ಬೆಂಗಳೂರು: ಮಾಗಡಿ ಬಳಿಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮಾಸ್ತಿಗುಡಿ ಚಿತ್ರದ ವೇಳೆ ಹೆಲಿಕಾಪ್ಟರ್‍ನಿಂದ ಧುಮುಕಿದ್ದ ಇಬ್ಬರು ಸಾಹಸ ಕಲಾವಿದರು ಮೃತಪಟ್ಟಿದ್ದಾರೆ.
ಅನಿಲ್ ಮತ್ತು ಮತ್ತು ಉದಯ್ ಮೃತಪಟ್ಟ ಇಬ್ಬರು ಕಲಾವಿದರು. ಖಳ ನಟರಿಬ್ಬರು ಮೃತಪಟ್ಟಿದ್ದಾರೆ ಎಂದು ತಾವರಕೆರೆ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ತಿಳಿಸಿದ್ದಾರೆ.
ಏನಿದು ಘಟನೆ?
ಸೋಮವಾರ ಬೆಳಗ್ಗೆಯಿಂದಲೇ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ತಯಾರಿ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆಯುತಿತ್ತು. ಮಧ್ಯಾಹ್ನ 2.15ರ ಶೂಟಿಂಗ್ ವೇಳೆ ಅನಿಲ್ ಮತ್ತು ಉದಯ್ 100 ಮೀಟರ್ ಎತ್ತರದಿಂದ ಹೆಲಿಕಾಪ್ಟರ್‍ನಿಂದ ನೀರಿಗೆ ಜಿಗಿದಿದ್ದಾರೆ. ಇವರ ಜೊತೆ ದುನಿಯಾ ವಿಜಯ್ ಜಿಗಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ದುನಿಯ ವಿಜಯ್ ನೀರಿಗೆ ಬಿದ್ದ ಮೇಲೆ ಈಜಿಕೊಂಡು ಮೇಲಕ್ಕೆ ಬಂದಿದ್ದಾರೆ.
ನಾಗಶೇಖರ್ ನಿರ್ದೇಶನದಲ್ಲಿ ಚಿತ್ರೀಕರಣವಾಗುತ್ತಿರುವ ಮಾಸ್ತಿಗುಡಿ ಚಿತ್ರಕ್ಕೆ ಮಾಸ್ಟರ್ ಡಾ. ರವಿವರ್ಮಾ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಸ್ಟಂಟ್ ಕಲಾವಿದರಾಗಿದ್ದ ಕಾರಣ ಇಬ್ಬರು ಶೂಟಿಂಗ್ ವೇಳೆ ಲೈಫ್ ಜಾಕೆಟ್ ಧರಿಸಿರಲಿಲ್ಲ.
ಸಿದ್ಧತೆ ನಡೆದಿತ್ತು: ಚಿತ್ರದ ಶೂಟಿಂಗ್ ಮೊದಲು ಸ್ಥಳೀಯ ಈಜುಗಾರರು ನೀರಿನಲ್ಲಿ ಆಳ ಎಷ್ಟಿದೆ ಎನ್ನುವುದನ್ನು ಕಲಾವಿದರಿಗೆ ತಿಳಿಸಿದ್ದರು. ಅಷ್ಟೇ ಅಲ್ಲದೇ 20 ಮಂದಿ ಈಜುಗಾರರು ಇಲ್ಲಿ ಸೇರಿದ್ದರು. ರಕ್ಷಣೆಗಾಗಿ ಬೋಟ್‍ಗಳನ್ನು ತೆಗೆದುಕೊಂಡು ಬಂದಿದ್ದರು.