ಸಿಡ್ನಿ: ಒಂದು ಮನೆ ಕಟ್ಟಬೇಕು ಅಂದ್ರೆ ಅದಕ್ಕೆ ಕಡಿಮೆ ಅಂದ್ರೂ 6 ತಿಂಗಳಿನಿಂದ 1 ವರ್ಷ ಸಮಯ ಬೇಕು. ಆದ್ರೆ ಎರಡೇ ದಿನದಲ್ಲಿ ಮನೆ ಕಟ್ಟಬಲ್ಲ ರೋಬೋಟ್‍ವೊಂದನ್ನ ಆಸ್ಟ್ರೇಲಿಯಾದಲ್ಲಿ ಅನ್ವೇಷಣೆ ಮಾಡಲಾಗಿದೆ.
ಹೇಡ್ರಿಯನ್-ಎಕ್ಸ್ ಹೆಸರಿನ ಈ ರೊಬೋಟ್ ನೋಡಲು ದೈತ್ಯ ಟ್ರಕ್‍ನಂತೆ ಕಾಣುತ್ತದೆ. ಈ ರೊಬೋಟ್ 1 ಗಂಟೆಗೆ 1000 ಇಟ್ಟಿಗೆಗಳನ್ನ ಒಂದರ ಮೇಲೊಂದು ಜೋಡಿಸುತ್ತದೆ. ಸೀಮೆಂಟ್ ಬದಲು ಕಂಸ್ಟ್ರಕ್ಷನ್ ಗ್ಲೂನಿಂದ ಇಟ್ಟಿಗೆಗಳನ್ನ ಭದ್ರಪಡಿಸಲಾಗುತ್ತದೆ. ವೈರಿಂಗ್ ಮತ್ತು ಪ್ಲಂಬಿಂಗ್‍ಗಾಗಿ ಎಲ್ಲೆಲ್ಲಿ ಜಾಗ ಬಿಡಬೇಕು ಎಂಬುದೂ ಕೂಡ ಈ ರೋಬೋಟ್‍ಗೆ ತಿಳಿದಿದೆ. ಅಲ್ಲದೆ ಇಟ್ಟಿಗೆಯನ್ನ ಬೇಕಾದ ಸೈಜ್‍ಗೆ ಕಟ್ ಮಾಡಿಕೊಳ್ಳುತ್ತದೆ.
ಆಸ್ಟ್ರೇಲಿಯಾದ ಫಾಸ್ಟ್‍ಬ್ರಿಕ್ಸ್ ರೊಬೋಟಿಕ್ಸ್ ಸಂಸ್ಥೆ ಈ ರೋಬೋಟ್ ತಯಾರಿಸಿದ್ದು, 4.5 ಮಿಲಿಯನ್ ಪೌಂಡ್ (ಸುಮಾರು 40 ಕೋಟಿ ರೂ.) ಹಣ ಖರ್ಚಾಗಿದೆ. ಈ ರೋಬೋಟ್ ತಯಾರಿಸೋಕೆ 10 ವರ್ಷ ಹಿಡಿದಿದೆ.
ಇಟ್ಟಿಗೆ ಜೋಡಿಸಲೆಂದೇ ಸಾಕಷ್ಟು ಕಾರ್ಮಿಕರು ಶ್ರಮ ವಹಿಸಿ ಕೆಲಸ ಮಾಡ್ತಾರೆ. ಅದನ್ನ ಮತ್ತಷ್ಟು ಸುಲಭವಾಗಿಸೋಕೆ ಈ ರೋಬೋಟನ್ನ ಕಂಡುಹಿಡಿಯಲಾಗಿದೆ ಅಂತಾರೆ ಇದರ ಅನ್ವೇಷಕ ಮಾರ್ಕ್ ಪಿವ್ಯಾಕ್. ಸದ್ಯಕ್ಕೆ ಈ ರೊಬೋಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಮಾದರಿಯನ್ನ ಈ ವಿಡಿಯೋದಲ್ಲಿ ನೋಡಬಹುದು. ಎಲ್ಲಾ ಅಂದುಕೊಂಡಂತೆ ಆದ್ರೆ ಒಂದು ವರ್ಷದೊಳಗೆ ಮನೆ ಕಟ್ಟೋ ರೊಬೋಟ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
The post ಇಟ್ಟಿಗೆ ಜೋಡಿಸಿ ಎರಡೇ ದಿನದಲ್ಲಿ ಮನೆ ಕಟ್ಟುತ್ತೆ ರೋಬೋಟ್! appeared first on Kannada Public tv.