– ಪಾಳು ಬಿದ್ದ ಜಾಗ ಅಭಿವೃದ್ಧಿಪಡಿಸಿದೆ ಬಿಬಿಎಂಪಿ
ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಮರಗಳ ಸಂಖ್ಯೆ ಕ್ಷೀಣಿಸ್ತಿವೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಇಲ್ಲೊಂದು ಕಡೆ ಬರಡು ಭೂಮಿಯಲ್ಲಿ ಹಸಿರು ಮತ್ತೆ ಕಂಗೊಳಿಸುತ್ತಿವೆ. ಸಾವಿರಾರು ಔಷಧಿಯ ಸಸ್ಯಗಳು, ನೂರಾರು ಮರಗಳು ತುಂಬಿಕೊಂಡಿರುವ ವೈವಿಧ್ಯಮಯ ಪಾರ್ಕ್‍ವೊಂದು ಬೆಂಗಳೂರಿನಲ್ಲಿ ರೆಡಿಯಾಗಿದೆ.
ಬತ್ತಿದ ಕೆರೆಯಂಗಳದಲ್ಲಿ ಹಸಿರು ಚಿಗುರು: ಒಂದು ಕಡೆ ನೇರೆಳೆ, ಹಲಸು, ಮಾವು, ಹೊಂಗೆ, ಬೀಟೆಯಂತಹ ಸಾಲು ಸಾಲು ಮರಗಳು. ಮತ್ತೊಂದು ಕಡೆ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ, ಕಣ್ಣಿನ ತೊಂದರೆ ಹೀಗೆ ಎಲ್ಲ ರೋಗಕ್ಕೂ ಮದ್ದು ನೀಡುವ ಔಷಧಿಯ ಸಸ್ಯಗಳು. ಇವೆಲ್ಲಾ ಒಟ್ಟಾಗಿ ಸಿಗೋದು ನಾಗವಾರ ಬಳಿ ಇರುವ ಹೆಣ್ಣೂರು ಪಾರ್ಕ್‍ನಲ್ಲಿ. ಹೆಣ್ಣೂರಿನಲ್ಲಿ ಬತ್ತಿ ಒಣಗಿ ಹೋಗಿದ್ದ ಕೆರೆಯನ್ನ ಸರ್ಕಾರದ ಐದು ಕೋಟಿ ಅನುದಾನದಲ್ಲಿನ ಬಿಬಿಎಂಪಿ ಅಭಿವೃದ್ಧಿಪಡಿಸಿದೆ. 33 ಎಕರೆ ವಿಸ್ತೀರ್ಣದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಔಷಧಿ ಸಸಿಗಳನ್ನ ಹಾಗೂ ಸಾವಿರದ ಐದು ನೂರಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳನ್ನ ಬೆಳೆಸಲಾಗುತ್ತಿದೆ. ಕಬ್ಬನ್‍ಪಾರ್ಕ್, ಲಾಲಬಾಗ್ ಹೊರತುಪಡಿಸಿದ್ರೆ ಅತಿದೊಡ್ಡ ಪಾರ್ಕ್ ಇದಾಗಿದೆ.
ಈಗಾಗಲೇ ವಾಕಿಂಗ್ ಮಾಡಲು ಎರಡು ಕಿ.ಮೀ ಉದ್ದದ ಪಾಥ್ ವೇ ಮತ್ತು ಜನರು ವಿಶ್ರಾಂತಿ ಮಾಡಲು ಶೆಡ್ ಹಾಗೂ ನೀರಿನ ಹೊಂಡಗಳನ್ನ ನಿರ್ಮಾಣ ಮಾಡಲಾಗಿದೆ. ಬತ್ತಿ ಹೊಗಿದ್ದ ಕೆರೆಯ ಅಂಗಳ ಮತ್ತೆ ಹಸಿರಿನಿಂದ ಕಂಗೊಳಿಸುತ್ತಿದೆ. ಹೀಗಾಗಿ ಪ್ರತಿನಿತ್ಯ ಸಾಕಷ್ಟು ಜನರು ಇಲ್ಲಿಗೆ ಬಂದು ಹೋಗುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೀಗೇ ಪಾಳು ಬಿದ್ದ ಜಾಗಗಳನ್ನ ಅಭಿವೃದ್ಧಿ ಪಡಿಸಿ ಪಾರ್ಕ್ ನಿರ್ಮಾಣ ಮಾಡಿದ್ರೆ ಗಾರ್ಡನ್ ಸಿಟಿ ಎಂಬ ಪಟ್ಟ ಕಳೆದುಕೊಳ್ಳುತ್ತಿರುವ ಬೆಂಗಳೂರು ಮತ್ತೆ ಆ ಹೆಸರನ್ನ ಉಳಿಸಿಕೊಳ್ಳಬಹುದು. ಇದಕ್ಕೆ ಸರ್ಕಾರ, ಬಿಬಿಎಂಪಿ ಮನಸ್ಸು ಮಾಡಬೇಕು.
The post ಬೆಂಗಳೂರಿನ ಹೆಣ್ಣೂರು ಕೆರೆಯಂಗಳದಲ್ಲಿ ಸುಂದರ ಪಾರ್ಕ್ appeared first on Kannada Public tv.