ಮೈಸೂರು: ನವರಾತ್ರಿ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿಯ ದರ್ಶನ ಪಡೆದಿದ್ದಾರೆ.
ಇಂದು ಸಂಜೆ 5.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಶಿವರಾಜ್ ಕುಮಾರ್ ಯುವದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ನಾಡ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 7ಕ್ಕೆ ಯುವ ದಸರಾದಲ್ಲಿ ಗಾಯಕ ಬೆನ್ನಿ ದಯಾಳ್‍ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ದಸರಾ ಹಬ್ಬದ ಪ್ರಯುಕ್ತ ಮೈಸೂರಿನ ಪ್ರತಿಯೊಂದು ಸರ್ಕಲ್‍ನಲ್ಲೂ ಈ ಬಾರಿ ವಿಶೇಷ ವಿದ್ಯುತ್ ಅಲಂಕಾರ ಮಾಡಲಾಗಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಅರಮನೆಯ ದಕ್ಷಿಣ ದ್ವಾರದ ಗನ್‍ಹೌಸ್ ಸರ್ಕಲ್‍ನಲ್ಲಿ ಶ್ರೀಕಂಠದತ್ತ ಒಡೆಯರ್ ಪ್ರತಿಮೆಯನ್ನು ವಿದ್ಯುತ್ ದೀಪದಿಂದ ಆಲಂಕರಿಸಲಾಗಿದೆ.
ರಾಮಸ್ವಾಮಿ ವೃತ್ತದಲ್ಲಿ ಅರಮನೆಯ ಚಿತ್ರಣ ಅನಾವರಣಗೊಂಡಿದೆ. ರೈಲ್ವೇ ನಿಲ್ದಾಣದ ಬಳಿ ಸಂಸತ್ ಭವನದ ಲೈಟಿಂಗ್ ಮನಸೂರೆಗೊಳಿಸುತ್ತಿದೆ. ಪಾರಂಪರಿಕ ಕಟ್ಟಡಗಳಿಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಲ್‍ಗೆ, ಬೃಹತ್ ಮರಗಳಿಗೂ ಲೈಟಿಂಗ್ ವ್ಯವಸ್ಥೆಯನ್ನ ಚೆಸ್ಕಾಂ ವಿಶೇಷ ರೀತಿಯಲ್ಲಿ ಮಾಡಿ ಸೈ ಎನಿಸಿಕೊಂಡಿದೆ.