ಮಂಡ್ಯ: ಇಂದು ಸಂಜೆಯೊಳಗೆ ನಮ್ಮ ನೆಚ್ಚಿನ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ನಾವೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್‍ಗೆ ಎಚ್ಚರಿಕೆ ನೀಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ, ಬಿಂಡಿಗನವಿಲೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಕಾಂಗ್ರೆಸ್‍ನ ನಾರಾಯಣಮೂರ್ತಿ ಅವರಿಗೆ, ಹೈಕಮಾಂಡ್ ಈಗಾಗಲೇ ಬಿಫಾರಂ ನೀಡಲು ಸೂಚಿಸಿದೆ. ಆದ್ರೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉದ್ದೇಶಪೂರ್ವಕವಾಗಿ ಬಿಫಾರಂ ನೀಡದೇ ಗೊಂದಲ ಸೃಷ್ಟಿಸಿದ್ದಾರೆ. ಇದರ ಜೊತೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಜೊತೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಸೋಲಿಗೆ ಸಂಚು ನಡೆಸುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಕಾಂಗ್ರೆಸ್‍ನ ನಾರಾಯಣಮೂರ್ತಿಗೆ ಟಿಕೆಟ್ ನೀಡಬೇಕು ಇಲ್ಲದಿದ್ದರೆ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಮೇಗೌಡ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಟಿಕೆಟ್ ಆಕಾಂಕ್ಷಿ ನಾರಾಯಣಮೂರ್ತಿ ಈಗಾಗಲೇ ಹೈಕಮಾಂಡ್ ನನಗೆ ಬಿಫಾರಂ ನೀಡಲು ಸೂಚಿಸಿದೆ. ಅದರಂತೆ ಸ್ಥಳೀಯ ನಾಯಕರು ಬಿಫಾರಂ ನೀಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದ್ಯದ ಬೆಳವಣಿಗೆ ನೋಡಿದರೆ ಮಂಡ್ಯ ಕಾಂಗ್ರೆಸ್‍ನಲ್ಲಿನ ಭಿನ್ನಮತ ಮತ್ತೊಮ್ಮೆ ಬೀದಿಗೆ ಬಂದಂತಾಗಿದೆ.