ಮೈಸೂರು: ಮದುವೆ ವಯಸ್ಸಿಗೆ ಬಂದಿರುವ ಮೂವರು ಹೆಣ್ಣುಮಕ್ಕಳಲ್ಲಿ ಮೊದಲನೆಯವರು ಹುಟ್ಟುತ್ತಲೆ ಬುದ್ದಿಮಾಂದ್ಯೆ, ಉಳಿದಿಬ್ಬರು ಬೆಳೆಯುತ್ತಾ ವಿಕಲಚೇತನರಾಗಿದ್ದಾರೆ. ಇವರ ಸಾಕುವ ಜವಬ್ದಾರಿ ವಿಧವೆ ತಾಯಿಯದು. ಈ ಕುಟುಂಬದ ವ್ಯಥೆಯ ವಿವರ ಇಲ್ಲಿದೆ.
ಮೈಸೂರಿನ ರಾಮಕೃಷ್ಣನಗರದ ಸಾಯಿ ಬಾಬಾ ದೇವಸ್ಥಾನದ ರಸ್ತೆಯಲ್ಲಿರುವ ಲತಾ ಎಂಬವರ ಈ ಕುಟುಂಬ ವಿಧಿಯ ಕ್ರೂರ ಆಟಕ್ಕೆ ಸಿಲುಕಿ ನಲುಗುತ್ತಿದೆ. ಲತಾ ಅವರ ಹಿರಿಯ ಮಗಳು 32 ವರ್ಷದ ಇಂದುಮತಿ ಹುಟ್ಟು ಬುದ್ದಿಮಾಂದ್ಯೆ, ಎರಡನೇ ಪುತ್ರಿ 29 ವರ್ಷದ ಸೌಮ್ಯಾ ಹಾಗೂ ಮೂರನೇ ಪುತ್ರಿ 26 ವರ್ಷದ ಶಿಲ್ಪಾ ಒಂದು ಹಂತದಲ್ಲಿ ಚೆನ್ನಾಗಿದ್ದರು. ಬೆಳೆಯುತ್ತಾ ಬೆಳೆಯುತ್ತಾ ಅಂಗವಿಕಲರಾಗಿದ್ದಾರೆ.
ಪತಿ ನಿಧನದ ಮೇಲೆ ಲತಾ ಅವರು ಇಡೀ ಕುಟುಂಬದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಒಬ್ಬ ಬುದ್ದಿಮಾಂದ್ಯೆ ಮಗಳು, ಇಬ್ಬರು ಅಂಗವಿಕಲ ಮಕ್ಕಳನ್ನು ಸಾಕಲು ಲತಾ ಅವರು ಪಡಬಾರದ ಪಾಡು ಪಡುತ್ತಿದ್ದಾರೆ. ಪತಿಯ ಪಿಂಚಣಿ ಹಣ 1,700 ರೂಪಾಯಿ, ಮೂರು ಮಕ್ಕಳಿಗೆ ಸೇರಿ ಬರುವ ಅಂಗವಿಕಲ ಮಾಸಿಕ ಸಹಾಯಧನ 4,800 ರೂಪಾಯಿಯಲ್ಲಿ ಜೀವನ ದೂಡುತ್ತಿದ್ದಾರೆ.
ಸೌಮ್ಯಾ ಮತ್ತು ಶಿಲ್ಪಾ ಕಾಲುಗಳು ಕಳೆದುಕೊಂಡರು ಕೈಗಳಿಗೇನು ಸಮಸ್ಯೆ ಇಲ್ಲ. ಸೌಮ್ಯಾ ಅಲ್ಪಸ್ವಲ್ಪ ಕಂಪ್ಯೂಟರ್ ಕಲಿತಿದ್ದು ಪರಿಪೂರ್ಣವಾಗಿ ಕಂಪ್ಯೂಟರ್ ಶಿಕ್ಷಣ ಸಿಕ್ಕರೆ ಎಲ್ಲಾದರೂ ಕೆಲಸಕ್ಕೆ ಹೋಗಬಹುದು. ಇನ್ನೂ, ಶಿಲ್ಪಾಳಿಗೆ ಕಂಪ್ಯೂಟರ್ ಕಲಿಯುವ ಆಸಕ್ತಿ ಇದ್ದು, ಯಾರಾದರೂ ಉಚಿತವಾಗಿ ತರಬೇತಿ ನೀಡಬೇಕಿದೆ.
ಸೌಮ್ಯಾ ಮತ್ತು ಶಿಲ್ಪಾಳಿಗೆ ಕಂಪ್ಯೂಟರ್ ಶಿಕ್ಷಣ ದೊರೆತು ಅದರಿಂದ ಕೆಲಸ ಸಿಕ್ಕರೆ ಈ ಮನೆಯ ಕಷ್ಟ ಸ್ವಲ್ಪ ನೀಗಬಹುದು. ಮನೆಯ ಬಾಡಿಗೆಗೆ ಹಣ, ವೈದ್ಯಕೀಯ ವೆಚ್ಚಕ್ಕೆ ಹಣ ಎಲ್ಲನ್ನೂ ನಿಭಾಯಿಸಲು ತಾಯಿ ಲತಾಗೆ ಇವರು ನೆರವಾಗಬಹುದು. ಜೊತೆಗೆ, ಅವರ ಭವಿಷ್ಯದಲ್ಲೂ ಬೆಳಕು ಕಾಣಬಹುದು. ಈ ಆಶಯದೊಂದಿಗೆ ಅವರು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.