ಮುಂಬೈ: ಹಿಂದಿನ ಕಾಲದಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡ್ತಿದ್ರು. ಅನಂತರ ಸೀಮೆಎಣ್ಣೆ ಸ್ಟವ್ ಬಳಕೆ ಹೆಚ್ಚಾಯ್ತು. ಇತ್ತೀಚೆಗಂತೂ ಸಾಕಷ್ಟು ವೆರೈಟಿಯ ಗ್ಯಾಸ್‍ಸ್ಟವ್ ಹಾಗೂ ಇಂಡಕ್ಷನ್ ಸ್ಟವ್‍ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದ್ರೆ ಮುಂಬೈನಲ್ಲಿ ಬಾಣಿಸಿಗರೊಬ್ಬರು ಕಲ್ಲಿನ ಮೇಲೆ ಅಡುಗೆ ಮಾಡಿ ಫೇಮಸ್ ಆಗಿದ್ದಾರೆ.
ಹೈದರಾಬಾದ್ ಮೂಲದವರಾದ 50 ವರ್ಷದ ನಫೀಜ್ ಅನ್ಸಾರಿ ಕಳೆದ 26 ವರ್ಷದಿಂದ ಮುಂಬೈನಲ್ಲಿ ಕಲ್ಲಿನ ಮೇಲೆ ಅಡುಗೆ ಮಾಡ್ತಿದ್ದಾರೆ. ಇವರು 1982ರಲ್ಲಿ ಸೌದಿ ಅರೇಬಿಯಾಗೆ ಹೋಗಿದ್ದಾಗ ಕಲ್ಲಿನ ಮೇಲೆ ಅಡುಗೆ ಮಾಡೋದನ್ನ ಕಲಿತುಕೊಂಡ್ರಂತೆ.
ಭಾರತಕ್ಕೆ ಮರಳಿದ ನಂತರ ಇವರೂ ಕೂಡ ಸೌದಿಯಿಂದ ಕಲ್ಲನ್ನು ತರಿಸಿಕೊಂಡಿದ್ದಾರೆ. 2 ಅಡಿ ಉದ್ದ ಹಾಗೂ 2.5 ಅಡಿ ಅಗಲವಿರುವ ಈ ಕಲ್ಲಿನ ಸ್ಲ್ಯಾಬ್‍ಗಳು 50 ಕೆಜಿ ತೂಕವಿದೆ. ಇದನ್ನ ಸ್ಟೀಲ್ ಸ್ಟ್ಯಾಂಡ್ ಮೇಲೆ ಇಟ್ಟು ಕಲ್ಲಿನ ಮೇಲೆ ಸಿಲ್ವರ್ ಫಾಯಿಲ್ ಹಾಕಿ ಅಡುಗೆ ಮಾಡೋಕೆ ಶುರು ಮಾಡ್ತಾರೆ. ಈ ಕಲ್ಲಿನ ಸ್ಟವ್‍ಗೆ ಕಲ್ಲಿದ್ದಲನ್ನ ಇಂಧನವಾಗಿ ಬಳಸ್ತಾರೆ. ಇವರ ಬಳಿ ಈಗ ಒಟ್ಟು 7 ಕಲ್ಲಿನ ಸ್ಲ್ಯಾಬ್‍ಗಳಿದ್ದು ಜೈನರು ಸಸ್ಯಹಾರಿಗಳಾದ ಕಾರಣ ಅವರಿಗಾಗಿ ಪ್ರತ್ಯೇಕ ಕಲ್ಲನ್ನ ಬಳಸ್ತಾರೆ.
ಕಲ್ಲಿನ ಮೇಲೆಯೇ ಚಿಕನ್, ಮಟನ್, ಮೀನು ಹಾಗೂ ತರಕಾರಿಗಳನ್ನ ಬೇಯಿಸ್ತಾರೆ. ಅಲ್ಲದೆ ಕಲ್ಲಿನಿಂದ ಮಾಡಿದ ಅಡುಗೆಗಳಿಗೆ ವಿಶೇಷವಾದ ಹೆಸರುಗಳನ್ನ ನೀಡಿದ್ದಾರೆ. ಪತ್ತರ್ ಕಾ ಮುರ್ಗ್ (ಹಿಂದಿಯಲ್ಲಿ ಪತ್ತರ್ ಅಂದ್ರೆ ಕಲ್ಲು), ಪತ್ತರ್ ಕಾ ಪಲಾವ್, ಪತ್ತರ್ ಕಾ ಕುರ್ಮಾ ಅಂತ ಹೆಸರಿಟ್ಟಿದ್ದಾರೆ. ಇವರು ಉತ್ತರ ಭಾರತ ಶೈಲಿಯ ಅಡುಗೆಗಳಲ್ಲದೆ ಚೈನೀಸ್ ಅಡುಗೆಗಳನ್ನೂ ಇದೇ ಕಲ್ಲಿನ ಮೇಲೆ ತಯಾರಿಸ್ತಾರೆ.
ತವಾದಲ್ಲಿ ಅಡುಗೆ ಮಾಡಿದ್ರೆ ಮಾಂಸ ಮತ್ತು ತರಕಾರಿಯ ಸ್ವಾದವೆಲ್ಲಾ ಹಾಳಾಗುತ್ತೆ. ಆದ್ರೆ ಕಲ್ಲಿನ ಮೇಲೆ ಅಡುಗೆ ಮಾಡಿದ್ರೆ ಹಾಗೆ ಆಗಲ್ಲ. ಇದರಿಂದ ಅಡುಗೆಯಲ್ಲಿ ಬೇರೆಯದ್ದೇ ಟೆಸ್ಟ್ ಇರುತ್ತೆ ಅಂತಾರೆ ನಫೀಜ್. ಇವರು ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ಮನೆಯ ಫಂಕ್ಷನ್‍ವೊಂದರಲ್ಲೂ ಕಲ್ಲಿನಲ್ಲಿ ಅಡುಗೆ ಮಾಡಿದ್ದು, ಶಾರುಕ್ ಖಾನ್ ಕೂಡ ಇವರ ಅಡುಗೆಗೆ ಮನಸೋತಿದ್ದಾರಂತೆ.
ಈ ಕಲ್ಲು 5 ವರ್ಷಗಳ ತನಕ ಬಾಳಿಕೆ ಬರುತ್ತದೆ. ಒಂದು ಕಲ್ಲಿನ ಬೆಲೆ 3 ಸಾವಿರ ರೂ. ಆದ್ರೆ ಅದನ್ನು ಆಮದು ಮಾಡಿಕೊಳ್ಳುವಾಗ 54 ಸಾವಿರ ರೂ ತಗುಲುತ್ತದೆ. ಆದ್ರೆ ಖರ್ಚು ಮಾಡಿದ ಹಣಕ್ಕೆ ಮೋಸವಿಲ್ಲ ಅಂತಾರೆ ನಫೀಜ್.
The post 26 ವರ್ಷದಿಂದ ಕಲ್ಲಿನ ಮೇಲೆ ಅಡುಗೆ ಮಾಡ್ತಿರೋ ಬಾಣಸಿಗ! appeared first on Kannada Public tv.