ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಪರ್ವತ ಶ್ರೇಣಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಎಫೆಕ್ಟ್ ಜಿಲ್ಲೆಯ ಜನರಿಗೆ ತಟ್ಟಿದೆ. ಜಿಲ್ಲೆಯು ಕೃಷ್ಣ, ವೇದಗಂಗಾ, ಧೂದಗಂಗಾ, ಮಲಪ್ರಭ ಹಾಗೂ ಘಟಪ್ರಭ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.
ಕೃಷ್ಣ, ವೇದಗಂಗಾ ಹಾಗೂ ಧೂದಗಂಗಾ ನದಿಗೆ 2.10 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಕಾರಣ ಚಿಕ್ಕೋಡಿ ತಾಲೂಕಿನ 7 ಹಾಗೂ ರಾಯಭಾಗ ತಾಲೂಕಿನ 3 ಹಾಗೂ ಅಥಣಿ ತಾಲೂಕಿನ ಒಂದು ಸೇತುವೆ ಮುಳುಗಡೆಯಾಗಿದೆ. ಕಬ್ಬು, ಶೇಂಗಾ, ಜೋಳ, ಸೋಯಾಬಿನ್, ತರಕಾರಿ ಬೆಳೆದಿದ್ದ 5100 ಹೆಕ್ಟೇರ್ ಕೃಷಿ ಜಮೀನು ನೀರಿನಿಂದ ಆವೃತವಾಗಿದೆ.
ನೆರೆಯಿಂದಾಗಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ತೋಟದ ಮನೆಗಳು ನಡುಗಡ್ಡೆಯಾಗಿ ಪರಿಣಮಿಸಿದೆ. ಇಲ್ಲಿ 50 ಕ್ಕೂ ಮನೆಗಳಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ತೋಟದಿಂದ ಜನರನ್ನು ಕರೆತರಲು ಜಿಲ್ಲಾಡಳಿತ ಬೋಟ್ ವ್ಯವಸ್ಥೆ ಮಾಡಿದೆ.
ಗಂಟೆ ಗಂಟೆಗೂ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ರಾಯಭಾಗ ತಾಲೂಕಿನ ಬಾವನ ಸವದತ್ತಿಯ ಸುಗಂಧಿಕಾ ದೇವಾಲಯ ನೀರಿನನಲ್ಲಿ ಮುಳಗಿದೆ. ನಾಗರ ಪಂಚಮಿ ಹಿನ್ನೆಲೆಯಲ್ಲಿ ಭಕ್ತರು ದೇವರ ದರ್ಶನದಿಂದ ವಂಚಿತರಾಗಿದ್ದಾರೆ. ಭಕ್ತರ ನದಿಗೆ ಪೂಜೆ ಸಲ್ಲಿಸಿ ವಾಪಸ್ ಆಗುವ ಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದ ಅನೇಕ ಮನೆಗಳು ನೀರಲ್ಲಿ ಮುಳುಗಿದ್ದು ಜಿಲ್ಲಾಡಳಿತ ಬೋಟ್ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
The post ಬೆಳಗಾವಿಯ 5100 ಹೆಕ್ಟೇರ್ ಕೃಷಿ ಭೂಮಿ ಜಲಾವೃತ appeared first on Kannada Public tv.