ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿಯೊಂದು ವಿಷಯದಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಶನಿವಾರ ವ್ಯಂಗ್ಯವಾಡಿದ್ದಾರೆ.
ಸಮಾನ ಹುದ್ದೆ- ಸಮಾನ ಪಿಂಚಣಿ ವಿಚಾರದಲ್ಲಿ ಹಾಗೂ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಮಾಜಿ ಸೈನಿಕ ರಾಮ್ ಕಿಶನ್ ಗ್ರೇವಾಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೆಜ್ರೀವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರತಿನಿತ್ಯ ಒಂದಲ್ಲ ಒಂದು ವಿಷಯದಲ್ಲಿ ಟೀಕಿಸುವುದರ ಹಿನ್ನಲೆಯಲ್ಲಿ ನಾಯ್ಡು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಪ್ರಚಾರಕ್ಕಾಗಿ ಪ್ರತಿಯೊಂದು ವಿಚಾರದಲ್ಲೂ ಮೋದಿಯನ್ನು ಎಳೆದು ತರುತ್ತಿರುವುದು ಸರಿಯಲ್ಲ. ಈ ಮೊದಲು ಪ್ರತಿಯೊಂದು ವಿಚಾರದಲ್ಲಿಯೂ ಆರ್.ಎಸ್.ಎಸ್‍ನನ್ನು ದೂಷಿಸಲಾಗುತ್ತಿತ್ತು. ಇದೀಗ ಪ್ರಧಾನಿಯವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಮೊದಲು ಮಳೆ ಬಾರದಿದ್ದಲ್ಲಿ ಅಥವಾ ಯಾರಿಗಾದರೂ ಮಕ್ಕಳಾಗದಿದ್ದಲ್ಲಿ ಆರ್‍ಎಸ್‍ಎಸ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಕೇಜ್ರಿ, ರಾಹುಲ್ ಅವರ ಚಿತ್ತ ಇದೀಗ ಮೋದಿಯತ್ತ ಹರಿದಿದೆ. ಈ ಮೂಲಕ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂಬುವುದಾಗಿ ನಾಯ್ಡು ದೂರಿದ್ದಾರೆ.