ಮುಂಬೈ: ತನ್ನ ಹುಟ್ಟು ಹಬ್ಬದ ದಿನದಂದೇ 21 ವರ್ಷದ ಯುವತಿಯೊಬ್ಬಳು ಮಹಡಿಯಿಂದ ಬಿದ್ದು ಸಾವನ್ನಪ್ಪಿರೋ ಘಟನೆ ಮುಂಬೈನಲ್ಲಿ ನಡೆದಿದೆ.
ಸಿಬಾ ನೇಸುದುರೈ ನಾದಾರ್(21) ಟರೇಸ್ ಮೇಲಿಂದ ಬಿದ್ದು ಜೀವ ಕಳೆದುಕೊಂಡ ಯುವತಿ. ಮುಂಬೈನ ವಿರಾರ್‍ನ ಕೇತನ್ ಅಪಾರ್ಟ್‍ಮೆಂಟ್‍ನಲ್ಲಿ ಈ ಘಟನೆ ನಡೆದಿದೆ.
ಸೀಬಾ ಮೂಲತಃ ಕೇರಳದವಳಾಗಿದ್ದು ತನ್ನ ಹುಟ್ಟುಹಬ್ಬಕ್ಕಾಗಿ ವಿರಾರ್‍ನ ಕೇತನ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಸಂಬಂಧಿಕರ ಮನೆಗೆ ಬಂದಿದ್ದಳು. ವಿರಾರ್ ಪೊಲೀಸರ ಪ್ರಕಾರ, ವಾಕ್ ಮಾಡಲೆಂದು ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಟೆರೇಸ್‍ಗೆ ಹೋದ ಸೀಬಾ ಹಿಂದಿರುಗಲೇ ಇಲ್ಲ.
ಕೇಕ್ ಕಟ್ ಮಾಡಿದ ನಂತರ ಸೀಬಾ ಸ್ವಲ್ಪ ಹೊತ್ತು ಗಾಳಿಯಲ್ಲಿ ಓಡಾಡಬೇಕೆಂದು ಬಯಸಿ ಟೆರೇಸ್‍ಗೆ ಹೋಗಿದ್ದಾಳೆ. ನಂತರ ನಾಲ್ಕು ಮಹಡಿಯ ಕಟ್ಟಡದಿಂದ ಆಯತಪ್ಪಿ ಬಿದ್ದು ಸೀಬಾ ಸಾವನ್ನಪ್ಪಿದ್ದಾಳೆಂದು ಆಕೆಯ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿ ತನಿಖೆ ಮುಂದುವರೆಸಿದ್ದಾರೆ.