– ರುದ್ರೇಶ್ ಕೊಲೆ ಪ್ರಕರಣ: ತಾಕತ್ತಿದ್ರೆ ಎನ್‍ಐಎಯಿಂದ ತನಿಖೆ ಮಾಡಿಸಿ ಎಂದ ಕರಂದ್ಲಾಜೆ
ಬೆಂಗಳೂರು: ಕೇಂದ್ರ ಸಚಿವ ಸದಾನಂದಗೌಡ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ಮುಖಂಡರ ಸರಣಿ ಹತ್ಯೆಗಳಾಗುತ್ತಿದ್ದರೂ ರಾಜ್ಯ ಸರ್ಕಾರ ಪರೋಕ್ಷವಾಗಿ ಕೊಲೆಗಡುಕರ ಬೆಂಬಲಕ್ಕೆ ನಿಂತಿದೆ ಎಂದು ಡಿವಿಎಸ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದ ಪರಿಸ್ಥಿತಿ ಪಾಕಿಸ್ತಾನಕ್ಕಿಂತಲೂ ಹೆಚ್ಚು ಅಪಾಯಕಾಯಾಗಿದ್ದು, ರಾಜ್ಯ ಸರ್ಕಾರ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಕೇಂದ್ರ ಹಸ್ತಕ್ಷೇಪ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಹೆಬ್ಬಗೋಡಿಯಲ್ಲಿ ನಡೆದ ಬಿಜೆಪಿ ಪ್ರಶಿಕ್ಷಣಾ ಕಾರ್ಯಗಾರದಲ್ಲಿ ಮಾತನಾಡಿದ ಬಿಜೆಪಿಯ ಮುಖಂಡ ಆರ್. ಅಶೋಕ್, ರಾಜ್ಯದಲ್ಲಿ ಬಿಜೆಪಿ ಬೆಂಬಲಿತರ ಸರಣಿ ಕೊಲೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಡುತ್ತಿದೆ. ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಕೇಂದ್ರಕ್ಕೆ ವರದಿ ನೀಡಬೇಕು. ರುದ್ರೇಶ್ ಹತ್ಯೆ ಹಿಂದೆ ಇರುವ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸದಂತೆ ರಾಜ್ಯ ಸರ್ಕಾರ ಪೋಲಿಸರ ಮೇಲೆ ಒತ್ತಡ ಹಾಕುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದರು.
ತಾಕತ್ತಿದ್ರೆ ಎನ್‍ಐಎಯಿಂದ ತನಿಖೆ ಮಾಡಿಸಿ: ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಸಚಿವ ರೋಷನ್ ಬೇಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ, ನನ್ನ ಹೇಳಿಕೆಗೆ ನಾನು ಬದ್ದ. ಬಂಧಿತರು ಕಾಂಗ್ರೆಸ್ ಮುಖಂಡರ ಹೆಸರು ಹೇಳಿದ್ದಾರೆ. ಕೇರಳದ ಮಾದರಿಯಲ್ಲಿ ರಾಜಕೀಯ ಹತ್ಯೆಗಳು ನಡೆಯುತ್ತಿವೆ. ನಿಜವಾಗಿಯೂ ತಾಕತ್ತಿದ್ದರೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಮಾಡಿಸಿ. ಆರೋಪಿಗಳು ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸಾಬೀತಾದರೆ ನಾನೇ ಅವರಿಗೆ ಹಾರ ಹಾಕ್ತೀನಿ ಅಂದ್ರು. ಮೈಸೂರು ದಸರಾ ಆಚರಿಸಲು ಬರದ ನೆಪ ನೀಡುತ್ತಾರೆ. ಟಿಪ್ಪು ಜಯಂತಿ ಆಚರಿಸಲು ಬರದ ನೆನಪು ಇರುವುದಿಲ್ಲ. ರಾಜ್ಯದಲ್ಲಿ ಕೋಮುಭಾವನೆ ಹರಡಲು ಸರ್ಕಾರ ಮುಂದಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೋಭಾ ಹೇಳಿಕೆಗೆ ಬಿಎಸ್‍ವೈ ಸಮರ್ಥನೆ: ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸಂಸದೆ ಶೋಭಾ ಕರಂದ್ಲಾಜೆಯವರ ಮಾತನ್ನು ಸಮರ್ಥಿಸಿಕೊಂಡ್ರು. ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರ ಹತ್ಯೆಗಳು ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿವೆ. ಟಿಪ್ಪು ಜಯಂತಿ ಆಚರಣೆಯ ಮೂಲಕ ಸರ್ಕಾರ ರಾಜ್ಯದಲ್ಲಿ ಕೋಮು ಭಾವನೆಯನ್ನು ಸೃಷ್ಟಿಸಲು ಪ್ರಯತ್ನ ಮಾಡುತ್ತದೆ ಎಂದು ಟಿಪ್ಪು ಜಯಂತಿ ಆಚರಣೆಯ ವಿರುದ್ಧ ನವೆಂಬರ್ 8 ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ತನ್ನ ತಪ್ಪು ತಿದ್ದುಕೊಳ್ಳದಿದ್ರೆ ಜನರೇ ಬುದ್ದಿ ಕಲಿಸುತ್ತಾರೆ ಅಂತ ಬಿಎಸ್‍ವೈ ಹೇಳಿದ್ರು.
ಇಂದು ನಡೆದ ಪ್ರಶಿಕ್ಷಣ ಶಿಬಿರಕ್ಕೆ ಈಶ್ವರಪ್ಪ ಗೈರು ವಿಚಾರ ಹಿನ್ನಲೆಯಲ್ಲಿ ಮಾತನಾಡಿದ ಬಿಎಸ್‍ವೈ, ಈಶ್ವರಪ್ಪನವರ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಅನಂತಕುಮಾರ್ ಮತ್ತು ನನ್ನನ್ನೂ ಅತಿಥಿಗಳಾಗಿ ಕರೆದಿದ್ದರು. ಶಿಬಿರ ಇರುವುದರಿಂದ ನಾವು ಇಲ್ಲಿಗೆ ಬಂದಿದ್ದೇವೆ. ಈಶ್ವರಪ್ಪ ಶಿಬಿರಕ್ಕೆ ಬರದೆ ಇರುವ ವಿಚಾರದ ಬಗ್ಗೆ ತಪ್ಪು ಸಂದೇಶ ರವಾನೆ ಆಗುವುದು ಬೇಡ ಎಂದು ಹೇಳಿದರು.