ಚೆನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಸ್ನೇಹಿತೆ ಶಶಿಕಲಾ ಥೇಣಿಯ ನಿವಾಸಿಗಳಾದ ದಂಪತಿಯ ಮಗುವಿಗೆ ಜಯಲಲಿತಾ ಎಂದು ನಾಮಕರಣ ಮಾಡಿದ್ದಾರೆ.
ತಮಿಳುನಾಡಿನಲ್ಲಿ ದ್ರಾವಿಡ ಪಕ್ಷದ ಕಾರ್ಯಕರ್ತರು ತಮ್ಮ ಮಕ್ಕಳಿಗೆ ಪಕ್ಷದ ನಾಯಕರಿಂದ ನಾಮಕರಣ ಮಾಡಿಸಲು ಹಾತೊರೆಯುತ್ತಾರೆ. ಬಹಳಷ್ಟು ಮಂದಿ ಪಕ್ಷದ ನಾಯಕರು ಮಕ್ಕಳಿಗೆ ಹೆಸರಿಡಲೆಂದು ತಿಂಗಳುಗಟ್ಟಲೆ ಅವರ ಅಪಾಯಿಂಟ್‍ಮೆಂಟ್‍ಗಾಗಿ ಕಾಯುತ್ತಾರೆ. ಸಾರ್ವಜನಿಕ ಸಭೆಗಳಲ್ಲಿ, ಚುನಾವಣಾ ಪ್ರಚಾರದ ವೇಳೆ ಪಕ್ಷದ ನಾಯಕರು ಮಕ್ಕಳಿಗೆ ಹೆಸರಿಡುತ್ತಾರೆ. ಎಐಎಡಿಎಂಕೆ ಪಕ್ಷದಲ್ಲಿ ಜಯಲಲಿತಾ ಅವರು ಮಕ್ಕಳಿಗೆ ಹೆಸರಿಡುವುದಲ್ಲಿ ಪ್ರಸಿದ್ಧರಾಗಿದ್ರು.
ಕಳೆದ ಭಾನುವಾರ ಥೇಣಿಯಲ್ಲಿ ಆಟೋ ಡ್ರೈವರ್ ಸೆಂತಿಲ್ ಕುಮಾರ್ ಮತ್ತು ಅವರ ಪತ್ನಿ ಗಾಯತ್ರಿ ಅವರು ತಮ್ಮ ಮಗಳಿಗೆ ಶಶಿಕಲಾ ಅವರು ಹೆಸರಿಡಲೆಂದು ದಿವಂಗತ ಜಯಲಲಿತಾ ಅವರ ಪೋಯೆಸ್ ಗಾರ್ಡನ್ ಮನೆಗೆ ಹೋಗಿದ್ದರು. ಅಲ್ಲಿ ಈ ದಂಪತಿಗೆ ಆಶ್ಚರ್ಯವೇ ಕಾದಿತ್ತು. ಶಶಿಕಲಾ ಅವರು ಮಗುವನ್ನು ಕೈಯಲ್ಲಿ ಎತ್ತಿಕೊಂಡು ‘ಜಯಲಲಿತಾ’ ಎಂದು ನಾಮಕರಣ ಮಾಡಿದ್ರು.
ಈ ಹಿಂದೆ ಯಾರನ್ನು “ಅಮ್ಮ” ಎಂದು ಕರೆಯುತ್ತಿದ್ದೆವೋ ಅವರ ಹೆಸರನ್ನು ನಮ್ಮ ಮಗುವಿಗೆ ಇಟ್ಟಿರುವುದು ನಮ್ಮ ಪುಣ್ಯ. ನಮ್ಮ ಮಗಳು ಅಮ್ಮ ನಷ್ಟೆ ಹೆಸರು ಮಾಡಲಿ ಎಂದು ದಂಪತಿ ಸಂತಸ ವ್ಯಕ್ತಪಡಿಸಿದ್ರು.