ಉಡುಪಿ: ಕರಾವಳಿಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಗಾಳಿಯೂ ಮಳೆಯ ಜೊತೆಗೆ ಕೈಜೋಡಿಸಿದ್ದು ಕಡಲನ್ನು ಬುಡಮೇಲು ಮಾಡುತ್ತಿವೆ. ಸಮುದ್ರ ತೀರದಲ್ಲಿ ರಕ್ಕಸ ಗಾತ್ರದ ಅಲೆಗಳು ಏಳುತ್ತಿದೆ. ಸಮುದ್ರವನ್ನೇ ಅಂಗಳವೆಂದು ಭಾವಿಸಿರುವ ಮೀನುಗಾರ ಕುಟುಂಬಗಳು ಈ ಬಾರಿಯ ಕಡಲ್ಕೊರೆತಕ್ಕೆ ಬೆಚ್ಚಿಬಿದ್ದಿದೆ.
ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಶೀರೂರುವರೆಗೆ ಅಲ್ಲಲ್ಲಿ ರಕ್ಕಸಗಾತ್ರದ ಅಲೆಗಳನ್ನು ದಡಕ್ಕಪ್ಪಳಿಸುತ್ತಿದ್ದಾನೆ. ಕುಂದಾಪುರದ ಕೋಡಿ ಬೇಂಗ್ರೆ ಕೆಮ್ಮಣ್ಣು ವ್ಯಾಪ್ತಿಯಲ್ಲಿ ತೀವ್ರ ಕಡಲ್ಕೊರೆತವಾಗುತ್ತಿದೆ. ತಟದ ಸುಮಾರು ಸಾವಿರಕ್ಕೂ ಹೆಚ್ಚು ಕುಟುಂಬಗಳು ಭೀತಿಯಲ್ಲಿದೆ. ಸ್ಥಳೀಯರು ತೆಂಗಿನ ಮರಗಳನ್ನು, ಬೃಹತ್ ಗಾತ್ರದ ಕಲ್ಲುಗಳನ್ನು ಸಮುದ್ರಕ್ಕೆ ಅಡ್ಡಲಾಗಿ ಕಟ್ಟಿ ಮನೆಯನ್ನು ಉಳಿಸಿದ್ದಾರೆ.
ಕೋಡಿಬೆಂಗ್ರೆ ಸಿಕ್ಕಾಪಟ್ಟೆ ಡೇಂಜರಸ್. ಇಲ್ಲಿ ಎರಡು ನದಿಗಳು ಸಮುದ್ರವನ್ನು ಸಂಗಮಗೊಳ್ಳುತ್ತದೆ. ಹೀಗಾಗಿ ಶಾಶ್ವತ ತಡೆಗೋಡೆ ಬೇಕಾಗುತ್ತದೆ. ಸೊರಕೆ ಸಚಿವರಾಗಿದ್ದಾಗ ಈ ಕೆಲಸ ಮಾಡಲು ಮುಂದಾಗಿದ್ದರು. ಮೊದಲ ಹಂತದಲ್ಲಿ 500 ಮೀಟರ್ ತಡೆಗೋಡೆಯ ಕಾಮಗಾರಿ ಆರಂಭವಾಯ್ತು. ಶುರುವಾದ ಕಾಮಗಾರಿ 75 ಮೀಟರ್‍ಗೆ ನಿಂತಿದೆ. ಆಮೇಲೆ ಸೊರಕೆಯ ಅಧಿಕಾರ ಹೋಯ್ತು. ಅಧಿಕಾರಿಗಳು, ಎಂಜಿನಿಯರ್‍ಗಳು ಇತ್ತ ತಲೆಯೇ ಹಾಕಿಲ್ಲ. ಆಳುವ ವರ್ಗದ ವಿರುದ್ಧ ಕೋಡಿ ಬೆಂಗ್ರೆಯ ಜನ ಕೊತಕೊತ ಕುದಿಯುತ್ತಿದ್ದಾರೆ.
ಅತ್ತ ಕೇರಳದಲ್ಲಿ, ಇತ್ತ ಗೋವಾ-ಮುಂಬೈಯಲ್ಲಿ ಸಮುದ್ರದ ಅಬ್ಬರಕ್ಕೆ ಸರ್ಕಾರ ಲಗಾಮು ಹಾಕಿದೆ. ಇಲ್ಲಿ ಕರ್ನಾಟಕದಲ್ಲಿ ಸರ್ಕಾರ ಸಮುದ್ರಕ್ಕೆ ವರ್ಷಂಪ್ರತಿ ಕಲ್ಲು ಹಾಕುವ ಮೂಲಕ ನೀರಿನಲ್ಲಿ ಹೋಮ ಇಡುತ್ತಿದೆ. ಮಳೆಗಾಲದಲ್ಲಿ ಸಮುದ್ರಕ್ಕೆ ಕಿಸೆಗೆ ಹಣ ಸುರಿಯುವ ತಾತ್ಕಾಲಿಕ ಯೋಜನೆ ಕೈಬಿಡಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಪರಿಹಾರ ಕೈಗೊಳ್ಳಬೇಕು.
The post ಉಡುಪಿಯಲ್ಲಿ ಕಡಲ್ಕೊರೆತ: ಭೀತಿಯಲ್ಲಿ ಸಮುದ್ರತೀರದ ನಿವಾಸಿಗಳು appeared first on Kannada Public tv.