ನವದೆಹಲಿ: ಇಬ್ಬರು ಯುವಕರನ್ನು ಕಟ್ಟಿಹಾಕಿ ಇಬ್ಬರು ಯುವತಿಯರನ್ನು 5 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಆತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ.
ಘಟನೆಯ ವಿವರ
ಬುಧವಾರ ರಾತ್ರಿ 8.30ರ ವೇಳೆಗೆ ದೆಹಲಿಯ ಹೊರವಲಯದ ಅಮನ್ ವಿಹಾರ್ ಎಂಬಲ್ಲಿ 18, 17 ವರ್ಷ ಇಬ್ಬರು ಯುವತಿಯರು ತಮ್ಮ ಇಬ್ಬರು ಸ್ನೇಹಿತರ ಜೊತೆ ಮರದ ಕೆಳಗಡೆ ಕುಳಿತುಕೊಂಡು ಮಾತನಾಡುತ್ತಿದ್ದರು.
ಈ ವೇಳೆ ಅಲ್ಲಿಗೆ ಆಗಮಿಸಿದ ದುಷ್ಕರ್ಮಿಗಳು ಕ್ಷುಲ್ಲಕ ವಿಚಾರಕ್ಕೆ ಯುವಕರ ಜೊತೆ ಜಗಳ ಮಾಡಿಕೊಂಡಿದ್ದಾರೆ. ಜಗಳ ಜೋರಾದ ಬಳಿಕ ಕಿರಾತಕರು ಇಬ್ಬರು ಯುವಕರನ್ನು ಕಟ್ಟಿ ಹಾಕಿ ಯುವತಿಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಕೃತ್ಯ ಎಸಗಿದ ಬಳಿಕ ದೂರು ನೀಡಿದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಯುವತಿಯರಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಗ್ಯಾಂಗ್‍ರೇಪ್ ಬಳಿಕ ಯುವಕರನ್ನು ಬಿಡಿಸಿದ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ.
ಇಬ್ಬರು ಯುವತಿಯರು ಕಟ್ಟಡ ಕಾರ್ಮಿಕರ ಮಕ್ಕಳಾಗಿದ್ದು, ಮೆಟ್ರೋದಲ್ಲಿ ನಿರ್ಮಾಣ ಕೆಲಸ ಮಾಡುತ್ತಿದ್ದ ತಮ್ಮ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
The post ಸ್ನೇಹಿತರನ್ನು ಕಟ್ಟಿ ಹಾಕಿ ದೆಹಲಿಯಲ್ಲಿ ಇಬ್ಬರ ಮೇಲೆ ಗ್ಯಾಂಗ್‍ರೇಪ್ appeared first on Kannada Public tv.