ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಅಧ್ಯಯನ ನಡೆಸಲು ಇವತ್ತು ಸಂಜೆ ಕೇಂದ್ರ ಸರ್ಕಾರದ ತಾಂತ್ರಿಕ ಉನ್ನತಾಧಿಕಾರಿಗಳ ಸಮಿತಿ ಬೆಂಗಳೂರಿಗೆ ಆಗಮಿಸಲಿದೆ.
ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದಲ್ಲಿ ಅಕ್ಟೋಬರ್ 7ರಂದು ಅಂದ್ರೆ ನಾಳೆ ಬೆಳಗ್ಗೆ 9.30 ಕ್ಕೆ ಸಭೆ ನಡೆಯಲಿದೆ. ಕಾವೇರಿ ಕೊಳ್ಳದ ಪ್ರದೇಶಗಳಿಗೆ ಭೇಟಿ ನೀಡಲಿರುವ ಸಮಿತಿ ವಸ್ತುಸ್ಥಿತಿ ಬಗ್ಗೆ ಅವಲೋಕಿಸಿ ಅಕ್ಟೋಬರ್ 17ರಂದು ಸುಪ್ರೀಂಕೋರ್ಟ್‍ಗೆ ವರದಿ ಸಲ್ಲಿಸಲಿದೆ.
ತಾಂತ್ರಿಕ ಉನ್ನತಾಧಿಕಾರಿ ಸಮಿತಿಗೆ ರಾಜ್ಯದ ಪ್ರತಿನಿಧಿಗಳಾಗಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮದ ಎಂಡಿ ಚಿಕ್ಕರಾಯಪ್ಪ ಕಾರ್ಯನಿರ್ವಹಿಸಲಿದ್ದಾರೆ. ಈ ಸಮಿತಿ ಡ್ಯಾಂಗಳಲ್ಲಿ ತುಂಬಿರುವ ಹೂಳಿನ ಪ್ರಮಾಣದ ಬಗ್ಗೆಯೂ ಲೆಕ್ಕಾಚಾರ ಹಾಕಬಹುದು ಎಂದು ಹೇಳಲಾಗ್ತಿದೆ. ತಾಂತ್ರಿಕ ಉನ್ನತಾಧಿಕಾರ ತಂಡದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ಮುಖ್ಯ ಎಂಜಿನಿಯರ್ ಇರುತ್ತಾರೆ. ಈ ತಂಡ ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಕೋರ್ಟ್‍ಗೆ ವರದಿ ನೀಡಲಿದೆ.
ಈ ನಡುವೆ ಸುಪ್ರೀಂಕೋರ್ಟ್ ಆದೇಶದಂತೆ ನಾಳೆಯಿಂದ 2 ಸಾವಿರ ಕ್ಯೂಸೆಕ್ ನೀರು ಅಕ್ಟೋಬರ್ 18ರ ತನಕ ತಮಿಳುನಾಡಿಗೆ ಹರಿಯಲಿದೆ.