ಬೆಂಗಳೂರು: ಆಕರ್ಷಕ ಶಾಲಾ ಕಟ್ಟಡ, ಶಾಲೆಯ ಆವರಣದಲ್ಲಿ ಸಂಪೂರ್ಣ ಸಿಸಿ ಕ್ಯಾಮೆರಾ ಕಣ್ಗಾವಲು. ಸ್ಮಾರ್ಟ್ ಕ್ಲಾಸ್‍ನಲ್ಲಿ ಕಲಿಯುತ್ತಿರುವ ಮಕ್ಕಳು. ಅತ್ಯಾಧುನಿಕ ಸೈನ್ಸ್ ಲ್ಯಾಬ್.
ಇದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹುಣಸಮಾರನಹಳ್ಳಿ ಸರ್ಕಾರಿ ಶಾಲೆ ದೃಶ್ಯ. ಖಾಸಗಿ ಶಾಲೆಗಿಂತ ಹತ್ತು ಪಟ್ಟು ಹೈಟೆಕ್ ಆಗಿರೋ ಈ ಶಾಲೆಯನ್ನು ರೂಪಿಸಿರುವುದು ಮುಖ್ಯ ಶಿಕ್ಷಕ ಭದ್ರಯ್ಯ ಮೇಷ್ಟ್ರು.
30 ವರ್ಷಗಳ ಹಿಂದೆ ಈ ಶಾಲೆಗೆ ಬಂದ ಭದ್ರಯ್ಯ ಮೇಷ್ಟ್ರು ಶಾಲೆಯ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದ್ದಾರೆ. ಏರ್‍ಪೋರ್ಟ್ ನಿರ್ಮಾಣಕ್ಕೆ ಶಾಲೆಯ ಜಾಗವನ್ನ ಸರ್ಕಾರ ವಶಪಡಿಸಿಕೊಂಡು ಕಟ್ಟಡ ಕೆಡವಿ ಕೇವಲ 16 ಲಕ್ಷ ರೂ. ಪರಿಹಾರ ನೀಡಿತ್ತು. ಇದನ್ನ ಲೆಕ್ಕಕ್ಕೆ ತೆಗೆದುಕೊಳ್ಳದ ಭದ್ರಯ್ಯ ಮೇಷ್ಟ್ರು ತಮ್ಮ ಹಳೆಯ ಶಿಷ್ಯರು, ಗ್ರಾಮಸ್ಥರು, ದಾನಿಗಳಿಂದ 80 ಲಕ್ಷ ರೂ. ಹಣ ಸಂಗ್ರಹಿಸಿ ಬೃಹತ್ ಕಟ್ಟಡ ಕಟ್ಟಿದರು. ಶಾಲೆಯ ಕಟ್ಟಡಕ್ಕೆ ಸ್ವತಃ ಇವ್ರೆ ಕ್ಯೂರಿಂಗ್ ಮಾಡಿದ್ದಾರೆ.
ಭದ್ರಯ್ಯ ಮೇಷ್ಟ್ರ ಪರಿಶ್ರಮದಿಂದಾಗಿ 1-8 ನೇ ತರಗತಿಯವರೆಗೆ ಸುಮಾರು 450 ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ತರಗತಿಗಳಿಗೆ ಎರಡೆರಡು ಸೆಕ್ಷೆನ್‍ಗಳಿವೆ. ಮಕ್ಕಳಿಗೆ ಪ್ರತಿವರ್ಷ 2 ಜೊತೆ ಶೂ, ಯೂನಿಫಾರ್ಮ್, ಕ್ರೀಡಾ ಡ್ರೆಸ್ ಕೊಡಿಸ್ತಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳಿಗೆ ಜೂಡೋ, ಕುಸ್ತಿಯಂತಹ ಕ್ರೀಡೆಗಳಿಗೆ ವಿಶೇಷ ತರಬೇತಿ ಕೊಡಿಸ್ತಿದ್ದಾರೆ. ಈ ವರ್ಷದಿಂದ ಎಲ್.ಕೆ.ಜಿ. & ಯು.ಕೆಜಿಯನ್ನೂ ಪ್ರಾರಂಭಿಸಿದ್ದಾರೆ.
ಭದ್ರಯ್ಯ ಮೇಷ್ಟ್ರ ಸೇವೆಗೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು ಸಂದಿವೆ. ಅಂದಹಾಗೆ, ಇದೇ 30ಕ್ಕೆ ನಿವೃತ್ತಿಯಾಗಲಿರುವ ಭದ್ರಯ್ಯ ಇನ್ನೂ ಎರಡು ವರ್ಷ ವೇತನರಹಿತವಾಗಿ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಪ್ರಚಾರ ಬಯಸದೇ ಮಕ್ಕಳ ಶಿಕ್ಷಣಕ್ಕೆ ಜೀವನವನ್ನು ಮುಡಿಪಾಗಿಟ್ಟ ಭದ್ರಯ್ಯ ಅವರಿಗೆ ನಮ್ಮ ಕಡೆಯಿಂದ ಹ್ಯಾಟ್ಸಫ್…