ದುಬೈ: ಟೆಸ್ಟ್ ಬೌಲಿಂಗ್‍ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಆರ್ ಅಶ್ವಿನ್ ಅವರಿಗೆ ಐಸಿಸಿಯ ವರ್ಷದ ಕ್ರಿಕೆಟಿಗ ಪ್ರಶಸ್ತಿ ಒಲಿದಿದೆ.
ನ್ಯೂಜಿಲೆಂಡ್ ಮತ್ತು ಕೆಲ ದಿನಗಳ ಹಿಂದೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಹಿಂದೆ ರಾಹುಲ್ ದ್ರಾವಿಡ್(2004), ಗೌತಮ್ ಗಂಭೀರ್ (2009) ಈ ಪ್ರಶಸ್ತಿ ಲಭಿಸಿತ್ತು.
ಇದರ ಜೊತೆಯಲ್ಲೇ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಯೂ ಅಶ್ವಿನ್‍ಗೆ ಲಭಿಸಿದೆ. ಈ ಹಿಂದೆ ಈ ಪ್ರಶಸ್ತಿ ರಾಹುಲ್ ದ್ರಾವಿಡ್(2004), ಸಚಿನ್ ತೆಂಡೂಲ್ಕರ್(2010) ರಲ್ಲಿ ಸಿಕ್ಕಿತ್ತು.
ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರಿಗೆ ಐಸಿಸಿ ವರ್ಷದ ಏಕದಿನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಸಿಕ್ಕಿದರೆ, ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಅವರಿಗೆ ವರ್ಷದ ಅತ್ಯುತ್ತಮ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ. ವರ್ಷದ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ವೆಸ್ಟ್ ಇಂಡೀಸ್ ನ ಕಾರ್ಲೋಸ್ ಬ್ರಾಥ್ ವೇಟ್‍ಗೆ ಸಿಕ್ಕಿದೆ.
ಟಿ20 ವಿಶ್ಪಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಮುಸ್ತಫಿಜುರ್‍ಗೆ ಪ್ರಶಸ್ತಿ ಲಭಿಸಿದರೆ, ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ 2016 ಏಪ್ರಿಲ್ 3 ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ವಿಂಡೀಸ್‍ಗೆ ಗೆಲುವು ತಂದುಕೊಟ್ಟಿದ್ದಕ್ಕೆ ಬ್ರಾಥ್‍ವೇಟ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ದಕ್ಷಿಣ ಆಫ್ರಿಕಾದ ಅಂಪೈರ್ ಮರೇಸ್ ಎರಾಸ್ಮಸ್ ಅವರು ವರ್ಷದ ಅತ್ಯುತ್ತಮ ತೀರ್ಪುಗಾರ ಪ್ರಶಸ್ತಿಗೆ ಭಾಜನರಾಗಿದ್ದರೆ, ಆಫ್ಘಾನಿಸ್ತಾನದ ಮಹಮದ್ ಶಹಜಾದ್‍ಗೆ ಐಸಿಸಿ ಅಫಿಲಿಯೇಟ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ.
ಐಸಿಸಿಯ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾದ ಪರವಾಗಿ ಅಶ್ವಿನ್‍ಗೆ ಮಾತ್ರ ಸ್ಥಾನ ಲಭಿಸಿದ್ದು, ಏಕದಿನ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾಗೆ ಸ್ಥಾನ ಸಿಕ್ಕಿದೆ.
ವಿಶೇಷ ಏನೆಂದರೆ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ನಾಯಕನಾಗಿರುವ ವಿರಾಟ್ ಕೊಹ್ಲಿ ಐಸಿಸಿ ವರ್ಷದ ಏಕದಿನ ತಂಡದ ನಾಯಕರಾಗಿ ಆಯ್ಕೆ ಆಗಿದ್ದಾರೆ.