಳಿಕೆ ನೀಡಿದ್ದಾರೆ.
ರಮ್ಯಾ ಹೇಳಿದ್ದೇನು?: ನಮಗೆ ಸ್ವಾತಂತ್ರ್ಯ ಬರಲು ಕಾಂಗ್ರೆಸ್ ಕಾರಣ. ಬಿಜೆಪಿ, ಆರ್‍ಎಸ್‍ಎಸ್‍ನವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಅವರು ಬ್ರಿಟೀಷರ ಜೊತೆ ಸೇರಿಕೊಂಡಿದ್ದರು. ಎಂಬ ಹೇಳಿಕೆ ನೀಡಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.
ರಮ್ಯಾ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿರುವ ಮಂಡ್ಯ ಬಿಜೆಪಿ ಕಾರ್ಯಕರ್ತರು ರಮ್ಯಾ ಅವರಿಗೆ ಅರೆಹುಚ್ಚು ಹಿಡಿದಿದೆ. ಕೂಡಲೇ ಕಾಂಗ್ರೆಸ್‍ನವರು ರಮ್ಯಾ ಅವರಿಗೆ ಬುದ್ಧಿ ಹೇಳಿ ಅವರಿಗೆ ಚಿಕಿತ್ಸೆ ಕೊಡಿಸಬೇಕು. ಜೊತೆಗೆ ತಾವು ನೀಡಿರುವ ಹೇಳಿಕೆಯನ್ನ ಹಿಂಪಡೆಯುವಂತೆ ಸೂಚಿಸಬೇಕು. ಇಲ್ಲದಿದ್ರೆ ರಮ್ಯಾ ವಿರುದ್ಧ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಚಾರಕ್ಕಾಗಿ ಹೇಳಿಕೆ ನೀಡ್ತೀರಿ ಯಾಕೆ ; ಪತ್ರಕರ್ತರ ಪ್ರಶ್ನೆಗೆ ರಮ್ಯಾ ಉತ್ತರ ಹೀಗಿತ್ತು
The post ರಮ್ಯಾಗೆ ಪಾಕಿಸ್ತಾನದ ಗಾಳಿ ಬೀಸಿರಬೇಕು: ಶೋಭಾ appeared first on Kannada Public tv.