ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡಿನ ಸಾರ್ವಜನಿಕರು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಬೇಕು. ಈ ಆದೇಶವನ್ನು ವಿರೋಧಿಸಿ ಬಂದ್, ಪ್ರತಿಭಟನೆ ನಡೆಯದಂತೆ ಸರ್ಕಾರಗಳನ್ನು ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಎರಡೂ ರಾಜ್ಯಗಳಿಗೆ ಸೂಚನೆ ನೀಡಿದೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿರ್ದೇಶನ ಸೂಚಿಸುವ ಸಂಬಂಧ ತಮಿಳುನಾಡು ಮೂಲದ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಸುಪ್ರೀ ಕೋರ್ಟ್‍ನ ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ.ಲಲಿತ್ ಉದಯ್ ಪೀಠದಲ್ಲಿ ನಡೆಯಿತು.
ಕರ್ನಾಟಕ ಮತ್ತು ತಮಿಳುನಾಡು ಕಾನೂನಿನ ಘನತೆ, ಗೌರವ ಎತ್ತಿಹಿಡಿಯಬೇಕು. ಕಾನೂನು ಉಲ್ಲಂಘನೆಯಾಗದಂತೆ, ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಎರಡೂ ರಾಜ್ಯಗಳಿಗೆ ಸೂಚಿಸಿ ವಿಚಾರಣೆಯನ್ನು ಸೆ.20ಕ್ಕೆ ಮುಂದೂಡಿತು.
ಹಿಂದೆ ಸರಿದ ಜಡ್ಜ್: ಗುರುವಾರ ಬೆಳಗ್ಗೆ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ.ನಾಗಪ್ಪನ್ ಪೀಠದಲ್ಲಿ ಪಿಐಎಲ್ ವಿಚಾರಣೆ ಬಂದಿತ್ತು. ನ್ಯಾ.ನಾಗಪ್ಪನ್ ಈ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ವಿಚಾರಣೆ ಮಧ್ಯಾಹ್ನ 3.30ಕ್ಕೆ ಮುಂದೂಡಿಕೆ ಆಗಿತ್ತು.
ಅರ್ಜಿಯಲ್ಲಿ ಏನಿದೆ?:
ಕಾವೇರಿ ನೀರು ಹಂಚಿಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಉಂಟಾದ ಅಶಾಂತ ಪರಿಸ್ಥಿತಿ, ಉಗ್ರ ಪ್ರತಿಭಟನೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು. ಪ್ರತಿಭಟನೆ ವೇಳೆ ಸಂಭವಿಸುವ ಆಸ್ತಿ ಹಾನಿಗೆ ಪ್ರತಿಭಟನಾ ನಿರತರೇ ಕಾರಣರಾಗುತ್ತಾರೆ. ಹಾಗೂ ನಷ್ಟವನ್ನು ಅವರೇ ಭರಿಸುವಂತೆ ಸೂಚನೆ ನೀಡಬೇಕೆಂದು ಶಿವಕುಮಾರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಸೆ.5 ರಂದು ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರನ್ನು ಬಿಡುವಂತೆ ಆದೇಶಿಸಿದ್ದ ಸುಪ್ರೀಂ ಕೋರ್ಟ್ ಸೆ.12ರಂದು ಸುಪ್ರೀಂ ಕೋರ್ಟ್ ಹಿಂದಿನ ಆದೇಶವನ್ನು ಬದಲಿಸಿ, 15 ಸಾವಿರ ಕ್ಯೂಸೆಕ್ ಬದಲು 12 ಸಾವಿರ ಕ್ಯೂಸೆಕ್ ನೀರನ್ನು ಸೆ.20ರವರೆಗೂ ಹರಿಸುವಂತೆ ತೀರ್ಪು ನೀಡಿತ್ತು. ಈ ತೀರ್ಪು ಬಂದ ಬಳಿಕ ಬೆಂಗಳೂರಿನ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು.
The post ಬಂದ್ ನಡೆಯದಂತೆ ನೋಡಿಕೊಳ್ಳಿ; ಕರ್ನಾಟಕ, ತಮಿಳುನಾಡಿಗೆ ಸುಪ್ರೀಂ appeared first on Kannada Public tv.