ಚೆನ್ನೈ: ಕಾವೇರಿ ವಿಚಾರದಲ್ಲಿ ಬೆನ್ನು ಬಿಡದೆ ಬೇತಾಳನಂತೆ ಕಾಡ್ತಿರುವ ತಮಿಳುನಾಡಿನ ಹೋರಾಟ ಮತ್ತೊಂದು ರೀತಿಯಲ್ಲಿ ಮುಂದುವರೆದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ 48 ತಾಲೂಕುಗಳಲ್ಲಿ 42 ತಾಲೂಕಗಳನ್ನ ಬರಪೀಡಿತ ಪ್ರದೇಶ ಅಂತಾ ಕರ್ನಾಟಕ ಸರ್ಕಾರ ಘೋಷಣೆ ಮಾಡಿತ್ತು. ಇದಕ್ಕೆ ತಮಿಳುನಾಡು ಕ್ಯಾತೆ ತೆಗೆದಿದ್ದು, ಸರ್ಕಾರದ ಈ ಘೋಷಣೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಕರ್ನಾಟಕ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ 42 ಬರಪೀಡಿತ ತಾಲೂಕುಗಳು ಅಂತಾ ಘೋಷಿಸಿದೆಯೆಂದು ಅಕ್ಟೋಬರ್ 17ರಂದು ಕೇಂದ್ರ ತಜ್ಞರ ತಂಡ ಸುಪ್ರೀಂಕೋರ್ಟ್‍ಗೆ ಹೇಳಿದೆ. ಆದ್ರೆ ಕರ್ನಾಟಕದ ಹೇಳಿಕೆಯನ್ನು ತಮಿಳುನಾಡು ಒಪ್ಪಿಕೊಂಡಿಲ್ಲ.
ಮುಂಗಾರು ಬೆಳೆ ಅವಧಿಯಲ್ಲಿ ಕರ್ನಾಟಕಕ್ಕೆ 193 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಅವಕಾಶ ಇದೆ. ಈಗಾಗಲೇ 112 ಅಡಿ ಟಿಎಂಸಿ ಅಡಿ ನೀರನ್ನ ನೀರಾವರಿಗಾಗಿ ಹಾಗೂ 12 ಟಿಎಂಸಿ ಅಡಿ ನೀರನ್ನ ಕುಡಿಯಲು ಬಳಸಿಕೊಂಡಿದೆ. ನೀರಾವರಿಗಾಗಿ ಇನ್ನೂ 36.38 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಕರ್ನಾಟಕ ತೀರ್ಮಾನಿಸಿದೆ. ಇದರೊಂದಿಗೆ ಕರ್ನಾಟಕ ನೀರಾವರಿಗಾಗಿ 149 ಟಿಎಂಸಿ ಅಡಿ ನೀರನ್ನ ಬಳಸಿಕೊಂಡಂತಾಗುತ್ತೆ. ಹೀಗಾಗಿ ಕರ್ನಾಟಕ ಕಾವೇರಿ ಕೊಳ್ಳದ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಿದ್ದು ಸರಿಯಲ್ಲ ಎಂದು ಸುಪ್ರೀಂಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದೆ.